

Sachin Yadav: ಪ್ರಸ್ತುತ ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025ರ ಫೈನಲ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ಸಚಿನ್ ಯಾದವ್ ಮಿಂಚಿದರೆ, ಚಿನ್ನದ ಹುಡುಗ ನೀರಜ್ ಚೋಪ್ರಾ 8ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಪಾಕಿಸ್ತಾನದ ಅರ್ಷದ್ ನದೀಪ್ ಮತ್ತು ನೀರಜ್ ಚೋಪ್ರಾ ಜಾವೆಲಿನ್ ಫೈನಲ್‌ನಲ್ಲಿ ಎದುರು-ಬದುರು ಪೈಪೋಟಿಗಿಳಿಯಲಿದ್ದಾರೆ ಎಂದೇ ಕ್ರೀಡಾಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, 8ನೇ ಸ್ಥಾನವನ್ನು ಅಲಂಕರಿಸಿದ ನೀರಜ್, ಪದಕ ಗೆಲ್ಲುವಲ್ಲಿ ವಿಫಲರಾದರು. ಇನ್ನು ಅರ್ಷದ್ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ಇಬ್ಬರು ಘಟಾನುಘಟಿಗಳನ್ನು ಹಿಂದಿಕ್ಕಿ, ನಾಲ್ಕನೇ ಸ್ಥಾನಕ್ಕೇರಿದ ಸಚಿನ್ ಯಾದವ್, ಸದ್ಯ ಭಾರತೀಯರ ಹೊಸ ಜಾವೆಲಿನ್ ಸ್ಟಾರ್ ಆಗಿ ಕಾಣಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.
ಫೈನಲ್‌ನಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ 86.27 ಮೀಟರ್ ದೂರ ಜಾವೆಲಿನ್ ಎಸೆದ ಸಚಿನ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದು ಸಚಿನ್ ಯಾದವ್ ಮೇಲಿನ ಭರವಸೆಯನ್ನು ದುಪ್ಪಟ್ಟಾಗಿಸಿದೆ.
ಅಕ್ಟೋಬರ್ 25, 1999ರಂದು ಭಾರತದ ಉತ್ತರ ಪ್ರದೇಶದ ಖೇಕ್ರಾದಲ್ಲಿ ಜನಿಸಿದ ಸಚಿನ್, ಆರಂಭದಲ್ಲಿ ತಾನೊಬ್ಬ ಕ್ರಿಕೆಟ್ ಬೌಲರ್ ಆಗಬೇಕೆಂಬ ಉತ್ಸಾಹ ಹೊಂದಿದ್ದರಂತೆ. 19ನೇ ವಯಸ್ಸಿನಲ್ಲಿದ್ದಾಗ ಜಾವೆಲಿನ್ ಎಸೆತದತ್ತ ಚಿತ್ತ ಹರಿಸಿದ ಈತ, ಈ ಕ್ರೀಡೆಯನ್ನೇ ಕರಗತ ಮಾಡಿಕೊಂಡು ಇಂದು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ದೈತ್ಯ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿದ್ದಾರೆ. ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆರಾಧಿಸುವ ಸಚಿನ್, ಈ ಇಬ್ಬರು ಕ್ರಿಕೆಟಿಗರನ್ನು ತಮ್ಮ ಮೆಚ್ಚಿನ ಸ್ಟಾರ್ಗಳು ಎಂದು ಬಣ್ಣಿಸಿದ್ದಾರೆ.
2025ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಚಿನ್, ಈ ವರ್ಷದ ಆರಂಭದಲ್ಲಿ, ಡೆಹ್ರಾಡೂನ್‌ನಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 84.39 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು,(ಏಜೆನ್ಸೀಸ್).