

ಮುಂಬೈ: ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಮಯದಲ್ಲಿ ದೇಶೀಯ ಕ್ರಿಕೆಟಿಗರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದರು. ಆದರೆ ಕರೊನಾ ಹಾವಳಿಯಿಂದಾಗಿ ಮನೆಯಲ್ಲೇ ಲಾಕ್ಡೌನ್ ಆಗಿರುವ ಸಮಯದಲ್ಲಿ ಕೆಲ ರಾಜ್ಯಗಳ ದೇಶೀಯ ಕ್ರಿಕೆಟಿಗರು ವೇತನವಿಲ್ಲದೆ ಪರದಾಡುವಂತಾಗಿದೆ. ತಾಂತ್ರಿಕ ಸಮಸ್ಯೆ ಹಾಗೂ ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಎಡವಟ್ಟಿನಿಂದಾಗಿ ಲಿಸ್ಟ್ ಎ ಹಾಗೂ ಪ್ರಥಮ ದರ್ಜೆ ಕ್ರಿಕೆಟಿಗರಿಗೆ 2019-20ನೇ ಸಾಲಿನ ವೇತನವೇ ಇನ್ನೂ ಪಾವತಿಯಾಗಿಲ್ಲ.
ಕಳೆದ ಮಾರ್ಚ್ನಲ್ಲಿ ಅಂತ್ಯಗೊಂಡ 2019-20ನೇ ಸಾಲಿನ ರಣಜಿ ಟ್ರೋಫಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳ ಸಂಭಾವನೆ ಇನ್ನೂ ದೇಶೀಯ ಕ್ರಿಕೆಟಿಗರ ಕೈಸೇರಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ, ಮುಂಬೈ, ಮಹಾರಾಷ್ಟ್ರ, ಬಂಗಾಳ, ತ್ರಿಪುರ ಸೇರಿದಂತೆ ಇನ್ನಿತರ ರಾಜ್ಯ ತಂಡಗಳ ಆಟಗಾರರಿಗೆ ಇನ್ನೂ ವೇತನ ಸಿಕ್ಕಿಲ್ಲ. ಕ್ರಿಕೆಟ್ ಚಟುವಟಿಕೆ ಸದ್ಯ ಸಂಪೂರ್ಣ ಸ್ತಬ್ಧಗೊಂಡಿರುವ ನಡುವೆಯೂ ಬಿಸಿಸಿಐಗೆ ಯಾವುದೇ ಹಣಕಾಸು ತೊಂದರೆ ಎದುರಾಗಿಲ್ಲ. ಆದರೆ, ಕೆಲವೊಂದು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸೂಕ್ತವಾಗಿ ಕಾರ್ಯನಿರ್ವಹಿಸದೆ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಕರ್ನಾಟಕ ಆಟಗಾರರಿಗೆ ಇಲ್ಲ ಸಮಸ್ಯೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಆಗಿಂದಾಗಲೇ ಇನ್ವಾಯ್್ಸ (ಆಟಗಾರರ ವಿವರ) ಬಿಸಿಸಿಐಗೆ ಕಳುಹಿಸಿದ ಹಿನ್ನೆಲೆಯಲ್ಲಿ ಕರ್ನಾಟಕದ ಆಟಗಾರರಿಗೆ ಸಂಪೂರ್ಣ ಸಂಭಾವನೆ ಪಾವತಿಯಾಗಿದೆ. ರಣಜಿ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಸಂಭಾವನೆ ನಮಗೆ ಈಗಾಗಲೆ ಪಾವತಿಯಾಗಿದೆ ಎಂದು ರಾಜ್ಯ ತಂಡದ ಸದಸ್ಯರೊಬ್ಬರು ‘ವಿಜಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಸಂಕಷ್ಟದಲ್ಲಿ ದೇಶೀಯ ಕ್ರಿಕೆಟಿಗರು: ಲಾಕ್ಡೌನ್ ಹಿನ್ನೆಲೆಯಲ್ಲಿ ಈಗಾಗಲೆ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮುಂದಿನ ವರ್ಷದ ಕ್ರಿಕೆಟ್ ಚಟುವಟಿಕೆ ನಿಗದಿಯಂತೆ ಆರಂಭಗೊಳ್ಳುವುದು ಅನುಮಾನವಾಗಿದೆ. ಇದೀಗ ಹಿಂದಿನ ವರ್ಷದ ವೇತನ ಸಿಗದೆ ಆಟಗಾರರು ಪರದಾಡುವಂತಾಗಿದೆ. ಕ್ರಿಕೆಟ್ಅನ್ನೇ ನಂಬಿರುವ ಆಟಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.