ಪಾಂಡ್ಯ ಭಾವಿ ಪತ್ನಿಗೆ ಸೀಮಂತ ಶಾಸ್ತ್ರ

hardik pandya_web
Published on

ಬೆಂಗಳೂರು: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾನುವಾರವಷ್ಟೇ ಅಪ್ಪನಾಗುತ್ತಿರುವ ವಿಷಯ ಹಂಚಿಕೊಂಡಿದ್ದರು. ಇದೀಗ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಭಾವಿ ಪತ್ನಿ ಹಾಗೂ ನಟಿ-ರೂಪದರ್ಶಿ ನತಾಶಾ ಸ್ಯಾಂಕೋವಿಕ್ ಅವರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅತ್ತಿಗೆ ಹಾಗೂ ಕೃನಾಲ್ ಪಾಂಡ್ಯ ಪತ್ನಿ ಪಂಕುರಿ ಶರ್ಮ ಪಾಂಡ್ಯ ಸೀಮಂತ ಕಾರ್ಯಕ್ರಮದಲ್ಲಿ ನತಾಶಾ ಹಾಗೂ ಹಾರ್ದಿಕ್ ಪಾಂಡ್ಯ ಜೋಡಿಯಿಂದ ಕೇಕ್ ಕಟ್ ಮಾಡಿಸಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾನುವಾರ ಅಭಿಮಾನಿಗಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದ್ದರು. ಭಾವಿ ಪತ್ನಿ ನತಾಶಾ ಸ್ಯಾಂಕೋವಿಕ್ ಗರ್ಭಿಣಿಯಾಗಿದ್ದು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು 26 ವರ್ಷದ ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದರು. ಇದೀಗ ಗುಟ್ಟಾಗಿಯೇ ಪಾಂಡ್ಯ ಭಾವಿ ಪತ್ನಿಗೆ ಸೀಮಂತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನೂತನ ಸದಸ್ಯನ ಆಗಮನದ ನಿರೀಕ್ಷೆ ಥ್ರಿಲ್‌ನಲ್ಲಿದ್ದಾರೆ.

ವರ್ಷದ ಮೊದಲ ದಿನ ಹಡಗಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಪಾಂಡ್ಯ ನತಾಶಾ ಜತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ನತಾಶಾ ಜತೆಗಿರುವ ಹಲವು ಚಿತ್ರಗಳೊಂದಿಗೆ ಪಾಂಡ್ಯ, ‘ನತಾಶಾ ಮತ್ತು ನಾನು ಜತೆಯಾಗಿ ಶ್ರೇಷ್ಠ ಪ್ರಯಾಣದಲ್ಲಿದ್ದೇವೆ. ಈಗ ಇದು ಇನ್ನಷ್ಟು ಉತ್ತಮವಾಗುತ್ತಿದೆ. ನಾವಿಬ್ಬರು ಜತೆಯಾಗಿ ಹೊಸ ಜೀವವೊಂದನ್ನು ಸ್ವಾಗತಿಸಲು ಕಾತರ ಗೊಂಡಿದ್ದೇವೆ. ಶೀಘ್ರದಲ್ಲೇ ನಮ್ಮ ಜೀವನಕ್ಕೆ ಹೊಸ ಜೀವದ ಪ್ರವೇಶವಾಗಲಿದೆ ಎಂದು ಪಾಂಡ್ಯ ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ರಾಷ್ಟ್ರೀಯ ತಂಡದ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸಿ, ಮೊಹಮದ್ ಶಮಿ, ಯಜುವೇಂದ್ರ ಚಾಹಲ್ ಸೇರಿದಂತೆ ಹಲವು ಕ್ರಿಕೆಟಿಗರು ಶುಭಾಶಯ ಹೇಳಿದ್ದರು. ಜತೆಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net