ಐಪಿಎಲ್​ಗೆ ಬಂದ ಹೊಸ ಸ್ಟಾರ್ಸ್​! 6 ಯುವ ಪ್ರತಿಭೆಗಳಿಗೆ ಒಲಿದ ಕೋಟಿ ಮೌಲ್ಯದ ಅವಕಾಶ...

web ipl new
Published on

ಬೆಂಗಳೂರು: ಕ್ರಿಕೆಟ್​ ಪ್ರತಿಭೆಗಳು ತಾರೆಯರಾಗಿ ಬೆಳೆಯುವ ಜತೆಗೆ ಶ್ರೀಮಂತರೂ ಆಗುವ ವೇದಿಕೆ ಐಪಿಎಲ್​. 18ನೇ ಆವೃತ್ತಿಗೆ ಪೂರ್ವಭಾವಿಯಾಗಿ ನಡೆದ ಮೆಗಾ ಹರಾಜಿನಲ್ಲಿ ಕೆಲ ಹೊಸ ಯುವ ಕ್ರಿಕೆಟಿಗರು ಕೋಟ್ಯಧಿಪತಿಗಳಾಗಿದ್ದು, ಇನ್ನು ವಿಶ್ವದ ಶ್ರೀಮಂತ ಟಿ20 ಲೀಗ್​ ಅಂಗಳದಲ್ಲೂ ಅವರು ಛಾಪು ಮೂಡಿಸುವುದಷ್ಟೇ ಬಾಕಿ ಉಳಿದಿದೆ. ಈ ಬಾರಿ ಹರಾಜಿನಲ್ಲಿ ಗಮನಸೆಳೆದ ಅಂಥ ಕೆಲ ಪ್ರಮುಖ ಯುವ ಕ್ರಿಕೆಟಿಗರ ಸಂಪ್ತ ಮೆಲುಕು ಇಲ್ಲಿದೆ...

ವೈಭವ್​ ಸೂರ್ಯವಂಶಿ (1.10 ಕೋಟಿ ರೂ.) ರಾಜಸ್ಥಾನ

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಆಡಿದ ಅತಿ ಕಿರಿಯ ಭಾರತೀಯರೆನಿಸಿರುವ ಬಿಹಾರದ ಬಾಲಪ್ರತಿಭೆ ವೈಭವ್​ ಸೂರ್ಯವಂಶಿ ಇದೀಗ ಐಪಿಎಲ್​ನಲ್ಲೂ ಆಡಿದ ಅತಿಕಿರಿಯರೆನಿಸುವ ತವಕದಲ್ಲಿದ್ದಾರೆ. 30 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಪಾಲ್ಗೊಂಡ ವೈಭವ್​, 1.10 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್​ ಸೇರುವುದರೊಂದಿಗೆ 13ನೇ ವಯಸ್ಸಿನಲ್ಲೇ ಕೋಟ್ಯಧಿಪತಿ ಆಗಿದ್ದಾರೆ. ಡೆಲ್ಲಿ ತಂಡವೂ ಅವರನ್ನು ಖರೀದಿಸಲು ನಿಕಟ ಪೈಪೋಟಿ ಒಡ್ಡಿತ್ತು. ರಾಜಸ್ಥಾನ ತಂಡದಲ್ಲಿ ದಿಗ್ಗಜ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಆಡಲಿರುವುದು ವೈಭವ್​ಗೆ ಕೋಟಿ ರೂಪಾಯಿಗಿಂತಲೂ ಲಾಭದಾಯಕವೆನಿಸಿದೆ. ಎಡಗೈ ಸ್ಫೋಟಕ ಬ್ಯಾಟರ್​ ಮತ್ತು ಸ್ಪಿನ್ನರ್​ ಆಗಿ ಗಮನಸೆಳೆದಿರುವ ವೈಭವ್​ ಇತ್ತೀಚೆಗೆ ಆಸ್ಟ್ರೆಲಿಯಾ ವಿರುದ್ಧದ 19 ವಯೋಮಿತಿ ಚತುರ್ದಿನ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸಿ ಗಮನಸೆಳೆದಿದ್ದರು. ಕಳೆದ ವರ್ಷ 12 ವರ್ಷ, 284 ದಿನ ವಯಸ್ಸಿನಲ್ಲೇ ಮುಂಬೈ ಎದುರು ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ವೈಭವ್​, ಬಿಹಾರದ ಸಮಸ್ತಿಪುರದ ಸಣ್ಣ ರೈತ ಮತ್ತು ಹಿಂದಿ ಪತ್ರಿಕೆಯ ಅರೆಕಾಲಿಕ ವರದಿಗಾರ ಸಂಜೀವ್​ ಸೂರ್ಯವಂಶಿ ಪುತ್ರರಾಗಿದ್ದಾರೆ. ರಣಜಿಯಲ್ಲಿ ಈಗಾಗಲೆ 5 ಪಂದ್ಯಗಳನ್ನು ಆಡಿರುವ ವೈಭವ್​, ಮುಂಬರುವ 19 ವಯೋಮಿತಿ ಏಷ್ಯಾಕಪ್​ನಲ್ಲೂ ಭಾರತ ಪರ ಆಡಲಿದ್ದಾರೆ. ಬಿಹಾರದ ಲೀಗ್​ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸಿದ ದಾಖಲೆಯೂ ಅವರದಾಗಿದೆ. ವೈಭವ್​ ಈ ಹಿಂದೆ ವಯೋಮಿತಿ ವಿವಾದವನ್ನೂ ಎದುರಿಸಿದ್ದರು.

