ಫೆಡರೇಷನ್​ ಕಪ್​ನಲ್ಲಿ ಸ್ವರ್ಣ ಪದಕ ಗೆದ್ದ ನೀರಜ್​ ಚೋಪ್ರಾ; ನಿಕಟ ಪೈಪೋಟಿ ನೀಡಿದ ಕನ್ನಡಿಗ ಮನು

web javelin
Published on

ಭುವನೇಶ್ವರ: ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ 3 ವರ್ಷಗಳ ಬಳಿಕ ಭಾರತದಲ್ಲಿ ಭಾಗವಹಿಸಿದ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ತವರಿಗೆ ಯಶಸ್ವಿ ಪುನರಾಗಮನ ಕಂಡಿದ್ದಾರೆ. ನೀರಜ್​ಗೆ ನಿಕಟ ಪೈಪೋಟಿ ಒಡ್ಡಿದ ಕನ್ನಡಿಗ ಮನು ಡಿ.ಪಿ. ರಜತ ಪದಕ ಗೆದ್ದುಕೊಂಡರೂ, ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸುವಲ್ಲಿ ವಿಫಲರಾದರು.

ಕಳಿಂಗಾ ಸ್ಟೇಡಿಯಂನಲ್ಲಿ ಕೂಟದ 4ನೇ ಹಾಗೂ ಕೊನೇ ದಿನವಾದ ಬುಧವಾರ ನಡೆದ ಜಾವೆಲಿನ್​ ಎಸೆತದ ಫೈನಲ್​ನಲ್ಲಿ ನೇರವಾಗಿ ಸ್ಪರ್ಧಿಸಿದ ನೀರಜ್​ 82.27 ಮೀ. ಎಸೆದು ಅಗ್ರಸ್ಥಾನ ಪಡೆದರೆ, ಮನು 82.06 ಮೀ. ಎಸೆತದೊಂದಿಗೆ 2ನೇ ಸ್ಥಾನ ಗಳಿಸಿದರು. ಮಹಾರಾಷ್ಟ್ರದ ಉತ್ತಮ್​ ಬಾಲಾಸಾಹೇಬ್​ 78.39 ಮೀ. ಎಸೆತದೊಂದಿಗೆ ಕಂಚು ಒಲಿಸಿಕೊಂಡರೆ, ಒಡಿಶಾದ ಕಿಶೋರ್​ ಜೆನಾ 75.49 ಮೀ. ಎಸೆತದೊಂದಿಗೆ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. 26 ವರ್ಷದ ನೀರಜ್​ 2021ರ ಮಾರ್ಚ್​ ಬಳಿಕ ಮೊದಲ ಬಾರಿ ಭಾರತದಲ್ಲಿ ಸ್ಪರ್ಧಿಸಿದರು.

ಮೊದಲ ಎಸೆತದಲ್ಲಿ ನೀರಜ್​ 82 ಮೀ. ಎಸೆದರೆ, ಮನು 82.06 ಮೀ. ಎಸೆತದೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿದರು. 2ನೇ ಯತ್ನದಲ್ಲಿ ನೀರಜ್​ ಫೌಲ್​ ಮಾಡಿದರೆ, ಮನು 77.23 ಮೀ. ಎಸೆದರು. 3ನೇ ಯತ್ನದಲ್ಲಿ ಮತ್ತೆ ನೀರಜ್​ 81.29 ಮೀ. ಮತ್ತು ಮನು 81.43 ಮೀ. ಎಸೆದರು. 4ನೇ ಯತ್ನದಲ್ಲಿ ನೀರಜ್​ 82.27 ಮೀ. ಎಸೆದು ಅಗ್ರಸ್ಥಾನಕ್ಕೇರಿದರೆ, ಮನು 81.47 ಎಸೆತದೊಂದಿಗೆ 2ನೇ ಸ್ಥಾನಕ್ಕಿಳಿದರು. ಮನು 5,6ನೇ ಯತ್ನದಲ್ಲಿ ಫೌಲ್​ ಮಾಡಿದರೆ, ನೀರಜ್​ ಸ್ವರ್ಣ ಪದಕ ಖಚಿತವೆನಿಸಿದ್ದರಿಂದ ಕೊನೇ 2 ಎಸೆತಗಳನ್ನು ಎಸೆಯಲಿಲ್ಲ. ಒಲಿಂಪಿಕ್ಸ್​ ಅರ್ಹತೆಗೆ ಮನು ಕನಿಷ್ಠ 85 ಮೀ. ದೂರ ಎಸೆಯಬೇಕಾಗಿತ್ತು.

ಇತ್ತೀಚೆಗೆ ಡೈಮಂಡ್​ ಲೀಗ್​ ಮೊದಲ ಚರಣದಲ್ಲಿ ಸ್ಪರ್ಧಿಸಿ 88.36 ಮೀ. ಎಸೆತದೊಂದಿಗೆ ಕೇವಲ 2 ಸೆಂಟಿಮೀಟರ್​ನಿಂದ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ನೀರಜ್​, ಈ ಬಾರಿ ತವರಿನಲ್ಲೂ 90 ಮೀಟರ್​ ಸನಿಹವೂ ತಲುಪಲಿಲ್ಲ. ಇನ್ನು ಜುಲೈ 7ರಂದು ಡೈಮಂಡ್​ ಲೀಗ್​ನ ಪ್ಯಾರಿಸ್​ ಚರಣದಲ್ಲಿ ಅವರು ಮತ್ತೆ ಸ್ಪರ್ಧಿಸಲಿದ್ದಾರೆ.

ರಾಜ್ಯದ ಪೂವಮ್ಮ, ಸ್ನೇಹಾ, ಅಭಿನಯಾಗೆ ಚಿನ್ನ

ಕರ್ನಾಟಕದ ಪೂವಮ್ಮ ಆರ್​, ಸ್ನೇಹಾ ಎಸ್​. ಎಸ್​. ಮತ್ತು ಅಭಿನಯಾ ಶೆಟ್ಟಿ ಕೂಟದ ಕೊನೇ ದಿನ ಸ್ವರ್ಣ ಪದಕ ಗೆದ್ದುಕೊಂಡರು. ಅನುಭವಿ ಅಥ್ಲೀಟ್​ ಪೂವಮ್ಮ ಮಹಿಳೆಯರ 400 ಮೀ. ಓಟದಲ್ಲಿ 53.32 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಅಗ್ರಸ್ಥಾನ ಅಲಂಕರಿಸಿದರು. ಸ್ನೇಹಾ ಮಹಿಳೆಯರ 100 ಮೀ. ಓಟದಲ್ಲಿ 11.63 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಅಗ್ರಸ್ಥಾನ ಪಡೆದರು. ಅಭಿನಯಾ ಶೆಟ್ಟಿ ಹೈಜಂಪ್​ ಸ್ಪರ್ಧೆಯಲ್ಲಿ 1.77 ಮೀಟರ್​ ಜಿಗಿದು ಮೊದಲ ಸ್ಥಾನ ಸಂಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net