ಪ್ರೊ ಕಬಡ್ಡಿ ಲೀಗ್​ನಲ್ಲಿ ದಬಾಂಗ್​ ದೆಹಲಿಗೆ ಬೆಚ್ಚಿದ ಬೆಂಗಾಲ್ ವಾರಿಯರ್ಸ್​​​

pro web
Published on

ಚೆನ್ನೈ: ನಾಯಕ ನವೀನ್​ ಕುಮಾರ್​ (11 ಅಂಕ) ಅವರ 11 ಯಶಸ್ವಿ ರೈಡಿಂಗ್​ಗಳ ಬಲದಿಂದ ದಬಾಂಗ್​ ದೆಹಲಿ ತಂಡ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್​ ಬೆಂಗಾಲ್​ ವಾರಿಯರ್ಸ್​ ಎದುರು 38-29 ಅಂತರದಿಂದ ಗೆಲುವು ದಾಖಲಿಸಿದೆ.

ಎಸ್​ಡಿಎಟಿ ಮಲ್ಟಿ ಪರ್ಪಸ್​ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಚರಣದಲ್ಲಿ ಭಾನುವಾರದ ಮೊದಲ ಪಂದ್ಯದಲ್ಲಿ ದೆಹಲಿ ಮೊದಲಾರ್ಧದಲ್ಲೇ ಬೆಂಗಾಲ್​ ತಂಡವನ್ನು 2 ಬಾರಿ ಆಲೌಟ್​ ಮಾಡಿ 23-16ರಿಂದ ಮುನ್ನಡೆ ಸಾಧಿಸಿತು. ದ್ವೀತಿಯಾರ್ಧದಲ್ಲಿ ಬೆಂಗಾಲ್​ ನಿಕಟ ಪ್ರತಿಸ್ಪರ್ಧೆ ತೋರಿದರೂ, ದೆಹಲಿ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಬೆಂಗಾಲ್​ ಪರ ನಾಯಕ ಮಣಿಂದರ್​ ಸಿಂಗ್​ (6) ದೆಹಲಿ ರಕ್ಷಣಾ ವಿಭಾಗವನ್ನು ಬೇಧಿಸುವಲ್ಲಿ ಹೆಚ್ಚಿನ ಯಶ ಕಾಣಲಿಲ್ಲ. ದೆಹಲಿ ಡಿಫೆಂಡರ್​ಗಳಾದ ಯೋಗೇಶ್​ (6) ಮತ್ತು ಆಶಿಶ್​ (6) ಭದ್ರ ರಕ್ಷಣಾ ಕೋಟೆ ನಿರ್ಮಿಸಿದರು. ಬೆಂಗಾಲ್​ ಪರ ರೈಡರ್​ ನಿತಿನ್​ ಕುಮಾರ್​ (9) ಹೋರಾಟ ವ್ಯರ್ಥವಾಯಿತು.

ತಲೈವಾಸ್​ಗೆ ತವರಿನಲ್ಲಿ ಹ್ಯಾಟ್ರಿಕ್​ ಸೋಲು: ತಮಿಳ್​ ತಲೈವಾಸ್​ ತಂಡ ತವರು ಚರಣದಲ್ಲಿ ಸತತ 3ನೇ ಸೋಲು ಅನುಭವಿಸಿದೆ. ತಲೈವಾಸ್​ ತಂಡ ದಿನದ 2ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ ತಂಡದ ಸಂಟಿತ ಹೋರಾಟದ ಎದುರು 29-42 ಅಂಕಗಳಿಂದ ಪರಾಭವಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net