

ಕೆಸ್ಟ್ಚರ್ಚ್: ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ನ ದಿವಂಗತ ದಿಗ್ಗಜ ಬ್ಯಾಟರ್ಗಳಾದ ಮಾರ್ಟಿನ್ ಕ್ರೋವ್ ಮತ್ತು ಗ್ರಹಾಂ ಥೋರ್ಪೆ ಸ್ಮರಣಾರ್ಥವಾಗಿ ಉಭಯ ತಂಡಗಳ ಟೆಸ್ಟ್ ಸರಣಿಗೆ ಕ್ರೋವ್-ಥೋರ್ಪೆ ಟ್ರೋಫಿ ಎಂದು ನಾಮಕರಣ ಮಾಡಲಾಗಿದೆ.
ಉಭಯ ತಂಡಗಳ ನಡುವೆ ಗುರುವಾರದಿಂದ 3 ಪಂದ್ಯಗಳ ಸರಣಿಯ ನಡೆಯಲಿದ್ದು, ಈ ಹೆಸರಿನ ಟ್ರೋಫಿಗಾಗಿ ನಡೆಯಲಿರುವ ಮೊದಲ ಸರಣಿ ಎನಿಸಿದೆ. ಮಾರ್ಟಿನ್ ಕ್ರೋವ್ ಕಿವೀಸ್ ಪರ 77 ಟೆಸ್ಟ್ಗಳಲ್ಲಿ 17 ಶತಕಗಳ ಸಹಿತ 5,444 ರನ್ ಬಾರಿಸಿದ್ದರೆ, ಥೋರ್ಪೆ ಇಂಗ್ಲೆಂಡ್ ಪರ 100 ಟೆಸ್ಟ್ಗಳಲ್ಲಿ 16 ಶತಕಗಳ ಸಹಿತ 6,744 ರನ್ ಗಳಿಸಿದ್ದರು.
ಉಭಯ ಆಟಗಾರರ ಕುಟುಂಬದವರು ನೀಡಿರುವ ಅವರಿಬ್ಬರ ಬ್ಯಾಟ್ಗಳಿಂದ ಟ್ರೋಫಿಯನ್ನು ರಚಿಸಲಾಗಿದೆ. ಕ್ರೋವ್ 1994ರಲ್ಲಿ ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಮತ್ತು ಥೋರ್ಪೆ 1997ರಲ್ಲಿ ಆತಿಥೇಯ ಕಿವೀಸ್ ವಿರುದ್ಧ ಸತತ 2 ಶತಕ ಸಿಡಿಸಿದ ಬ್ಯಾಟ್ ಇದಾಗಿದೆ.