ಮಿಂಚಿದ ಕನ್ನಡಿಗರು; ರಾಜಸ್ಥಾನ ರಾಯಲ್ಸ್‌ಗೆ ಸನ್‌ರೈಸರ್ಸ್‌ ವಿರುದ್ಧ ಭರ್ಜರಿ ಜಯ

rr vs srh web
Published on

ಪುಣೆ: ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಗೆಲುವಿನೊಂದಿಗೆ ಐಪಿಎಲ್-15ಕ್ಕೆ ಎಂಟ್ರಿ ಕೊಟ್ಟಿದೆ. ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಶಕ್ತಿಶಾಲಿ ನಿರ್ವಹಣೆ ತೋರಿದ ರಾಜಸ್ಥಾನ ತಂಡ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ಧ 61 ರನ್‌ಗಳಿಂದ ಗೆದ್ದು ಬೀಗಿದೆ. ಟೂರ್ನಿಯ ಮೊದಲ 4 ಪಂದ್ಯಗಳಲ್ಲೂ ಟಾಸ್ ಗೆದ್ದ ತಂಡವೇ ಚೇಸಿಂಗ್ ಮಾಡಿ ಜಯಿಸಿದ್ದರೆ, ಈ ಬಾರಿ ರಾಜಸ್ಥಾನ ತಂಡ ಟಾಸ್ ಸೋತರೂ ಪಂದ್ಯ ಜಯಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗೆದ್ದ ಮೊದಲ ತಂಡವೆನಿಸಿತು.

ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹಾಲಿ ಆವೃತ್ತಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ ತಂಡ ನಾಯಕ ಸಂಜು ಸ್ಯಾಮ್ಸನ್ (55 ರನ್, 27 ಎಸೆತ, 3 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ 6 ವಿಕೆಟ್‌ಗೆ 210 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಪ್ರತಿಯಾಗಿ ಯಾವುದೇ ಹಂತದಲ್ಲೂ ಈ ಮೊತ್ತವನ್ನು ಬೆನ್ನಟ್ಟುವ ಲಕ್ಷಣ ತೋರದ ಸನ್‌ರೈಸರ್ಸ್‌ ತಂಡ 7 ವಿಕೆಟ್‌ಗೆ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಕನ್ನಡಿಗ ಪ್ರಸಿದ್ಧಕೃಷ್ಣ (16ಕ್ಕೆ 2) ಮತ್ತು ಆರ್‌ಸಿಬಿ ಮಾಜಿ ಸ್ಪಿನ್ನರ್ ಯಜುವೇಂದ್ರ ಚಾಹಲ್ (22ಕ್ಕೆ 3) ಸನ್‌ಗೆ ಕಡಿವಾಣ ಹಾಕಿದರು.

ಗೆಲುವಿಗೆ ಪ್ರತಿ ಓವರ್‌ಗೆ ಸುಮಾರು 11 ರನ್ ಗಳಿಸಬೇಕಾಗಿದ್ದ ಸನ್‌ರೈಸರ್ಸ್‌, 9 ರನ್‌ಗೆ 3 ವಿಕೆಟ್ ಕಳೆದುಕೊಂಡು ದಯನೀಯ ಆರಂಭ ಕಂಡಿತು. ಇನಿಂಗ್ಸ್ ಆರಂಭಿಸಿದ ನಾಯಕ ಕೇನ್ ವಿಲಿಯಮ್ಸನ್ (2) ಅನುಮಾನಾಸ್ಪದ ಕ್ಯಾಚ್‌ಗೆ ಔಟಾದರು. ಅಲ್ಲಿಂದ ಸನ್ ಕುಸಿತ ಆರಂಭಗೊಂಡಿತು. ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್ ಖಾತೆ ತೆರೆಯದೆ ಔಟಾದರು. ನಂತರ ಏಡನ್ ಮಾರ್ಕ್ರಮ್ (57*) ಮತ್ತು ವಾಷಿಂಗ್ಟನ್ ಸುಂದರ್ (40) ಹೋರಾಟದಿಂದ ಸನ್‌ರೈಸರ್ಸ್‌ ತಂಡ ಸೋಲಿನ ಅಂತರ ತಗ್ಗಿಸಿಕೊಂಡಿತು.