ಗುರುಜಪ್​ನೀತ್​ ಸಿಂಗ್​ (2.20 ಕೋಟಿ ರೂ.) ಸಿಎಸ್​ಕೆ

ಕೆಲ ವೇಗದ ಬೌಲರ್​ಗಳ ವೃತ್ತೀಜಿವನವನ್ನೇ ಬದಲಾಯಿಸಿರುವ ಸಿಎಸ್​ಕೆ ತಂಡಕ್ಕೆ ಬರೋಬ್ಬರಿ 2.20 ಕೋಟಿ ರೂ. ಮೊತ್ತಕ್ಕೆ ಸೇರ್ಪಡೆಯಾಗಿರುವ 6.3 ಅಡಿ ಎತ್ತರದ ಎಡಗೈ ವೇಗಿ ಗುರುಜಪ್​ನೀತ್​ ಸಿಂಗ್​ ಕೂಡ ಎಂಎಸ್​ ಧೋನಿ ಮಾರ್ಗದರ್ಶನದಲ್ಲಿ ಅಂಥದ್ದೇ ಏಳ್ಗೆ ಕಂಡರೆ ಅಚ್ಚರಿ ಇಲ್ಲ. ಪಂಜಾಬ್​ನ ಲುಧಿಯಾನ ಮೂಲದ ಸಿಖ್​ ಆಗಿರುವ 26 ವರ್ಷದ ಗುರುಜಪ್​ನೀತ್​, 17ನೇ ವಯಸ್ಸಿನಿಂದ ಚೆನ್ನೆ$ ನಿವಾಸಿಯಾಗಿದ್ದು, ಹಾಲಿ ದೇಶೀಯ ಕ್ರಿಕೆಟ್​ ಋತುವಿನಲ್ಲಿ ತಮಿಳುನಾಡು ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದು, 22 ರನ್​ಗಳಿಗೆ 6 ವಿಕೆಟ್​ ಕಬಳಿಸಿ ಸೌರಾಷ್ಟ್ರ ತಂಡವನ್ನು 94 ರನ್​ಗಳಿಗೆ ಆಲೌಟ್​ ಮಾಡಿ ಗಮನಸೆಳೆದಿದ್ದರು. ಪಂಜಾಬ್​ನ ಕಿರಿಯರ ಕ್ರಿಕೆಟ್​ನಲ್ಲಿ ಅವಕಾಶ ಲಭಿಸದೆ ಇದ್ದಾಗ ಗುರುಜಪ್​ನೀತ್​, ಕೋಚ್​ ಅನಿಲ್​ ಮಾಶಿ ಸಲಹೆಯ ಮೇರೆಗೆ ಚೆನ್ನೆ$ಗೆ ಶ್ಟ್​ಿ ಆಗಿ ಗುರುನಾನಕ್​ ಕಾಲೇಜು ಸೇರಿದ್ದರು. ಅಲ್ಲಿ ಸಿಎಸ್​ಕೆ ಒಡೆತನದ ಇಂಡಿಯಾ ಸಿಮೆಂಟ್ಸ್​ ಲೀಗ್​ನಲ್ಲಿ ತನ್ನ ಕಾಲೇಜು ಪರ ಮಿಂಚಿ 2021ರಲ್ಲಿ ತಮಿಳುನಾಡು ಪ್ರೀಮಿಯರ್​ ಲೀಗ್​ಗೆ (ಟಿಎನ್​ಪಿಎಲ್​) ಪದಾರ್ಪಣೆ ಮಾಡಿದ್ದರು. ಮೊದಲ ವರ್ಷ ಆರ್​. ಅಶ್ವಿನ್​ ಸಾರಥ್ಯದ ದಿಂಡುಗಲ್​ ಡ್ರಾ$ಗನ್ಸ್​ ಪರ ಆಡಿದ್ದರು. 2023ರ ಟಿಎನ್​ಪಿಎಲ್​ನಲ್ಲಿ 15 ವಿಕೆಟ್​ಗಳೊಂದಿಗೆ ಟೂರ್ನಿಯ 2ನೇ ಗರಿಷ್ಠ ವಿಕೆಟ್​ ಸಾಧಕ ಎನಿಸಿದ್ದರು. 30 ಲಕ್ಷ ರೂ. ಮೂಲಬೆಲೆಯೊಂದಿಗೆ ಐಪಿಎಲ್​ ಹರಾಜಿನಲ್ಲಿ ಪಾಲ್ಗೊಂಡಿದ್ದ ಗುರುಜಪ್​ನೀತ್​ ಈಗ ವಿಶ್ವದ ಶ್ರೀಮಂತ ಟಿ20 ಲೀಗ್​ನಲ್ಲಿ ಕೋಟಿವೀರರಾಗಿ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ಭಾರತ&ಬಾಂಗ್ಲಾ ಟೆಸ್ಟ್​ ಸರಣಿಗೆ ಮುನ್ನ ಅವರು ನೆಟ್ಸ್​ನಲ್ಲಿ ವಿರಾಟ್​ ಕೊಹ್ಲಿಗೆ ಬೌಲಿಂಗ್​ ಮಾಡಿದ್ದರು.

