

ಬೆಂಗಳೂರು: ಆಟಗಾರರಲ್ಲಿ ಕರೊನಾ ಪ್ರಕರಣ ದಾಖಲಾಗಿರುವ ನಡುವೆಯೂ ರಾಷ್ಟ್ರೀಯ ಹಾಕಿ ತಂಡದ ತರಬೇತಿ ಶಿಬಿರ ಆಗಸ್ಟ್ 19ರಿಂದ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಿಗದಿಯಂತೆಯೇ ಶುರುವಾಗಲಿದೆ. ಪುರುಷ ಮತ್ತು ಮಹಿಳಾ ತಂಡದ ಸದಸ್ಯರು 14 ದಿನಗಳ ಕ್ವಾರಂಟೈನ್ ಬಳಿಕ ಶಿಬಿರದಲ್ಲಿ ತರಬೇತಿ ಪುನರಾರಂಭ ಮಾಡಲಿದ್ದಾರೆ ಎಂದು ಸಾಯ್ ಪ್ರಕಟಣೆ ತಿಳಿಸಿದೆ.
ಶಿಬಿರಕ್ಕಾಗಿ ಪುರುಷರ ತಂಡದ 33 ಆಟಗಾರರು ಮತ್ತು ಮಹಿಳಾ ತಂಡದ 24 ಆಟಗಾರ್ತಿಯರು ಸದ್ಯ ಬೆಂಗಳೂರಿನಲ್ಲಿದ್ದಾರೆ. ಸೆಪ್ಟೆಂಬರ್ 30ರವರೆಗೆ ಶಿಬಿರ ಮುಂದುವರಿಯುವ ನಿರೀಕ್ಷೆ ಇದೆ.
ಕರೊನಾ ಸೋಂಕಿತ ಎಲ್ಲ ಹಾಕಿ ಆಟಗಾರರು ಆಸ್ಪತ್ರೆಗೆ ದಾಖಲು
ಸ್ಟ್ರೈಕರ್ ಮಂದೀಪ್ ಸಿಂಗ್ ರಕ್ತ ಆಮ್ಲಜನಕ ಮಟ್ಟ ಕುಸಿದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಬೆನ್ನಲ್ಲೇ, ಕರೊನಾ ಸೋಂಕಿತರಾಗಿರುವ ಇತರ ಐವರು ಹಾಕಿ ಆಟಗಾರರನ್ನೂ ಮುನ್ನೆಚ್ಚರಿಕೆಯ ಕ್ರಮವಾಗಿ ಉದ್ಯಾನನಗರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂದೀಪ್ ಅವರಲ್ಲಿ ಕರೊನಾ ಲಕ್ಷಣಗಳಿಲ್ಲದಿದ್ದರೂ, ರಕ್ತ ಆಮ್ಲಜನಕ ಮಟ್ಟ ಕುಸಿದ ಕಾರಣದಿಂದಾಗಿ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಇತರ ಹಾಕಿ ಆಟಗಾರರನ್ನೂ ಅದೇ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಬುಧವಾರ ಮಾಹಿತಿ ನೀಡಿದೆ. ನಾಯಕ ಮನ್‌ಪ್ರೀತ್ ಸಿಂಗ್, ಡಿೆಂಡರ್‌ಗಳಾದ ಸುರೇಂದರ್‌ಕುಮಾರ್, ಜಸ್ಕರಣ್ ಸಿಂಗ್, ಡ್ರಾೃಗ್ ಫ್ಲಿಕರ್ ವರುಣ್ ಕುಮಾರ್ ಮತ್ತು ಗೋಲ್‌ಕೀಪರ್ ಕೃಷ್ಣ ಬಹದೂರ್ ಪಾಠಕ್ ಕೂಡ ಕಳೆದ ವಾರ ರಾಷ್ಟ್ರೀಯ ಶಿಬಿರಕ್ಕಾಗಿ ಆಗಮಿಸಿದ ಬಳಿಕ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದರು.