

ವಿಶಾಖಪಟ್ಟಣ: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಕಹಿ ಅರಗಿಸಿಕೊಳ್ಳುವ ಮುನ್ನವೇ ಭಾರತದ ಯುವ ತಂಡ ಟಿ20 ಸವಾಲಿಗೆ ಸಜ್ಜಾಗಿದೆ. ಪ್ರಮುಖ ಆಟಗಾರರು ವಿಶ್ರಾಂತಿಯ ಕಾರಣದಿಂದ ಹೊರಗುಳಿದಿದ್ದು, "ಮಿ. 360 ಡಿಗ್ರಿ' ಬ್ಯಾಟರ್ ಸೂರ್ಯಕುಮಾರ್ ಯಾದವ್ ಸಾರಥ್ಯದಲ್ಲಿ ಹಾಂಗ್ರೆೌ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ತಂಡದ ಬಹುತೇಕ ಆಟಗಾರರು, ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಮೊದಲ ಪಂದ್ಯ ಗುರುವಾರ ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಯುವ ಟೀಮ್ ಇಂಡಿಯಾಕ್ಕೆ ಇದು ಸತ್ವಪರೀಕ್ಷೆಯಾಗಿರಲಿದೆ.
ಮುಂಬರುವ 2024ರ ಟಿ20 ವಿಶ್ವಕಪ್ಗೆ ತಂಡವನ್ನು ಕಟ್ಟುವ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಸೂರ್ಯಕುಮಾರ್ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಸೇರಿ ಪ್ರಮುಖ ಆಟಗಾರರಿಗೆ ವಿಶ್ವಕಪ್ ಟೂರ್ನಿ ಬಳಿಕ ವಿಶ್ರಾತಿ ನೀಡಲಾಗಿದೆ. ಆದರೆ ಇವರಲ್ಲಿ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಯಾವೆಲ್ಲ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದು ಸ್ಪಷ್ಟವಿಲ್ಲ.
ವರ್ಷಾರಂಭದಲ್ಲಿ ಲಂಕಾ, ಕಿವೀಸ್, ವೆಸ್ಟ್ ಇಂಡಿಸ್ ಹಾಗೂ ಐರ್ಲೆಂಡ್ ವಿರುದ್ಧ ಟಿ20 ಸರಣಿಗಳಲ್ಲಿ ಆಡಿದ್ದ ಬಹುತೇಕ ಆಟಗಾರರು ಈ ಸರಣಿಯಲ್ಲಿ ಆಡಲಿದ್ದಾರೆ. ಉಭಯ ತಂಡಗಳು 2022ರ ಸೆಪ್ಟೆಂಬರ್ ಬಳಿಕ ಟಿ20ಯಲ್ಲಿ ಮೊದಲ ಬಾರಿಗೆ ಎದುರಾಗಲಿವೆ. ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಬಳಿಕ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಆಟಗಾರರಿಗೆ ಒಲಿದಿರುವ ಅವಕಾಶವನ್ನು ಬಾಚಿಕೊಳ್ಳಲು ಈ ಸರಣಿ ಉತ್ತಮ ವೇದಿಕೆ ಎನಿಸಿದೆ. ರಾಹುಲ್ ದ್ರಾವಿಡ್ ನಂತರ ಟೀಮ್ ಇಂಡಿಯಾ ಕೋಚ್ ಸ್ಥಾನ ತುಂಬಬಲ್ಲ ರೇಸ್ನಲ್ಲಿರುವ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಆಸೀಸ್ ವಿರುದ್ಧ ಸರಣಿಗೆ ಹಂಗಾಮಿ ತರಬೇತುದಾರರಾಗಿದ್ದಾರೆ.