

ಹ್ಯಾಮಿಲ್ಟನ್: ಇಲ್ಲಿನ ಸೆಡಾನ್ ಪಾರ್ಕ್ನಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಭಾರತ ರೋಹಿತ್ ಶರ್ಮ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ 180ರನ್ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾಗೆ ರೋಹಿತ್ ಶರ್ಮ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ 89 ರನ್ಗಳು ಉತ್ತಮ ಜತೆಯಾಟವಾಡಿದರು. ಕಳೆದೆರಡು ಪಂದ್ಯದಲ್ಲಿ ಅರ್ಧಶತಕ ದಾಖಲಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಹುಲ್ 27 ರನ್ಗಳಿ ಔಟಾದರು. ಇದಾದ ಕೆಲವೇ ಕ್ಷಣಗಳಲ್ಲಿ 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 65 ರನ್ ಗಳಿಸಿದ್ದ ರೋಹಿತ್ ಕೂಡ ಔಟಾದರು. ಇದರ ಬೆನ್ನಲ್ಲೇ ಶಿವಂ ದುಬೆ(3) ಕೂಡ ಪೆವಲಿಯನ್ ಸೇರಿದರು.
ತಂಡದ ಮೊತ್ತ 96 ರನ್ ಆಗಿದ್ದಾಗಲೇ ಟೀಮ್ ಇಂಡಿಯಾ ಪ್ರಮುಖ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ವೇಳೆ ಕ್ರೀಸ್ನಲ್ಲಿದ್ದ ಶ್ರೇಯಸ್ ಅಯ್ಯರ್(17) ಮತ್ತು ನಾಯಕ ವಿರಾಟ್ ಕೊಹ್ಲಿ(38) ರನ್ ಗಳಿಸಿ ತಂಡದ ಮೊತ್ತಕ್ಕೆ ಕೊಂಚ ಚೇತರಿಕೆ ನೀಡಿದರು. ಉಳಿದಂತೆ ಮನೀಶ್ ಪಾಂಡೆ(14*) ಮತ್ತು ರವೀಂದ್ರ ಜಡೇಜಾ(10*) ಅಜೇಯರಾಗಿ ಉಳಿದರು.
ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕುವ ಮೂಲಕ ಕಿವೀಸ್ ಪಡೆಗೆ 180 ರನ್ಗಳ ಸವಾಲಿನ ಗುರಿಯನ್ನು ನೀಡಿದೆ.
ಕಿವೀಸ್ ಪರ ಹಮೀಶ್ ಬೆನ್ನೆಟ್ ಮೂರು ವಿಕೆಟ್ ಕಬಳಿಸಿ ಮಿಂಚಿದರೆ, ಮಿಚೆಲ್ ಸ್ಯಾಂಟ್ನರ್ ಮತ್ತು ಕೊಲಿನ್ ಡಿ ಗ್ರ್ಯಾಂಡ್ಹೋಮ್ ತಲಾ ಒಂದು ವಿಕೆಟ್ಗೆ ತೃಪ್ತಿಪಟ್ಟರು. (ಏಜೆನ್ಸೀಸ್)