

ಟೋಕಿಯೊ: ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ಒಂದೇ ಎಸೆತ ಎಸೆದು ನೇರವಾಗಿ ಫೈನಲ್ಗೇರಿದ್ದಾರೆ. ಈ ಮೂಲಕ ಸತತ 2ನೇ ಸ್ವರ್ಣ ಪದಕ ಗೆಲುವಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಭಾರತದ ಇನ್ನೋರ್ವ ಜಾವೆಲಿನ್ ಥ್ರೋ ಪಟು ಸಚಿನ್ ಯಾದವ್ ಕೂಡ ಫೈನಲ್ಗೇರಿದ್ದರೆ, ಸ್ಪರ್ಧೆಯಲ್ಲಿದ್ದ ಇನ್ನಿಬ್ಬರು ಭಾರತೀಯರಾದ ರೋಹಿತ್ ಯಾದವ್ ಮತ್ತು ಯಶ್ವೀರ್ ಸಿಂಗ್ ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು. ಫೈನಲ್ ಸ್ಪರ್ಧೆ ಗುರುವಾರ ನಡೆಯಲಿದೆ.
27 ವರ್ಷದ ನೀರಜ್ ಬುಧವಾರ ನಡೆದ ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಮೊದಲ ಯತ್ನದಲ್ಲೇ 84.85 ಮೀ. ದೂರ ಭರ್ಜಿ ಎಸೆದರು. ಈ ಮೂಲಕ ನಂತರ 2 ಎಸೆತಗಳ ಅಗತ್ಯವಿಲ್ಲದೆ ಫೈನಲ್ ಪ್ರವೇಶಿಸಿದರು. ನೇರವಾಗಿ ಫೈನಲ್ಗೇರಲು 84.50 ಮೀ. ದೂರ ಎಸೆಯಬೇಕಾಗಿತ್ತು. ನೀರಜ್ ಜತೆಗೆ ಎ ಗುಂಪಿನಲ್ಲೇ ಸ್ಪರ್ಧಿಸಿದ ಸಚಿನ್ ಯಾದವ್ ನೇರವಾಗಿ ಫೈನಲ್ಗೇರದಿದ್ದರೂ, ಗರಿಷ್ಠ 83.67 ಮೀ. ಎಸೆತದೊಂದಿಗೆ ಒಟ್ಟಾರೆ 10ನೇ ಸ್ಥಾನಿಯಾಗಿ 12 ಎಸೆತಗಾರರ ಫೈನಲ್ಗೆ ಅರ್ಹತೆ ಗಳಿಸುವಲ್ಲಿ ಯಶಸ್ವಿ ಯಾದರು. ಬಿ ಗುಂಪಿನಲ್ಲಿ ಸ್ಪರ್ಧಿಸಿದ ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ರೋಹಿತ್ ಯಾದವ್ (77.81 ಮೀ) ಮತ್ತು ಯಶ್ವೀರ್ ಸಿಂಗ್ (77.51 ಮೀ) ಕ್ರಮವಾಗಿ 28 ಮತ್ತು 30ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಳೆದ ಆವೃತ್ತಿಯಲ್ಲಿ ಮೂವರು ಭಾರತೀಯರು ಜಾವೆಲಿನ್ ಥ್ರೋ ಫೈನಲ್ನಲ್ಲಿ ಸ್ಪರ್ಧಿಸಿದ್ದರು.
ಅರ್ಹತಾ ಸುತ್ತಿನಲ್ಲಿ ಗ್ರೆನೇಡಾದ ಆಂಡರ್ಸನ್ ಪೀಟರ್ಸ್ ಸರ್ವಾಧಿಕ 89.53 ಮೀ. ದೂರ ಭರ್ಜಿ ಎಸೆದರೆ, ಜರ್ಮನಿಯ ಜೂಲಿಯನ್ ವೆಬರ್ 87.21 ಮೀ, ಕೀನ್ಯಾದ ಜೂಲಿಯಸ್ ಯೆಗೋ 85.96 ಮೀ, ಪೋಲೆಂಡ್ನ ಡೇವಿಡ್ ವೆಗ್ನರ್ 85.67 ಮೀ, ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ 85.28 ಮೀ. ಎಸೆದರು. ನೀರಜ್ ಅರ್ಹತಾ ಸುತ್ತಿನಲ್ಲಿ ಒಟ್ಟಾರೆ 6ನೇ ಸ್ಥಾನ ಪಡೆದರು. ಬಿ ಗುಂಪಿನಲ್ಲಿ ಸ್ಪರ್ಧಿಸಿದ 28 ವರ್ಷದ ನದೀಂ ಮೊದಲ 2 ಎಸೆತಗಳಲ್ಲಿ 80 ಮೀ. ಗಡಿ ದಾಟದೆ ನಿರಾಸೆ ಅನುಭವಿಸಿದರು. ಕೊನೆಗೂ 3ನೇ ಹಾಗೂ ಅಂತಿಮ ಯತ್ನದಲ್ಲಿ ನದೀಂ ಫೈನಲ್ ಮಾನದಂಡ ತಲುಪುವಲ್ಲಿ ಯಶಸ್ವಿಯಾದರು. ಫೈನಲ್ನಲ್ಲಿ ನೀರಜ್- ನದೀಂ ಕಳೆದ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಮೊದಲ ಬಾರಿ ಮುಖಾಮುಖಿ ಆಗಲಿದ್ದಾರೆ.
ಭಾರತದ ಅಥ್ಲೀಟ್ ಅನಿಮೇಶ್ ಕುಜೂರ್ ಪುರುಷರ 200 ಮೀ. ಓಟದ ಹೀಟ್ಸ್ನಲ್ಲಿ 20.77 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ 9ನೇ ಹಾಗೂ ಕೊನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು. ವಿಶ್ವ ಅಥ್ಲೆಟಿಕ್ಸ್ನ 200 ಮೀ. ವಿಭಾಗದಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎನಿಸಿದ ಅನಿಮೇಶ್, ಒಟ್ಟಾರೆಯಾಗಿ 42ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಭಾರತದ ಪ್ರವೀಣ್ ಚಿತ್ರವೇಲ್ ಮತ್ತು ಅಬ್ದುಲ್ಲಾ ಅಬೂಬಕರ್ ಪುರುಷರ ಟ್ರಿಪಲ್ ಜಂಪ್ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 15 ಮತ್ತು 24ನೇ ಸ್ಥಾನಕ್ಕೆ ತೃಪ್ತಿಪಟ್ಟು, ಫೈನಲ್ಗೇರಲು ವಿಫಲರಾದರು. ಅಬ್ದುಲ್ಲಾ ಗರಿಷ್ಠ 16.33 ಮೀ. ದೂರ ನೆಗೆದು ಎ ಗುಂಪಿನಲ್ಲಿ 10ನೇ ಸ್ಥಾನ ಪಡೆದರೆ, ಚಿತ್ರವೇಲ್ 16.74 ಮೀ. ಜಿಗಿದು ಬಿ ಗುಂಪಿನಲ್ಲಿ 8ನೇ ಸ್ಥಾನ ಗಳಿಸಿದರು.