

ನವದೆಹಲಿ: ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಕುಸ್ತಿಪಟು ವಿನೇಶ್ ಪೋಗಟ್ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇದರಿಂದ ಈ ವರ್ಷ ಖೇಲ್ರತ್ನಕ್ಕೆ ಶಿಫಾರಸುಗೊಂಡ ಕ್ರೀಡಾಪಟುಗಳ ಸಂಖ್ಯೆ 4ಕ್ಕೇರಿದೆ. ಈ ಮುನ್ನ ಶೂಟರ್ ಅಂಜುಮ್ ಮೌದ್ಗಿಲ್ ಮತ್ತು ಕ್ರಿಕೆಟರ್ ರೋಹಿತ್ ಶರ್ಮ ಹೆಸರು ಶಿಫಾರಸುಗೊಂಡಿತ್ತು.
22 ವರ್ಷದ ನೀರಜ್ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟದಿಂದ (ಎಎಫ್ಐ) ಸತತ 3ನೇ ವರ್ಷ ಖೇಲ್ರತ್ನಕ್ಕೆ ಶಿಫಾರಸುಗೊಂಡಿದ್ದಾರೆ. 2018ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿಯ ಸಮಾಧಾನ ದೊರೆತಿದ್ದರೆ, ಕಳೆದ ವರ್ಷ ನಿರಾಸೆ ಅನುಭವಿಸಿದ್ದರು. 2018ರ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ನೀರಜ್ ಸ್ವರ್ಣ ಜಯಿಸಿದ್ದರು. ಅವರು ಈಗಾಗಲೆ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದಾರೆ. ಅಥ್ಲೆಟಿಕ್ಸ್ ಕ್ಷೇತ್ರದಿಂದ ಸ್ಪಿ ್ರಟರ್ ದ್ಯುತಿ ಚಂದ್ ಈಗಾಗಲೆ ಒಡಿಶಾ ಸರ್ಕಾರದಿಂದ ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ. ಹೀಗಾಗಿ ಎಎಫ್ಐನಿಂದ ಯಾವುದೆ ಅಥ್ಲೀಟ್ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸುಗೊಂಡಿಲ್ಲ.
ವಿನೇಶ್ ಸತತ 2ನೇ ವರ್ಷ ರೇಸ್ನಲ್ಲಿ: ಕಾಮನ್ವೆಲ್ತ್-ಏಷ್ಯನ್ ಗೇಮ್್ಸ ಸ್ವರ್ಣ ವಿಜೇತೆ ವಿನೇಶ್ ಪೋಗಟ್ ಹೆಸರನ್ನು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ) ಸೋಮವಾರ ಖೇಲ್ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ. 25 ವರ್ಷದ ವಿನೇಶ್ ಸತತ 2ನೇ ವರ್ಷ ಈ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ. ಕಳೆದ ವರ್ಷ ಸಹ-ಪೈಲ್ವಾನ್ ಭಜರಂಗ್ ಪೂನಿಯಾಗೆ ಖೇಲ್ರತ್ನ ಒಲಿದ ಕಾರಣ ವಿನೇಶ್ ನಿರಾಸೆ ಅನುಭವಿಸಿದ್ದರು. ಅವರು 2016ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದರು. 53 ಕೆಜಿ ವಿಭಾಗದಿಂದ ವಿನೇಶ್ ಈಗಾಗಲೆ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದಾರೆ. ಕರೊನಾ ವೈರಸ್ ಹಾವಳಿಯಿಂದಾಗಿ ಈ ಬಾರಿ ಒಂದು ತಿಂಗಳು ತಡವಾಗಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕ್ರಿಯೆ ಆರಂಭಗೊಂಡಿದ್ದು, ಶಿಫಾರಸುಗಳನ್ನು ಸಲ್ಲಿಸಲು ಜೂನ್ 3ರವರೆಗೆ ಗಡುವು ನೀಡಲಾಗಿದೆ. -ಪಿಟಿಐ
ಅರ್ಜುನ ಕೂಡ ಬೇಕೆಂದ ಸಾಕ್ಷಿ ಮಲಿಕ್: ಈಗಾಗಲೆ ಖೇಲ್ರತ್ನ ಪುರಸ್ಕೃತರಾಗಿದ್ದರೂ ಅರ್ಜುನ ಪ್ರಶಸ್ತಿಯನ್ನೂ ಪಡೆವ ಆಸೆಯಿಂದ ವೇಟ್ಲಿಫ್ಟರ್ ಮೀರಾಬಾಯಿ ಚಾನು ಹೆಸರು ಶಿಫಾರಸುಗೊಂಡಿರುವ ಬೆನ್ನಲ್ಲೇ, 2016ರ ಖೇಲ್ರತ್ನ ಪುರಸ್ಕೃತೆ ಕುಸ್ತಿಪಟು ಸಾಕ್ಷಿ ಮಲಿಕ್ ಕೂಡ ತಮ್ಮ ಹೆಸರನ್ನು ಈ ಬಾರಿ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಡಬ್ಲ್ಯುಎಫ್ಐಗೆ ಮನವಿ ಸಲ್ಲಿಸಿದ್ದಾರೆ. ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಅವರ ಇತ್ತೀಚೆಗಿನ ನಿರ್ವಹಣೆ ಉತ್ತಮವಾಗಿಲ್ಲ. ಹೀಗಾಗಿ ಡಬ್ಲ್ಯುಎಫ್ಐ ಈ ಬಾರಿ ಅವರ ಹೆಸರನ್ನು ಶಿಫಾರಸು ಮಾಡುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ‘ರಿಯೋ ಒಲಿಂಪಿಕ್ಸ್ ಬಳಿಕ ಸಾಕ್ಷಿ ಯಾವುದೇ ಸಾಧನೆ ಮಾಡಿಲ್ಲ. ರಿಯೋ ಪದಕಕ್ಕಾಗಿ ಅವರು ನೇರವಾಗಿ ಖೇಲ್ರತ್ನ ಪಡೆದಿದ್ದಾರೆ. ಆದರೆ ಈಗ ಅರ್ಜುನವನ್ನೂ ಬಯಸಿದ್ದಾರೆ’ ಎಂದು ಡಬ್ಲ್ಯುಎಫ್ಐ ಮೂಲಗಳು ತಿಳಿಸಿವೆ. ಸಾಕ್ಷಿಗಿಂತ ಯುವ ಪೈಲ್ವಾನರಾದ ದೀಪಕ್ ಪೂನಿಯಾ ಮತ್ತು ರಾಹುಲ್ ಅವಾರೆ ಹೆಸರುಗಳು ಅರ್ಜುನಕ್ಕೆ ಶಿಫಾರಸುಗೊಳ್ಳುವ ಸಾಧ್ಯತೆ ಹೆಚ್ಚಿದೆ.