ಡೈಮಂಡ್ ಲೀಗ್‌: ಫೈನಲ್‌ ಪ್ರವೇಶಿಸಿದ ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ!

niraj
Published on

ನವದೆಹಲಿ: ಬೆಲ್ಜಿಯಂ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್‌ ಫೈನಲ್​ಗೆ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರವೇಶಿಸಿದ್ದಾರೆ.

ವಿಶ್ವದಾದ್ಯಂತ ನಡೆದ 14 ಸೀರಿಸ್​ಗಳ ಅಂತ್ಯಕ್ಕೆ ನೀರಜ್ ಚೋಪ್ರಾ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಸೆಪ್ಟೆಂಬರ್ 13 ಮತ್ತು 14 ರಂದು ಬೆಲ್ಜಿಯಂ ಬ್ರಸೆಲ್ಸ್‌ನಲ್ಲಿ ಡೈಮಂಡ್‌ ಲೀಗ್‌ ಫೈನಲ್‌ ನಡೆಯಲಿದೆ. ದೋಹಾ ಮತ್ತು ಲೌಸಾನ್‌ನಲ್ಲಿ ನಡೆದ ಆವೃತ್ತಿಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಚೋಪ್ರಾ 14 ಅಂಕಗಳನ್ನು ಗಳಿಸಿದರು.

ಜ್ಯೂರಿಕ್ ಆವೃತ್ತಿಯಿಂದ ಹೊರಗುಳಿದಿದ್ದ ನೀರಜ್ ಚೋಪ್ರಾ. ಈ ಬಾರಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಸದ್ಯ 26ರ ಹರೆಯದ ನೀರಜ್‌, ಜೆಕಿಯಾದ ಜಾಕುಬ್ ವಡ್ಲೆಚ್ ಅವರಿಗಿಂತ ಎರಡು ಅಂಕ ಹಿಂದೆ ಬಿದ್ದಿದ್ದಾರೆ. ಗ್ರೆನಡಾದ ಆಂಡರ್ಸನ್ ಪೀಟರ್ಸ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಕ್ರಮವಾಗಿ 29 ಮತ್ತು 21 ಅಂಕಗಳೊಂದಿಗೆ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ: 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗೋಲ್ಡನ್​ ಬಾಯ್ ನೀರಜ್‌ ಚೋಪ್ರಾ ಇತಿಹಾಸವನ್ನು ಬರೆದಿದ್ದರು. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್‌ ಚೋಪ್ರಾ 87.58 ಮೀಟರ್‌ ಜಾವೆಲಿನ್‌ ಅನ್ನು ಎಸೆಯುವ ಮೂಲಕ ತಮ್ಮ ಒಲಿಂಪಿಕ್ಸ್‌ನ ಮೊಟ್ಟ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದರು. ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಟ್ರ್ಯಾಕ್‌ ಹಾಗೂ ಫೀಲ್ಡ್‌ ಅಥ್ಲಿಟ್‌ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದರು. ಇವರು ಏಷ್ಯನ್‌ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿಯೂ ಚಿನ್ನದ ಪದಕಗಳ ಸಾಧನೆಯನ್ನು ಮಾಡಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ನೀರಜ್ ಚೋಪ್ರಾ 89.45 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಇನ್ನು ಇದೇ ಸ್ಪರ್ಧೆಯಲ್ಲಿ ಕಳೆದ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ದಾಖಲೆಯ 92.97 ಮೀ. ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದಲ್ಲದೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net