ಸ್ಯಾಮ್ಸನ್-ಪಡಿಕಲ್ ಜುಗಲ್‌ಬಂದಿ

ವನ್‌ಡೌನ್ ಬ್ಯಾಟರ್ ಆಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 25 ಎಸೆತಗಳಲ್ಲೇ ಅರ್ಧಶತಕ ಸಿಡಿಸುವ ಮೂಲಕ ಆರ್ಭಟಿಸಿದರು. ಅವರಿಗೆ ಕನ್ನಡಿಗ ದೇವದತ್ ಪಡಿಕಲ್ (41 ರನ್, 29 ಎಸೆತ, 4 ಬೌಂಡರಿ, 2 ಸಿಕ್ಸರ್) ಸಮರ್ಥ ಬೆಂಬಲ ಒದಗಿಸಿದರು. ರಾಜಸ್ಥಾನ ತಂಡ 72 ರನ್‌ಗೆ 2 ವಿಕೆಟ್ ಕಳೆದುಕೊಂಡಾಗ ಜತೆಗೂಡಿದ ಸ್ಯಾಮ್ಸನ್-ಪಡಿಕಲ್ ಜೋಡಿ 3ನೇ ವಿಕೆಟ್‌ಗೆ 41 ಎಸೆತಗಳಲ್ಲಿ 73 ರನ್ ಪೇರಿಸಿತು. ಈ ಮೂಲಕ 16ನೇ ಓವರ್‌ನಲ್ಲೇ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಆರ್‌ಸಿಬಿ ತಂಡದ ಪರ ಆರಂಭಿಕರಾಗಿ ಮಿಂಚಿದ್ದ ಪಡಿಕಲ್, ರಾಜಸ್ಥಾನ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಅರ್ಧಶತಕದತ್ತ ಸಾಗುತ್ತಿದ್ದ ಪಡಿಕಲ್ ವೇಗಿ ಉಮ್ರಾನ್ ಮಲಿಕ್ ಎಸೆತದಲ್ಲಿ ಬೌಲ್ಡಾದರೆ, ಸ್ಯಾಮ್ಸನ್ ಮತ್ತೋರ್ವ ವೇಗಿ ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿದರು.

ಮೊತ್ತ ಏರಿಸಿದ ಹೆಟ್ಮೆಯರ್

ಸ್ಲಾಗ್ ಓವರ್‌ಗಳಲ್ಲಿ ಶಿಮ್ರೊನ್ ಹೆಟ್ಮೆಯರ್ ರಾಯಲ್ಸ್ ಮೊತ್ತ ಏರಿಸಿದರು. ಹೆಟ್ಮೆಯರ್ 13 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಿತ 32 ರನ್ ಸಿಡಿಸಿದರು. ಈ ಮೂಲಕ ರಾಯಲ್ಸ್ ಕೊನೇ 5 ಓವರ್‌ಗಳಲ್ಲಿ 62 ರನ್ ದೋಚಿತು. ಭುವನೇಶ್ವರ್ ಎಸೆದ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಹೆಟ್ಮೆಯರ್ ಸತತ 2 ಸಿಕ್ಸರ್ ಬಾರಿಸಿದರು. ಇದರಿಂದ ರಾಯಲ್ಸ್ 19ನೇ ಓವರ್‌ನಲ್ಲೇ 200ರ ಗಡಿ ದಾಟಿತು.

