

ಡುಂಡೀ: ನೆದರ್ಲೆಂಡ್ ತಂಡ ಸ್ಕಾಟ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 370 ರನ್ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ 3ನೇ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ಬರೆದಿದೆ. ಏಕದಿನ ವಿಶ್ವಕಪ್ ಅರ್ಹತಾ ಲೀಗ್&2ರ ಪಂದ್ಯದಲ್ಲಿ ಡಚ್ಚರು ಈ ಸಾಧನೆ ಮಾಡಿದ್ದಾರೆ. ಜಾರ್ಜ್ ಮುನ್ಸೆ (191 ರನ್, 150 ಎಸೆತ, 14 ಬೌಂಡರಿ, 11 ಸಿಕ್ಸರ್) ಭರ್ಜರಿ ಬ್ಯಾಟಿಂಗ್ನಿಂದ ಸ್ಕಾಟ್ಲೆಂಡ್ ತಂಡ 6 ವಿಕೆಟ್ಗೆ 369 ರನ್ ಪೇರಿಸಿದರೆ, ಮ್ಯಾಕ್ಸ್ ಓ'ಡೌಡ್ (158*ರನ್, 130 ಎಸೆತ, 13 ಬೌಂಡರಿ, 4 ಸಿಕ್ಸರ್) ಪ್ರತಿಹೋರಾಟದ ಬಲದಿಂದ ನೆದರ್ಲೆಂಡ್ 49.2 ಓವರ್ಗಳಲ್ಲಿ 6 ವಿಕೆಟ್ಗೆ 374 ರನ್ ಸಿಡಿಸಿ ಜಯಿಸಿತು. ಆಸೀಸ್ ವಿರುದ್ಧ 2006ರಲ್ಲಿ 435 ಮತ್ತು 2016ರಲ್ಲಿ 372 ರನ್ಗಳ ಗುರಿಯನ್ನು ದಣ ಆಫ್ರಿಕಾ ಬೆನ್ನಟ್ಟಿರುವುದು ಏಕದಿನದಲ್ಲಿ ಮೊದಲೆರಡು ಚೇಸಿಂಗ್ ದಾಖಲೆಗಳಾಗಿವೆ.
ಜಾರ್ಜ್ ಮುನ್ಸೆ ಗಳಿಸಿದ 191 ರನ್ ಏಕದಿನ ಕ್ರಿಕೆಟ್ನಲ್ಲಿ ಅಸೋಸಿಯೇಟ್ ತಂಡವೊಂದರ ಬ್ಯಾಟರ್ ಗಳಿಸಿದ ಗರಿಷ್ಠ ರನ್ಗಳಾಗಿವೆ. 2010ರಲ್ಲಿ ಐರ್ಲೆಂಡ್ನ ಪೌಲ್ ಸ್ಟಿರ್ಲಿಂಗ್ 177 ರನ್ ಸಿಡಿಸಿದ್ದು ಹಿಂದಿನ ದಾಖಲೆ.
ಬಾಂಗ್ಲಾ ಏಕದಿನ ತಂಡಕ್ಕೆ ಮಿರಾಜ್ ಹೊಸ ನಾಯಕ
ಢಾಕಾ: ಬಾಂಗ್ಲಾದೇಶ ಏಕದಿನ ತಂಡದಿಂದ ನಾಯಕತ್ವದಿಂದ ನಜ್ಮುಲ್ ಹೊಸೈನ್ ಶಾಂಟೊರನ್ನು ವಜಾಗೊಳಿಸಲಾಗಿದ್ದು, ಆಲ್ರೌಂಡರ್ ಮೆಹಿದಿ ಹಸನ್ ಮಿರಾಜ್ರನ್ನು ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧ ಮತ್ತು ಆಗಸ್ಟ್ನಲ್ಲಿ ಭಾರತ ವಿರುದ್ಧ ನಡೆಯಲಿರುವ ಸರಣಿಗಳು ಅವರ ಮುಂದಿರುವ ಮೊದಲೆರಡು ಸವಾಲುಗಳಾಗಿವೆ. ಶಾಂಟೋ ಟೆಸ್ಟ್ ತಂಡ ಮತ್ತು ಲಿಟನ್ ದಾಸ್ ಟಿ20 ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. 2017ರಿಂದ ಇದುವರೆಗೆ ಬಾಂಗ್ಲಾ ಪರ 105 ಏಕದಿನ ಪಂದ್ಯ ಆಡಿರುವ 27 ವರ್ಷದ ಮಿರಾಜ್, 2 ಶತಕಗಳ ಸಹಿತ 1,617 ರನ್ ಮತ್ತು 110 ವಿಕೆಟ್ ಗಳಿಸಿದ್ದಾರೆ.