

ದುಬೈ: ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ 113ನೇ ಜನ್ಮದಿನವಾದ ಸೋಮವಾರದಂದು ಐಪಿಎಲ್ 13ನೇ ಆವೃತ್ತಿ ರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಯಿತು. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್ನಲ್ಲಿ ಕಂಡ ಗೆಲುವನ್ನು ಆರ್ಸಿಬಿ ತಂಡದ ವೇಗದ ಬೌಲರ್ ನವದೀಪ್ ಸೈನಿ ಅವರು, ಸ್ವಾತಂತ್ರ್ಯವೀರ ಭಗತ್ ಸಿಂಗ್ ಅವರಿಗೇ ಅರ್ಪಿಸಿರುವುದು ವಿಶೇಷವಾಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಟೈಗೆ ತೃಪ್ತಿಪಟ್ಟ ಬಳಿಕ ಸೂಪರ್ಓವರ್ನಲ್ಲಿ ಒಲಿಸಿಕೊಂಡ ಗೆಲುವನ್ನು ಶಹೀದ್ ಭಗತ್ ಸಿಂಗ್ ಜೀ ಮತ್ತು ಕರೊನಾ ವಾರಿಯರ್ಸ್ಗೆ ಅರ್ಪಿಸುವುದಾಗಿ ಸೈನಿ ಅವರು ಪಂದ್ಯದ ಬಳಿಕ ಟ್ವೀಟ್ ಮಾಡಿದ್ದಾರೆ.
ಸೂಪರ್ ಓವರ್ನಲ್ಲಿ ಆರ್ಸಿಬಿ ತಂಡ ಗೆಲುವು ದಾಖಲಿಸುವಲ್ಲಿ ನವದೀಪ್ ಸೈನಿ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದರು. ಹಾರ್ದಿಕ್ ಪಾಂಡ್ಯ ಮತ್ತು ಕೈರಾನ್ ಪೊಲ್ಲಾರ್ಡ್ರಂಥ ಸ್ಫೋಟಕ ಬ್ಯಾಟ್ಸ್ಮನ್ಗಳಿಗೆ ಅವರು ಕೇವಲ 7 ರನ್ ಬಿಟ್ಟುಕೊಟ್ಟಿದ್ದರು.
ಆರ್ಸಿಬಿ ತಂಡ ಈಗಾಗಲೆ ಕರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸುವ ಸಲುವಾಗಿ ತಂಡದ ಜೆರ್ಸಿ ಮತ್ತು ಅಭ್ಯಾಸ ಜೆರ್ಸಿಯಲ್ಲಿ ಕರೊನಾ ವಾರಿಯರ್ಸ್ಗೆ ಧನ್ಯವಾದದ ಸಂದೇಶ ಮುದ್ರಿಸಿದೆ. ಕರೊನಾ ವಾರಿಯರ್ಸ್ ಹೆಸರು ಒಳಗೊಂಡ ಕೆಲ ವಿಶೇಷ ಜೆರ್ಸಿಯನ್ನೂ ಸಿದ್ಧಪಡಿಸಿದೆ. ಆರ್ಸಿಬಿ ತಂಡದ ಕೆಲ ಆಟಗಾರರು ಟ್ವಿಟರ್ನಲ್ಲಿ ತಮ್ಮ ಹೆಸರನ್ನು ಕರೊನಾ ವಾರಿಯರ್ಸ್ ಹೆಸರಾಗಿಯೂ ಬದಲಾಯಿಸಿಕೊಂಡಿದ್ದಾರೆ.