

ನಾಟಿಂಗ್‌ಹ್ಯಾಂ: ಸರ್ವಾಂಗೀಣ ನಿರ್ವಹಣೆ ತೋರಿದ ಪ್ರವಾಸಿ ನ್ಯೂಜಿಲೆಂಡ್ ತಂಡ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಆರು ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಟಿಮ್ ಸೌಥಿ ಬಳಗ 4 ಪಂದ್ಯಗಳ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮೊಯಿನ್ ಅಲಿ ಹಂಗಾಮಿ ಸಾರಥ್ಯದ ಇಂಗ್ಲೆಂಡ್ ತಂಡ, ವಿಕೆಟ್ ಕೀಪರ್-ಬ್ಯಾಟರ್ ಜಾನಿ ಬೇರ್‌ಸ್ಟೋ (73 ರನ್, 41 ಎಸೆತ, 5 ಬೌಂಡರಿ, 6 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಬಲದಿಂದ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 105 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ಬಳಿಕ ದಿಢೀರ್ ಕುಸಿತ ಕಂಡು 8 ವಿಕೆಟ್‌ಗೆ 175 ರನ್ ಪೇರಿಸಿತು. ಪ್ರತಿಯಾಗಿ ಟಿಮ್ ಸೀರ್ಟ್ (48) ಹಾಗೂ ಗ್ಲೆನ್ ಫಿಲಿಪ್ಸ್ (42) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕಿವೀಸ್ 17.2 ಓವರ್‌ಗಳಲ್ಲಿ 4 ವಿಕೆಟ್‌ಗೆ 179 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಶುಕ್ರವಾರ 4 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.
ಇಂಗ್ಲೆಂಡ್: 8 ವಿಕೆಟ್‌ಗೆ 175 (ಬೇರ್‌ಸ್ಟೋ 73, ವಿಲ್ ಜ್ಯಾಕ್ಸ್ 16, ಮಲಾನ್ 26, ಬ್ರೂಕ್ 4, ಲಿವಿಂಗ್‌ಸ್ಟೋನ್ 26, ಸ್ಯಾಂಟ್ನರ್ 30ಕ್ಕೆ 3, ಇಶ್ ಸೋಧಿ 21ಕ್ಕೆ 2). ನ್ಯೂಜಿಲೆಂಡ್: 17.2 ಓವರ್‌ಗಳಲ್ಲಿ 4 ವಿಕೆಟ್‌ಗೆ 179 (ಫಿನ್ ಅಲೆನ್ 16, ಸೀರ್ಟ್ 48, ಡೆರಿಲ್ ಮಿಚೆಲ್ 14, ಫಿಲಿಪ್ಸ್ 42, ಚಾಪ್‌ಮನ್ 40*, ರೆಹನ್ ಅಹ್ಮದ್ 27ಕ್ಕೆ 2).