ಅಲ್ಲಾ ಘಜನ್​ಫರ್​ (4.80 ಕೋಟಿ) ಮುಂಬೈ

ರಶೀದ್​ ಖಾನ್​, ನೂರ್​ ಅಹ್ಮದ್​ ಬಳಿಕ ಅಫ್ಘಾನಿಸ್ತಾನದ ಮತ್ತೋರ್ವ ಸ್ಪಿನ್​ ಪ್ರತಿಭೆ ಐಪಿಎಲ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. 75 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಪಾಲ್ಗೊಂಡ 18 ವರ್ಷದ ಅಲ್ಲಾ ಘಜನ್​ಫರ್​ 4.80 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್​ ಪಾಲಾದರು. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಆಫ್ಘನ್​ ಪರ ಮಿಂಚಿದ್ದ ಘಜನ್​ಫರ್​, ಮೊದಲಿಗೆ ವೇಗದ ಬೌಲರ್​ ಆಗಿದ್ದರು. ಆಫ್ಘನ್​ ಮಾಜಿ ನಾಯಕ ದವ್ಲತ್​ ಅಹ್ಮದ್​ಜೈ ಸಲಹೆಯ ನಂತರ ಮಿಸ್ಟರಿ ಸ್ಪಿನ್ನರ್​ ಆಗಿ ಬದಲಾಗಿದ್ದರು. ಕಳೆದ 19 ವಯೋಮಿತಿ ವಿಶ್ವಕಪ್​ನಲ್ಲಿ ಆಫ್ಘನ್​ ಪರ 4 ಪಂದ್ಯಗಳಲ್ಲಿ 8 ವಿಕೆಟ್​ ಕಬಳಿಸಿದ್ದರು. ಕಳೆದ ಎಮರ್ಜಿಂಗ್​ ಏಷ್ಯಾಕಪ್​ನಲ್ಲಿ ಅಫ್ಘಾನಿಸ್ತಾನ ಪ್ರಶಸ್ತಿ ಗೆಲ್ಲಲು ಕೂಡ ನೆರವಾಗಿದ್ದ ಘಜನ್​ಫರ್​ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜರಾಗಿದ್ದರು. ಕಳೆದ ಐಪಿಎಲ್​ ವೇಳೆ ಮುಜೀಬ್​ ಉರ್​ ರೆಹಮಾನ್​ ಗಾಯಗೊಂಡಾಗ ಕೆಕೆಆರ್​ ತಂಡ ಸೇರಿದ್ದ ಘಜನ್​ಫರ್​, ಚಾಂಪಿಯನ್​ ತಂಡದ ಭಾಗವಾಗಿದ್ದರೂ, ಒಂದೂ ಪಂದ್ಯ ಆಡುವ ಅವಕಾಶ ಪಡೆದಿರಲಿಲ್ಲ.

