

ನವದೆಹಲಿ: ಅಪರೂಪದ ವೈದ್ಯಕಿಯ ಸ್ಥಿತಿ "ಫೋಕೋಮೆಲಿಯಾ'ದಿಂದಾಗಿ ಬಾಲ್ಯದಿಂದಲೂ ಎರಡೂ ಕೈಗಳ ಬೆಳವಣಿಗೆ ಕಾಣದಿರುವ 16 ವರ್ಷದ ಬಿಲ್ಗಾರ್ತಿ ಶೀತಲ್ ದೇವಿ, ಅಂತಾರಾಷ್ಟ್ರೀಯ ಪ್ಯಾರಾ ಆರ್ಚರಿ ಚಾಂಪಿಯನ್ ಆಗಿದ್ದಾರೆ. ಅವರು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸ್ವೀಕರಿಸುವ ವೇಳೆ ಎಲ್ಲರ ಹೃದಯ ಗೆದ್ದರು. ಅವರಿಗೆ ಪ್ರಶಸ್ತಿ ಪ್ರದಾನ ಮಾಡುವಾಗ ಸ್ವತಃ ರಾಷ್ಟ್ರಪತಿಯವರೇ ಅರ್ಜುನ ಪ್ರಶಸ್ತಿಯ ಪ್ರತಿಮೆ ಮತ್ತು ಪ್ರಶಸ್ತಿಪತ್ರವನ್ನು ಹೀಡಿದು ಶೀತಲ್ ಜತೆ ಪೋಸ್ ನೀಡಿದ್ದು ವಿಶೇಷವಾಗಿತ್ತು ಮತ್ತು ಹೆಚ್ಚಿನವರ ಕಣ್ಣುಗಳು ಮಂಜಾಗುವಂತೆ ಮಾಡಿತು.
ತವರಿನ ಏಕದಿನ ವಿಶ್ವಕಪ್ನಲ್ಲಿ ಸರ್ವಾದಿಕ ವಿಕೆಟ್ ಕಬಳಿಸಿ ಮಿಂಚಿದ್ದ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ, ಹಾಂಗ್ರೆೌ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಅವಳಿ ಸ್ವರ್ಣ ಪದಕ ಗೆದ್ದು ಬೀಗಿದ್ದ ಎರಡೂ ಕೈಗಳಿಲ್ಲದ ಬಿಲ್ಗಾರ್ತಿ ಶೀತಲ್ ದೇವಿ ಸಹಿತ 25 ಕ್ರೀಡಾಪಟುಗಳಿಗೆ ರಾಷ್ಟ್ರಪತಿ ದ್ರೌಪದಿ ಮುಮುರ್ ಅವರು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನು ವೀಲ್ಚೇರ್ನಲ್ಲಿ ಆಗಮಿಸಿದ ಪ್ಯಾರಾ ಕನೋಯಿಂಗ್ ಪಟು ಪ್ರಾಚಿ ಯಾದವ್ಗೂ ರಾಷ್ಟ್ರಪತಿ ವೇದಿಕೆಯಿಂದ ಕೆಳಗಿಳಿದು ಬಂದು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ 2023ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಮಿ ಮತ್ತು ಶೀತಲ್ ಪ್ರೇಕ್ಷಕರಿಂದ ಭಾರಿ ಕರತಾಡನದ ವಿಶೇಷ ಮೆಚ್ಚುಗೆ ಪಡೆದರು. ಸಾಮಾನ್ಯವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ನಡೆಯುತ್ತಿದ್ದ ಸಮಾರಂಭ ಈ ಬಾರಿ, ಏಷ್ಯಾಡ್ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ಉದ್ದೇಶದಿಂದಾಗಿ ಮುಂದೂಡಲ್ಪಟ್ಟಿತ್ತು. ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದ 26 ಕ್ರೀಡಾಪಟುಗಳ ಪೈಕಿ ಯುವ ಶೂಟರ್ ಇಶಾ ಸಿಂಗ್ ಮಾತ್ರ ಗೈರಾಗಿದ್ದರು. 19 ವರ್ಷದ ಇಶಾ ಜಕಾರ್ತದಲ್ಲಿ ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಪಾಲ್ಗೊಂಡಿರುವ ಕಾರಣದಿಂದಾಗಿ ಸಮಾರಂಭದಲ್ಲಿ ಹಾಜರಿರಲಿಲ್ಲ. ಸೋಮವಾರವಷ್ಟೇ ಅವರು 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಯನ್ನೂ ಗಿಟ್ಟಿಸಿಕೊಂಡಿದ್ದರು.
ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ದಾಖಲೆಯ 107 ಪದಕ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ 111 ಪದಕಗಳನ್ನು ಗೆದ್ದುಕೊಟ್ಟಿದ್ದ ಕ್ರೀಡಾಸಾಧಕರಲ್ಲೇ ಹೆಚ್ಚಿನವರು ಈ ಬಾರಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚೆಸ್ ಗ್ರಾಂಡ್ ಮಾಸ್ಟರ್ ಆರ್. ವೈಶಾಲಿ ಅವರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಮಾಡುವಾಗಲೂ ಪ್ರೇಕ್ಷಕರ ಬಳಗದಿಂದ ಭಾರಿ ಕರತಾಡನ ಕೇಳಿಸಿತು. ವೈಶಾಲಿ ಅವರು ಚೆಸ್ ವಿಶ್ವಕಪ್ ರನ್ನರ್ಅಪ್ ಆರ್. ಪ್ರಜ್ಞಾನಂದ ಅವರ ಅಕ್ಕ ಆಗಿದ್ದಾರೆ.
ಕುಸ್ತಿಪಟು ಅಂತಿಮ್ ಪಾಂಗಲ್, ಬಾಕ್ಸರ್ ಮೊಹಮದ್ ಹುಸಮುದ್ದೀನ್, ಅಥ್ಲೀಟ್ ಪಾರುಲ್ ಚೌಧರಿ, ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್ಕುಮಾರ್ ರೆಡ್ಡಿ, ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಗೆದ್ದು ಬೀಗಿದ ಬಿಲ್ಗಾರರಾದ ಓಜಸ್ ಪ್ರವಿಣ್, ಅದಿತಿ ಗೋಪಿಚಂದ್ ಸ್ವಾಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಇತರ ಪ್ರಮುಖರು. 8 ಕೋಚ್ಗಳು ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಮೂವರು ಮಾಜಿ ಕ್ರೀಡಾಪಟುಗಳು ಜೀವಮಾನ ಸಾಧನೆಗಾಗಿ ಧ್ಯಾನ್ಚಂದ್ ಪ್ರಶಸ್ತಿಯನ್ನೂ ಸ್ವೀಕರಿಸಿದರು.
ಖೇಲ್ರತ್ನ ಪ್ರಶಸ್ತಿ 25 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದ್ದರೆ, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ತಲಾ 15 ಲಕ್ಷ ರೂ. ಮತ್ತು ಧ್ಯಾನ್ಚಂದ್ ಪ್ರಶಸ್ತಿ 10 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.
ಫಿಟ್ನೆಸ್ನತ್ತ ಶಮಿ ಗಮನ
ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಗೆ ಫಿಟ್ ಆಗುವತ್ತ ಗಮನಹರಿಸಿರುವೆ ಎಂದು 33 ವರ್ಷದ ಮೊಹಮದ್ ಶಮಿ ಹೇಳಿದ್ದಾರೆ. ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಮಿ, ನನ್ನ ಕನಸು ನನಸಾಗಿದೆ. ಇದು ನನ್ನ ಜೀವನದ ಬಹುದೊಡ್ಡ ಸಾಧನೆ. ನನ್ನ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಲ ಎಂದರು. ಪಾದದ ನೋವಿಗೆ ಶಮಿ ಸದ್ಯ ಬೆಂಗಳೂರಿನ ಎನ್ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ.