

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಉಳಿಸಿಕೊಳ್ಳಲು ವಿಫಲರಾದ ಮತ್ತು ದೀರ್ಕಾಲದಿಂದ ತೊಡೆಸಂದು ಗಾಯಕ್ಕೆ ಶುಶ್ರೂಷೆ ಪಡೆಯುತ್ತಿರುವ ನಡುವೆಯೂ ನೀರಜ್ ಚೋಪ್ರಾ, ಆಗಸ್ಟ್ 22ರಿಂದ ನಡೆಯಲಿರುವ ಲೌಸನ್ನೆ ಡೈಮಂಡ್ ಲೀಗ್ನಲ್ಲಿ ಮರಳಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದೇ ವೇಳೆ, ದೀರ್ಘಕಾಲದಿಂದ ಚರ್ಚೆಯಲ್ಲಿ 90 ಮೀಟರ್ ಎಸೆತವನ್ನು ದೇವರಿಗೆ ಬಿಟ್ಟಿದ್ದೇನೆ ಎಂದು ನೀರಜ್ ಹೇಳಿದ್ದಾರೆ.
ಪ್ಯಾರಿಸ್ನಲ್ಲಿ ಒಂದು ಮಾತ್ರ ಕ್ರಮಬದ್ಧ ಎಸೆತ ಎಸೆದಿದ್ದ 26 ವರ್ಷದ ನೀರಜ್, 89.45 ಮೀ. ಎಸೆತದೊಂದಿಗೆ ರಜತ ಪದಕಕ್ಕೆ ತೃಪ್ತಿಪಟ್ಟಿದ್ದರು. ಜತೆಗೆ 90 ಮೀ. ಗಡಿ ದಾಟುವ ನಿರೀಕ್ಷೆ ಹುಸಿಯಾಗಿಸಿದ್ದರು. 92.97 ಮೀ. ಎಸೆದ ಪಾಕಿಸ್ತಾನದ ಅರ್ಷದ್ ನದೀಂ ಚಿನ್ನದ ಪದಕ ಒಲಿಸಿಕೊಂಡಿದ್ದರು.
ಆಗಸ್ಟ್ 8ರಂದು ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ನಲ್ಲಿ ಸ್ಪರ್ಧಿಸಿದ ಬಳಿಕ ಸ್ವಿರ್ಜಲೆಂಡ್ಗೆ ತೆರಳಿದ್ದ ನೀರಜ್, ಈಗಾಗಲೆ ಅಭ್ಯಾಸ ಆರಂಭಿಸಿದ್ದು, ಗಾಯದ ಸಮಸ್ಯೆಯ ನಡುವೆ ಹಾಲಿ ಋತುವಿನ ಉಳಿದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ.
ಸೆಪ್ಟೆಂಬರ್ 13&14ರಂದು ಬ್ರಸೆಲ್ಸ್ನಲ್ಲಿ ಹಾಲಿ ಋತುವಿನ ಕೊನೆಯ ಡೈಮಂಡ್ ಲೀಗ್ನಲ್ಲಿ ಭಾಗವಹಿಸಿದ ಬಳಿಕ ನೀರಜ್, ತೊಡೆಸಂದು ಗಾಯಕ್ಕೆ ವೈದ್ಯರನ್ನು ಭೇಟಿಯಾಗಲಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ದಿನಾಂಕದ ಬಗ್ಗೆ ನಿರ್ಧರಿಸಲಿದ್ದಾರೆ. ಕಳೆದ ವರ್ಷದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸ್ವರ್ಣ ಪದಕ ಗೆದ್ದ ಸಮಯದಿಂದಲೂ ನೀರಜ್, ತೊಡೆಸಂದು ಗಾಯದಿಂದ ಬಳಲುತ್ತಿದ್ದಾರೆ. ಬ್ರಸೆಲ್ಸ್ನಲ್ಲಿ ನಡೆಯುವ ಫೈನಲ್ಸ್ಗೆ ಅರ್ಹತೆ ಪಡೆಯಬೇಕಾದರೆ ನೀರಜ್ ಡೈಮಂಡ್ ಲೀಗ್ ಚರಣಗಳ ಅಗ್ರ 6ರಲ್ಲಿ ಸ್ಥಾನ ಸಂಪಾದಿಸಬೇಕಿದೆ.
*ನನಗೀಗ ಜಾವೆಲಿನ್ ಎಸೆತದ ಅಂತರ ವೃದ್ಧಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನಾನು ಗಾಯದಿಂದ ಸಂಪೂರ್ಣ ಮುಕ್ತನಾಗಿರಬೇಕಾಗುತ್ತದೆ. ಈಗ ನಾನು ಶೇ. 100 ನಿರ್ವಹಣೆ ತೋರಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರೂ, ಗಾಯದಿಂದಾಗಿ ಮೈದಾನದಲ್ಲಿ ಅದು ಸಾಧ್ಯವಾಗುತ್ತಿಲ್ಲ. ನನ್ನ ದೇಹ ಮತ್ತು ಮನಸ್ಸು ಹೆಚ್ಚುವರಿ ಪ್ರಯತ್ನ ಹಾಕುವುದನ್ನು ತಡೆಯುತ್ತಿದೆ.
| ನೀರಜ್ ಚೋಪ್ರಾ