ಪ್ರಿಯಾಂಶ್​ ಆರ್ಯ (3.80 ಕೋಟಿ ರೂ.) ಪಂಜಾಬ್​

ಹಾಲಿ ವರ್ಷ ದೆಹಲಿ ಪ್ರೀಮಿಯರ್​ ಲೀಗ್​ನಲ್ಲಿ ಓವರ್​ಗೆ 6 ಸಿಕ್ಸರ್​ ಸಿಡಿಸಿದ "ಸಿಕ್ಸರ್​ ಮೆಷಿನ್​' ಎಂದೇ ಜನಪ್ರಿಯರಾಗಿರುವ ಯುವ ಆರಂಭಿಕ ಪ್ರಿಯಾಂಶ್​ ಆರ್ಯ ಬರೋಬ್ಬರಿ 3.80 ಕೋಟಿ ರೂ.ಗೆ ಪಂಜಾಬ್​ ಕಿಂಗ್ಸ್​ ಸೇರಿದ್ದಾರೆ. ಗೌತಮ್​ ಗಂಭೀರ್​, ಅಮಿತ್​ ಮಿಶ್ರಾ, ಜೋಗಿಂದರ್​ ಶರ್ಮ, ಉನ್ಮುಕ್ತ್​ ಚಂದ್​ರಂಥ ದೆಹಲಿಯ ಸ್ಟಾರ್​ ಕ್ರಿಕೆಟಿಗರಿಗೆ ತರಬೇತಿ ನೀಡಿರುವ ಸಂಜಯ್​ ಭಾರಧ್ವಾಜ್​ ಮಾರ್ಗದರ್ಶನದಲ್ಲೇ 23 ವರ್ಷದ ಪ್ರಿಯಾಂಶ್​ ಪಳಗಿದ್ದಾರೆ. ಗಂಭೀರ್​ ನೆಟ್ಸ್​ನಲ್ಲಿ ಆಡುತ್ತಿದ್ದುದನ್ನೇ ನೋಡಿ ಬೆಳೆದಿದ್ದಾರೆ. 30 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಪ್ರಿಯಾಂಶ್​ ಖರೀದಿಗೆ ಆರ್​ಸಿಬಿ, ಡೆಲ್ಲಿ ತಂಡಗಳೂ ಪೈಪೋಟಿ ನಡೆಸಿದ್ದವು. ದೆಹಲಿ ಪ್ರೀಮಿಯರ್​ ಲೀಗ್​ ಮೊದಲ ಆವೃತ್ತಿಯಲ್ಲಿ ಸಿಕ್ಸರ್​ನಿಂದಲೇ ಹೆಚ್ಚು ಸುದ್ದಿ ಮಾಡಿದ್ದ ಪ್ರಿಯಾಂಶ್​ ಟೂರ್ನಿಯಲ್ಲಿ 43 ಸಿಕ್ಸರ್​ ಸಹಿತ ಸರ್ವಾಧಿಕ 608 ರನ್​ ಕೂಡ ಸಿಡಿಸಿದ್ದರು. ಇತ್ತೀಚೆಗೆ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಪ್ರಿಯಾಂಶ್​ ಉತ್ತರ ಪ್ರದೇಶದ ಅನುಭವಿ ಬೌಲರ್​ಗಳಾದ ಭುವನೇಶ್ವರ್​, ಪೀಯುಷ್​ ಚಾವ್ಲಾ, ಶಿವಂ ಮಾವಿ ಅವರನ್ನು ಎದುರಿಸಿ 43 ಎಸೆತಗಳಲ್ಲೇ 5 ಬೌಂಡರಿ, 10 ಸಿಕ್ಸರ್​ ಸಹಿತ 102 ರನ್​ ಸಿಡಿಸಿದ್ದು ಕೂಡ ಐಪಿಎಲ್​ ಎಂಟ್ರಿಗೆ ನೆರವಾಗಿದೆ. ಪ್ರಿಯಾಂಶ್​ ಅವರ ತಂದೆ ಪವನ್​ ಮತ್ತು ತಾಯಿ ರಾಧಾ ಆರ್ಯ ಇಬ್ಬರೂ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ.

