

ನವದೆಹಲಿ: ಇತ್ತೀಚೆಗಷ್ಟೇ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾದ ಜಯ್ ಷಾ, ಕ್ರಿಕೆಟ್ ಲೋಕದಲ್ಲಿ ಅತ್ಯಂತ ಉನ್ನತ ಸ್ಥಾನಕ್ಕೇರುವ ಮೂಲಕ ಎಲ್ಲರ ಹುಬ್ಬೇರಿಸಿದರು. ಇನ್ನು ಐಸಿಸಿ ಅಧ್ಯಕ್ಷ ಸ್ಥಾನ ಷಾ ತಮ್ಮ ಪಾಲಾಗುತ್ತಿದ್ದಂತೆ ಇತ್ತ ಭಾರತೀಯ ಕ್ರಿಕೆಟ್ ಮಂಡಳಿಯು ತಮ್ಮ ಆಯ್ಕೆ ಸಮಿತಿಯ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ ಅವರನ್ನು ಪುರುಷರ ಕ್ರಿಕೆಟ್ ತಂಡದ ಆಯ್ಕೆಗಾರರನ್ನಾಗಿ ನೇಮಕ ಮಾಡಿಕೊಂಡಿದೆ.
ಐವರು ಸದಸ್ಯರನ್ನು ಒಳಗೊಂಡಿರುವ ಪ್ಯಾನೆಲ್‌ನಲ್ಲಿ ಈ ಹಿಂದೆ ಇದ್ದ ಸಲಿಲ್ ಅಂಕೋಲಾ ಅವರ ಜಾಗವನ್ನು ಈಗ ಅಜಯ್ ತುಂಬಿದ್ದಾರೆ. ಎಲ್ಲಾ ಐದು ಆಯ್ಕೆಗಾರರು ವಿವಿಧ ವಲಯಗಳನ್ನು ಪ್ರತಿನಿಧಿಸುತ್ತಾರೆ ಎಂಬುದು ತಿಳಿದಿರುವ ಸಂಗತಿ. ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯಲ್ಲಿ ರಾತ್ರಾರಿಗೆ ಉತ್ತರ ವಲಯವನ್ನು ಪ್ರತಿನಿಧಿಸುವ ಅವಕಾಶ ನೀಡಲಾಗಿದೆ. ಕಳೆದ ವರ್ಷ ಬಿಸಿಸಿಐ ಅಗರ್ಕರ್ರನ್ನು ಮುಖ್ಯ ಆಯ್ಕೆಗಾರರಾಗಿ ನೇಮಿಸಿದ ಬೆನ್ನಲ್ಲೇ ಕಮಿಟಿಯು ಪಶ್ಚಿಮ ವಲಯದಿಂದ ಇಬ್ಬರು ಆಯ್ಕೆಗಾರರನ್ನು ನೇಮಕ ಮಾಡಿಕೊಂಡಿತು.
ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಜತೆ ಭಾರತ ತಂಡದಲ್ಲಿ ಆಡಿದ ಅನುಭವ ಅಜಯ್ ಅವರಿಗಿದೆ. ಸೆಪ್ಟೆಂಬರ್ 19ರಿಂದ ಪ್ರಾರಂಭವಾಗುವ ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್ ಸರಣಿಗೂ ಮುನ್ನವೇ ಈ ಬೆಳವಣಿಗೆ ನಡೆದಿದೆ. ಇನ್ನು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅಜಯ್, "ಇದು ಒಂದು ದೊಡ್ಡ ಗೌರವ ಮತ್ತು ಸವಾಲು. ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೇನೆ. ನಮ್ಮ ಭಾರತೀಯ ಕ್ರಿಕೆಟ್‌ಗೆ ಮತ್ತಷ್ಟು ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ,(ಏಜೆನ್ಸೀಸ್).