ಇನ್ನೂ ವಿಶ್ವಕಪ್ ಗೆಲುವಿನ ಗುಂಗಿನಲ್ಲಿರುವ ಆಸ್ಟ್ರೆಲಿಯಾ ತಂಡ ಅನುಭವಿ ಹಾಗೂ ಯುವ ಆಟಗಾರರ ಸಮತೋಲನ ಹೊಂದಿದೆ. ವಿಶ್ವಕಪ್ ತಂಡದಲ್ಲಿದ್ದ ಏಳು ಆಟಗಾರರು ಟಿ20 ಸರಣಿಯಲ್ಲೂ ಕಣಕ್ಕಿಳಿಯಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಗೈರಿನಲ್ಲಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಯುವ ಬ್ಯಾಟಿಂಗ್ ವಿಭಾಗ
ಪ್ರಮುಖ ಆಟಗಾರರ ಗೈರಿನಲ್ಲಿ ಭಾರತ ತಂಡ ಅನನುಭವಿ ಬ್ಯಾಟಿಂಗ್ ವಿಭಾಗದೊಂದಿಗೆ ಕಣಕ್ಕಿಳಿಯುತ್ತಿದೆ. ವಿಶ್ವ ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ವಿಭಾಗ ಮುನ್ನಡೆಸಲಿದ್ದಾರೆ. ಏಕದಿನ ತಂಡದಲ್ಲಿ ಎಡಗೈ ಬ್ಯಾಟರ್ಗಳ ಕೊರತೆ ಎದುರಿಸುವ ಟೀಮ್ ಇಂಡಿಯಾಗೆ ಟಿ20ಯಲ್ಲಿ ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್ ಸೇರಿ 7 ಆಟಗಾರರ ಬಲವಿದೆ.
ಬೌಲರ್ಗಳಿಗೆ ಸತ್ವ ಪರೀಕ್ಷೆ
ಏಕದಿನ ವಿಶ್ವಕಪ್ನಲ್ಲಿ ಅಮೋಘ ಬೌಲಿಂಗ್ ನಿರ್ವಹಣೆ ತೋರಿದ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ಮುಂದಿನ ಪೀಳಿಗೆಯ ಬೌಲರ್ಗಳಿಗೆ ಈ ಸರಣಿಯಲ್ಲಿ ಸತ್ವ ಪರೀೆ ಎದುರಾಗಲಿದೆ. ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್ ಹಾಗೂ ಆವೇಶ್ ಖಾನ್ಗೆ ಆಸೀಸ್ ಬ್ಯಾಟರ್ಗಳು ಪ್ರಮುಖ ಸವಾಲಾಗಲಿದ್ದಾರೆ.
ಟೀಮ್ ನ್ಯೂಸ್:
ಭಾರತ: ಇಶಾನ್ ಕಿಶನ್ ಜತೆ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ನಾಯಕ ಸೂರ್ಯಕುಮಾರ್ ಯಾದವ್ 4&5ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇದೆ. ಇಶಾನ್ ಕಿಶನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದು, ಜಿತೇಶ್ ಶರ್ಮ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ನಿಕಟ ಸ್ಪರ್ಧೆ ಎದುರಿಸಲಿದ್ದಾರೆ. 3ನೇ ವೇಗದ ಬೌಲರ್ ಸ್ಥಾನಕ್ಕೆ ಆವೇಶ್ ಖಾನ್ ಮತ್ತು ಮುಕೇಶ್ ಕುಮಾರ್ ನಡುವೆ ಸ್ಪರ್ಧೆ ಇದೆ.
ಸಂಭಾವ್ಯ ತಂಡ: ಇಶಾನ್ ಕಿಶನ್ (ವಿ.ಕೀ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮ, ಸೂರ್ಯಕುಮಾರ್ (ನಾಯಕ), ರಿಂಕು ಸಿಂಗ್, ಅಕ್ಷರ್ ಪಟೇಲ್/ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಆವೇಶ್ ಖಾನ್/ಮುಕೇಶ್ ಕುಮಾರ್.