ಇಶಾನ್​ ಮಾಲಿಂಗ (1.20 ಕೋಟಿ ರೂ.) ಸನ್​ರೈಸರ್ಸ್​

ಶ್ರೀಲಂಕಾದ ಮತ್ತೋರ್ವ ಮಾಲಿಂಗ ಈಗ ಐಪಿಎಲ್​ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. 30 ಲಕ್ಷ ರೂ. ಮೂಲಬೆಲೆಯೊಂದಿಗೆ ಐಪಿಎಲ್​ ಹರಾಜಿನಲ್ಲಿ ಪಾಲ್ಗೊಂಡ 23 ವರ್ಷದ ವೇಗಿ ಇಶಾನ್​ ಮಾಲಿಂಗ, 1.20 ಕೋಟಿ ರೂ.ಗೆ ಸನ್​ರೈಸರ್ಸ್​ ತಂಡ ಸೇರಿದ್ದಾರೆ. ಇಶಾನ್​ ಈಗಾಗಲೆ ಲಂಕಾದಲ್ಲಿ ತನ್ನ ವೇಗ, ವಿಕೆಟ್​ ಕಬಳಿಕೆ ಸಾಮರ್ಥ್ಯ ಮತ್ತು ಶಿಸ್ತುಬದ್ಧ ಬೌಲಿಂಗ್​ನಿಂದ ಸಾಕಷ್ಟು ಸದ್ದು ಮಾಡಿದ್ದಾರೆ. ಲಸಿತ್​ ಮಾಲಿಂಗ ಅವರಂತೆಯೇ ವಿಶಿಷ್ಟ ಬೌಲಿಂಗ್​ ಶೈಲಿ ಹೊಂದಿರುವ ಇಶಾನ್​ ಕೂಡ ಕಾಲ್ಬೆರಳು ಮುರಿಯವಂಥ ಯಾರ್ಕರ್​ಗಳನ್ನು ಎಸೆಯಬಲ್ಲವರಾಗಿದ್ದಾರೆ. ಇತ್ತೀಚೆಗೆ ಎಮರ್ಜಿಂಗ್​ ಏಷ್ಯಾಕಪ್​ನಲ್ಲಿ ಶ್ರೀಲಂಕಾ ಎ ಪರ ಮಿಂಚಿದ್ದರು. 16 ಪ್ರಥಮ ದರ್ಜೆ ಪಂದ್ಯಗಳಲ್ಲಿ 39 ವಿಕೆಟ್​ ಕಬಳಿಸಿದ್ದಾರೆ. ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಕೊಲಂಬೊ ಸ್ಟ್ರೆ$ಕರ್ಸ್​, ಜ್ನಾ ಕಿಂಗ್ಸ್​ ಪರ ಗಮನಾರ್ಹ ನಿರ್ವಹಣೆ ತೋರಿದ್ದಾರೆ. ಲಂಕಾ ದೇಶೀಯ ಕ್ರಿಕೆಟ್​ನಲ್ಲಿ ಸ್ಥಿರ ನಿರ್ವಹಣೆ ತೋರುತ್ತ ಬಂದಿರುವ ಇಶಾನ್​, ಲಂಕಾ ರಾಷ್ಟ್ರೀಯ ತಂಡಕ್ಕೆ ಮುನ್ನ ಐಪಿಎಲ್​ನಲ್ಲಿ ಆಡುವ ಉತ್ಸಾಹದಲ್ಲಿದ್ದಾರೆ.

