ಟಿ20 ತಂಡದ ಹೊಸ ನಾಯಕನ ಬಗ್ಗೆ ಸುಳಿವು ಬಿಟ್ಟುಕೊಟ್ಟ ವಿರಾಟ್ ಕೊಹ್ಲಿ

virat kohli for web new
Published on

ದುಬೈ: ಟಿ20 ವಿಶ್ವಕಪ್ ಮುಕ್ತಾಯಗೊಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ, ಟಿ20 ತಂಡದ ನಾಯಕತ್ವ ತ್ಯಜಿಸಿದರು. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ನೂತನ ನಾಯಕನ ಆಯ್ಕೆ ನಡೆಯಬೇಕಿದೆ. ಈಗಾಗಲೇ ರೋಹಿತ್ ಶರ್ಮ ಹೆಸರು ಈ ಸ್ಥಾನಕ್ಕೆ ಬಲವಾಗಿ ಕೇಳಿ ಬರುತ್ತಿದೆ. ಸ್ವತಃ ವಿರಾಟ್ ಕೊಹ್ಲಿಯೇ ರೋಹಿತ್ ಶರ್ಮ ಹೆಸರನ್ನು ಮುನ್ನೆಲೆಗೆ ತಂದಿದ್ದಾರೆ. ಹಾಲಿ ಉಪನಾಯಕನಾಗಿರುವ ರೋಹಿತ್ ಶರ್ಮ ಚುಟುಕು ಕ್ರಿಕೆಟ್‌ನಲ್ಲಿ ಕೊಹ್ಲಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾದಂತಾಗಿದೆ.

ಮುಂದಿನ ವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮ ತಂಡ ಮುನ್ನಡೆಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ತಂಡದ ನಾಯಕತ್ವದ ಗುಟ್ಟುಬಿಟ್ಟುಕೊಟ್ಟರು. ರೋಹಿತ್ ಶರ್ಮ ಸಾರಥ್ಯದಲ್ಲಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಚಾಂಪಿಯನ್ ಆಗಿದೆ.

ಆಲ್ರೌಂಡ್ ನಿರ್ವಹಣೆ ತೋರಿದ ವಿರಾಟ್ ಕೊಹ್ಲಿ ಬಳಗ 9 ವಿಕೆಟ್‌ಗಳಿಂದ ಕ್ರಿಕೆಟ್ ಶಿಶು ನಮೀಬಿಯ ಎದುರು ಜಯಭೇರಿ ಬಾರಿಸಿತು. ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಹಾಗೂ ಮುಖ್ಯಕೋಚ್ ರವಿಶಾಸ್ತ್ರಿ ಒಳಗೊಂಡ ಸಹಾಯಕ ಸಿಬ್ಬಂದಿ ವರ್ಗವನ್ನು ಗೆಲುವಿನ ಉಡುಗೊರೆಯೊಂದಿಗೆ ಬೀಳ್ಕೊಟ್ಟಿತು. ಸ್ಪಿನ್ ಜೋಡಿ ರವೀಂದ್ರ ಜಡೇಜಾ (16ಕ್ಕೆ 3) ಹಾಗೂ ಆರ್.ಅಶ್ವಿನ್ (20ಕ್ಕೆ 3) ಮಾರಕ ದಾಳಿಗೆ ನಲುಗಿದ ನಮೀಬಿಯ 8 ವಿಕೆಟ್‌ಗೆ 132 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡ, ಉಪನಾಯಕ ರೋಹಿತ್ ಶರ್ಮ (56ರನ್, 37 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಕೆಎಲ್ ರಾಹುಲ್ (54*ರನ್, 36ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 15.2 ಓವರ್‌ಗಳಲ್ಲಿ 1 ವಿಕೆಟ್‌ಗೆ 136 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net