ಬಟ್ಲರ್-ಯಶಸ್ವಿ ಪವರ್‌ಪ್ಲೇ

ರಾಜಸ್ಥಾನ ತಂಡ ಪವರ್‌ಪ್ಲೇಯಲ್ಲಿ 58 ರನ್ ದೋಚುವ ಮೂಲಕ ಭರ್ಜರಿ ಆರಂಭ ಕಂಡಿತು. ಮೊದಲ ಓವರ್‌ನಲ್ಲಿ ಭುವನೇಶ್ವರ್ ನೋಬಾಲ್ ಹೊರತಾಗಿ ಯಾವುದೇ ರನ್ ಬಿಟ್ಟುಕೊಡಲಿಲ್ಲ. 2ನೇ ಓವರ್‌ನಲ್ಲಿ ಶೆರ್ಡ್ 5 ರನ್ ಬಿಟ್ಟುಕೊಟ್ಟರು. 3ನೇ ಓವರ್‌ನಿಂದ ಜೋಸ್ ಬಟ್ಲರ್-ಯಶಸ್ವಿ ಜೈಸ್ವಾಲ್ ಅಬ್ಬರ ಆರಂಭಿಸಿದರು. ವೇಗಿ ಉಮ್ರಾನ್ ಮಲಿಕ್ ಎಸೆದ ಇನಿಂಗ್ಸ್‌ನ 4ನೇ ಓವರ್‌ನ ಪ್ರತಿ ಎಸೆತ ಗಂಟೆಗೆ 140 ಕಿಮೀಗಿಂತ ಹೆಚ್ಚು ವೇಗದಿಂದ ಕೂಡಿದ್ದರೂ, ಬಟ್ಲರ್ 2 ಸಿಕ್ಸರ್, 2 ಬೌಂಡರಿ ಸಹಿತ 21 ರನ್ ಕಸಿದರು. ಆರ್‌ಸಿಬಿ ಪರ ಪವರ್‌ಪ್ಲೇನಲ್ಲಿ ನಿಯಂತ್ರಿತ ಬೌಲಿಂಗ್‌ನಿಂದ ಗಮನಸೆಳೆಯುತ್ತಿದ್ದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ರಾಜಸ್ಥಾನ ಪರ ಅದೇ ಯಶಸ್ಸು ಕಾಣಲಿಲ್ಲ. ವಾಷಿಂಗ್ಟನ್ ಎಸೆದ ಪಂದ್ಯದ 5ನೇ ಓವರ್‌ನಲ್ಲಿ 2 ಸಿಕ್ಸರ್ ಸಹಿತ 18 ರನ್ ಬಿಟ್ಟುಕೊಟ್ಟರು. ಪವರ್‌ಪ್ಲೇ ಮುಕ್ತಾಯಗೊಳ್ಳುತ್ತಿದ್ದಂತೆ ಆರಂಭಿಕ ಜೋಡಿ ಬೇರ್ಪಟ್ಟಿತು. ಯಶಸ್ವಿ ಜೈಸ್ವಾಲ್ (20) ರೊಮಾರಿಯೊ ಶೆರ್ಡ್‌ಗೆ ವಿಕೆಟ್ ಒಪ್ಪಿಸಿದರೆ, ಬಟ್ಲರ್ (35 ರನ್, 28 ಎಸೆತ, 3 ಬೌಂಡರಿ, 3 ಸಿಕ್ಸರ್) ಉಮ್ರಾನ್ ಮಲಿಕ್ ಎಸೆತದಲ್ಲಿ ಕೀಪರ್ ಪೂರನ್‌ಗೆ ಕ್ಯಾಚ್ ನೀಡಿದರು.

ಇಬ್ಬರು ಕನ್ನಡಿಗರು ಕಣಕ್ಕೆ

ಉಭಯ ತಂಡಗಳಲ್ಲಿ ಕರ್ನಾಟಕದ ಒಟ್ಟು 7 ಆಟಗಾರರಿದ್ದರೂ, ಇಬ್ಬರಿಗಷ್ಟೇ ಆಡುವ ಅವಕಾಶ ಲಭಿಸಿತು. ರಾಜಸ್ಥಾನ ಪರ ದೇವದತ್ ಪಡಿಕಲ್ ಮತ್ತು ಪ್ರಸಿದ್ಧಕೃಷ್ಣ ಕಣಕ್ಕಿಳಿದರು. ಕಳೆದ ವರ್ಷದವರೆಗೆ ಪಡಿಕಲ್ ಆರ್‌ಸಿಬಿ ಮತ್ತು ಪ್ರಸಿದ್ಧಕೃಷ್ಣ ಕೆಕೆಆರ್ ತಂಡದಲ್ಲಿದ್ದರು. ಇಬ್ಬರಿಗೂ ಇದು ರಾಜಸ್ಥಾನ ಪರ ಪದಾರ್ಪಣೆಯ ಪಂದ್ಯವೆನಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net