ಜೇಕಬ್​ ಬೆಥೆಲ್​ (2.60 ಕೋಟಿ ರೂ.) ಆರ್​ಸಿಬಿ

ಕೆರಿಬಿಯನ್​ನ ಬಾರ್ಬಡೋಸ್​ ದ್ವೀಪದಲ್ಲಿ ಜನಿಸಿದರೂ, 12ನೇ ವಯಸ್ಸಿನಲ್ಲೇ ಇಂಗ್ಲೆಂಡ್​ನ ವಾರ್ವಿಕ್​ಶೈರ್​ಗೆ ಸ್ಥಳಾಂತರಗೊಂಡಿದ್ದ ಜೇಕಬ್​ ಬೆಥೆಲ್​ ಎಡಗೈ ಬ್ಯಾಟರ್​ ಮತ್ತು ವಿಕೆಟ್​ ಕೀಪರ್​ ಆಗಿ ಗಮನಸೆಳೆದಿದ್ದಾರೆ. ಈಗಾಗಲೆ ಇಂಗ್ಲೆಂಡ್​ ಪರ 8 ಏಕದಿನ, 7 ಟಿ20 ಪಂದ್ಯ ಆಡಿರುವ 21 ವರ್ಷದ ಬೆಥೆಲ್​ ಮುಂಬರುವ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಟೆಸ್ಟ್​ ಪದಾರ್ಪಣೆಗೂ ಸಜ್ಜಾಗಿದ್ದಾರೆ. ಈ ನಡುವೆ ಐಪಿಎಲ್​ ಹರಾಜಿನಲ್ಲಿ 1.25 ಕೋಟಿ ರೂ. ಮೂಲಬೆಲೆಯೊಂದಿಗೆ ಪಾಲ್ಗೊಂಡು 2.60 ಕೋಟಿ ರೂ.ಗೆ ಆರ್​ಸಿಬಿ ಪಾಲಾಗಿದ್ದಾರೆ. ವಿಲ್​ ಜಾಕ್ಸ್​ ಕೈಬಿಟ್ಟ ಆರ್​ಸಿಬಿ ಅವರಂತೆಯೇ ಬಿರುಸಿನ ಬ್ಯಾಟಿಂಗ್​ ಮಾಡಬಲ್ಲ ಕಾರಣಕ್ಕಾಗಿ ಬೆಥೆಲ್​ರನ್ನು ಆಯ್ದುಕೊಂಡಿದೆ. ಅಲ್ಲದೆ ಬಲಗೈ ಬ್ಯಾಟರ್​ಗಳಿಂದ ತುಂಬಿರುವ ಆರ್​ಸಿಬಿ ತಂಡಕ್ಕೆ ಇವರು ಎಡಗೈ ಬ್ಯಾಟಿಂಗ್​ನ ವೈವಿಧ್ಯತೆಯನ್ನೂ ತರಬಲ್ಲರು. ಇಂಗ್ಲೆಂಡ್​ನ 19 ವಯೋಮಿತಿ ತಂಡದ ನಾಯಕರಾಗಿದ್ದ ಬೆಥೆಲ್​, ಹಾಲಿ ವರ್ಷ ಇಂಗ್ಲೆಂಡ್​ ಸೀನಿಯರ್​ ತಂಡಕ್ಕೆ ಆಯ್ಕೆಯಾಗಿದ್ದರು. ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಪರ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ (21 ವರ್ಷ, 17 ದಿನ) ಬ್ಯಾಟರ್​ ಎನಿಸಿದ್ದಾರೆ. ತಾನು ಹುಟ್ಟಿದ ದೇಶದ (ವೆಸ್ಟ್​ ಇಂಡೀಸ್​) ವಿರುದ್ಧವೇ ಅವರು ಈ ಸಾಧನೆ ಮಾಡಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net