ವಿಂಡೀಸ್‌ಗೆ ಜೇಮಿಸನ್ ಬ್ರೇಕ್, ಭಾರಿ ಮುನ್ನಡೆಯತ್ತ ನ್ಯೂಜಿಲೆಂಡ್

jamieson web
Published on

ವೆಲ್ಲಿಂಗ್ಟನ್: ವೇಗಿ ಕೈಲ್ ಜೇಮಿಸನ್ (34ಕ್ಕೆ 5) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆಯತ್ತ ಸಾಗಿದೆ.

ಶನಿವಾರ 6 ವಿಕೆಟ್‌ಗೆ 294 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡ 460 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ವಿಂಡೀಸ್ ತಂಡ ದಿನದಂತ್ಯಕ್ಕೆ 8 ವಿಕೆಟ್‌ಗೆ 124 ರನ್ ಗಳಿಸಿ ಸಂಕಷ್ಟದಲ್ಲಿದೆ. 336 ರನ್ ಹಿನ್ನಡೆಯಲ್ಲಿರುವ ವಿಂಡೀಸ್, ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನೂ 136 ರನ್ ಗಳಿಸಬೇಕಿದೆ. ಜೆರ್ಮೈನ್ ಬ್ಲ್ಯಾಕ್‌ವುಡ್ 69 ರನ್ ಸಿಡಿಸಿ ಪ್ರತಿರೋಧ ತೋರಿದರು. ಉಳಿದಂತೆ ಆರಂಭಿಕ ಜಾನ್ ಕ್ಯಾಂಪ್‌ಬೆಲ್ (14) ಮತ್ತು ಶಮರ ಬ್ರೂಕ್ಸ್ (14) ಮಾತ್ರ ಎರಡಂಕಿ ತಲುಪುವಲ್ಲಿ ಸಫಲರಾದರು.

ಇದಕ್ಕೂ ಮುನ್ನ 117 ರನ್‌ಗಳಿಂದ ದಿನದಾಟ ಮುಂದುವರಿಸಿದ ಹೆನ್ರಿ ನಿಕೋಲ್ಸ್ 174 ರನ್ (280 ಎಸೆತ, 21 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟಾದರು. ನೀಲ್ ವ್ಯಾಗ್ನರ್ ಅಜೇಯ 66 ರನ್ ಬಾರಿಸಿ ನಿಕೋಲ್ಸ್‌ಗೆ ಬೆಂಬಲ ಒದಗಿಸಿದರು. ಶ್ರೀಲಂಕಾ ವಿರುದ್ಧ 162 ರನ್ ಗಳಿಸಿದ್ದು ನಿಕೋಲ್ಸ್ ಅವರ ಹಿಂದಿನ ಗರಿಷ್ಠ ಗಳಿಕೆಯಾಗಿತ್ತು.

ನ್ಯೂಜಿಲೆಂಡ್: 460 (ನಿಕೋಲ್ಸ್ 174, ಜೇಮಿಸನ್ 20, ಸೌಥಿ 11, ವ್ಯಾಗ್ನರ್ 66*, ಬೌಲ್ಟ್ 6, ಜೋಸೆಫ್​ 109ಕ್ಕೆ 3, ಗ್ಯಾಬ್ರಿಯೆಲ್ 93ಕ್ಕೆ 3, ಚೆಮರ್ ಹೋಲ್ಡರ್ 110ಕ್ಕೆ 2, ಚೇಸ್ 54ಕ್ಕೆ 2), ವೆಸ್ಟ್ ಇಂಡೀಸ್: 52 ಓವರ್‌ಗಳಲ್ಲಿ 8 ವಿಕೆಟ್‌ಗೆ 124 (ಕ್ಯಾಂಪ್‌ಬೆಲ್ 14, ಡರೇನ್ ಬ್ರಾವೊ 7, ಬ್ರೂಕ್ಸ್ 14, ಚೇಸ್ 0, ಬ್ಲ್ಯಾಕ್‌ವುಡ್ 69, ಜೇಸನ್ ಹೋಲ್ಡರ್ 9, ಜೇಮಿಸನ್ 34ಕ್ಕೆ 5, ಸೌಥಿ 29ಕ್ಕೆ 3).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net