ಆಸ್ಟ್ರೆಲಿಯಾ: ಡೇವಿಡ್ ವಾರ್ನರ್ ಗೈರಿನಲ್ಲಿ ಸ್ಟೀವನ್ ಸ್ಮಿತ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳಿವೆ. ಟಿ20 ವಿಶ್ವಕಪ್ಗೆ ಮುನ್ನ ಸ್ಮಿತ್ಗೆ ಹೊಸ ಪಾತ್ರವನ್ನು ನೀಡಲಾಗುತ್ತಿದೆ. ಗ್ಲೆನ್ ಮ್ಯಾಕ್ಸ್ವೆಲ್, ಆಡಂ ಜಂಪಾಗೆ ವಿಶ್ರಾಂತಿ ನೀಡಿದರೆ, ಮಾರ್ಕಸ್ ಸ್ಟೋಯಿನಿಸ್, ತನ್ವೀರ್ ಸಂಘಾ ಆಡುವ ನಿರೀೆ ಇದೆ. ವಿಶ್ವಕಪ್ ಫೈನಲ್ ಹೀರೋ ಟ್ರಾವಿಸ್ ಹೆಡ್ಗೂ ಮೊದಲ ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ.
ಸಂಭಾವ್ಯ ತಂಡ: ಸ್ಟೀವನ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಆರೋನ್ ಹಾರ್ಡಿ, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೋಯಿನಿಸ್/ಗ್ಲೆನ್ ಮ್ಯಾಕ್ಸ್ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ, ವಿ.ಕೀ.), ಸೀನ್ ಅಬೋಟ್, ನಥಾನ್ ಎಲ್ಲಿಸ್, ಜೇಸನ್ ಬೆಹ್ರನ್ಡ್ಾರ್, ಆಡಂ ಜಂಪಾ/ತನ್ವೀರ್ ಸಂಘಾ.
*9: ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ 9ನೇ ನಾಯಕ ಎನಿಸಲಿದ್ದಾರೆ. ಹಾಲಿ ವರ್ಷದಲ್ಲಿ ಟಿ20 ತಂಡ ಮುನ್ನಡೆಸಿದ 4ನೇ ಆಟಗಾರ ಎನಿಸಲಿದ್ದಾರೆ. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಋತುರಾಜ್ ಗಾಯಕ್ವಾಡ್ ಮೊದಲ ಮೂವರು.
ಮುಖಾಮುಖಿ: 27
ಭಾರತ: 15
ಆಸ್ಟ್ರೆಲಿಯಾ: 10
ರದ್ದು: 2
ಟಿ20 ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ ಸ್ಥಳ
1. ನವೆಂಬರ್ 23 ವಿಶಾಖಪಟ್ಟಣ
2. ನವೆಂಬರ್ 26 ತಿರುವನಂತಪುರ
3. ನವೆಂಬರ್ 28 ಗುವಾಹಟಿ
4. ಡಿಸೆಂಬರ್ 1 ನಾಗ್ಪುರ
5. ಡಿಸೆಂಬರ್ 3 ಬೆಂಗಳೂರು
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಪಂದ್ಯಕ್ಕೆ ತುಂತುರು ಮಳೆ ಕಾಡುವ ಭೀತಿ ಇದ್ದು, ಇಲ್ಲಿನ ಪಿಚ್ನಲ್ಲಿ ರನ್ಪ್ರವಾಹ ಹರಿಸುವುದು ಕಷ್ಟವೆನಿಸಲಿದೆ. ಮಾರ್ಚ್ನಲ್ಲಿ ಉಭಯ ತಂಡಗಳ ನಡುವೆ ಇಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಆಸೀಸ್ ವೇಗಿಗಳ ದಾಳಿಗೆ ತತ್ತರಿಸಿ ಭಾರತ, 26 ಓವರ್ಗಳಲ್ಲೇ 117 ರನ್ಗಳಿಗೆ ಕುಸಿದಿತ್ತು. ಇಲ್ಲಿ ಆಡಿದ 3 ಟಿ20 ಪಂದ್ಯಗಳಲ್ಲೂ ಬೌಲರ್ಗಳೇ, ಅದರಲ್ಲೂ ಪ್ರಮುಖವಾಗಿ ವೇಗಿಗಳೇ ಮೇಲುಗೈ ಸಾಧಿಸಿದ್ದಾರೆ.