ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಮತ್ತೆ 3 ಸ್ವರ್ಣ ಪದಕ: ಲಾಂಗ್ ಜಂಪ್‌ನಲ್ಲಿ ಆರ್ಯಗೆ ಬೆಳ್ಳಿ

New-Project-2-5
Published on

ಬೆಂಗಳೂರು: ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು ಪದಕ ಬೇಟೆ ಮುಂದುವರಿಸಿದ್ದು, ಕೂಟದ 2ನೇ ದಿನವಾದ ಸೋಮವಾರ ಒಟ್ಟು 9 ಪದಕಗಳನ್ನು ಬಾಚಿಕೊಂಡಿದ್ದಾರೆ. ಈಜುಕೊಳದಲ್ಲಿ 1 ಸ್ವರ್ಣ,1 ಬೆಳ್ಳಿ ಹಾಗೂ 3 ಕಂಚು ಜಯಿಸಿದರೆ, ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ ಅಥ್ಲೆಟಿಕ್ಸ್‌ನಲ್ಲಿ ರಜತ ಪದಕ ಒಲಿದಿದೆ. ಇದರೊಂದಿಗೆ ಕರ್ನಾಟಕ ತಂಡ 12 ಚಿನ್ನ, 8 ಬೆಳ್ಳಿ ಮತ್ತು 9 ಕಂಚು ಸಹಿತ ಒಟ್ಟು 29 ಪದಕ ಜಯಿಸಿದಂತಾಗಿದೆ.

ಎರಡನೇ ದಿನದ ಈಜು ಸ್ಪರ್ಧೆಯ ಮಹಿಳೆಯರ 4/400 ಮೀ. ಮಿಡ್ಲೆ ವಿಭಾಗದಲ್ಲಿ ರಿದ್ಧಿಮಾ ವಿರೇಂದ್ರ ಕುಮಾರ್, ಲಿನೇಷಾ ಎಕೆ, ನೀನಾ ವೆಂಕಟೇಶ್ ಹಾಗೂ ಧಿನಿಧಿ ದೇಸಿಂಘು ಒಳಗೊಂಡ ರಾಜ್ಯ ತಂಡ ಕೂಟ ದಾಖಲೆಯೊಂದಿಗೆ (4 ನಿ, 25.82ಸೆ) ಸ್ವರ್ಣ ಪದಕಕ್ಕೆ ಮುತ್ತಿಟ್ಟರು. ರಾಜ್ಯದ ಒಲಿಂಪಿಯನ್ ಶ್ರೀ ಹರಿ ನಟರಾಜ್, ವಿದಿತ್ ಎಸ್. ಶಂಕರ್, ಕಾರ್ತಿಕೇಯ ಶಂಕರ್ ಮತ್ತು ಅನೀಶ್ ಎಸ್. ಗೌಡ ಪುರುಷರ ತಂಡ (3 ನಿ.47.43 ಸೆ) ಮೂರನೇ ಸ್ಥಾನದೊಂದಿಗೆ ಸ್ಫರ್ಧೆ ಮುಗಿಸಿತು.

ಮಹಿಳೆಯರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ರಾಜ್ಯದ ಲಿನೇಷಾ ಎಕೆ (2ನಿ. 41.60ಸೆ) ದ್ವಿತೀಯ ಸ್ಥಾನ ಪಡೆದರೆ, ಇನ್ನೊರ್ವ ಈಜುಗಾರ್ತಿ ಎಸ್. ಲಕ್ಷ್ಯ (2ನಿ. 43.40 ಸೆ) ಗುರಿ ತಲುಪಿ ಕಂಚಿನ ಹಾರಿಕ್ಕೆ ಕೊರಳೊಡ್ಡಿದರು. 800 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಶಿರಿನ್ (2ನಿ. 29.08) ಕಂಚಿನ ಪದಕ ಜಯಿಸಿದರು.

ಆರ್ಯಗೆ ರಜತ ಹಾರ: ರಾಜ್ಯದ ಅಥ್ಲೀಟ್ ಆರ್ಯ ಎಸ್. ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ರಜತ ಸಂಭ್ರಮ ಕಂಡಿದ್ದಾರೆ. ಮೂರನೇ ಯತ್ನದಲ್ಲಿ 7.89 ಮೀಟರ್ ದೂರಕ್ಕೆ ಜಿಗಿದ ಆರ್ಯ ಎರಡನೇ ಸ್ಥಾನ ಪಡೆದರು. ಕೇರಳದ ಮುಹಮದ್ ಅನೀಸ್ 8.15 ಮೀ. ಚಿನ್ನ ಗೆದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net