

ಮುಂಬೈ: ಹೊಸ ವರ್ಷದ ಆರಂಭದಲ್ಲೇ ಸರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಘೋಷಿಸಿ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎಲ್ಲರಿಗೂ ಅಚ್ಚರಿ ನೀಡಿದ್ದರು. ದುಬೈನಲ್ಲಿ ನೆರವೇರಿಸಿಕೊಂಡ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಸ್ಟಾರ್ ಜೋಡಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಂದಿನಿಂದ ಇಂದಿನವರೆಗೂ ಸುಮ್ಮನೆ ಕುಳಿತಿಲ್ಲ. ಬದಲಾಗಿ ಮೀಮ್ಸ್ಗಳನ್ನು ಹರಿಬಿಟ್ಟು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ.
ತಾರಾಜೋಡಿಯು ನೆಟ್ಟಿಗರನ್ನು ಸೆಳೆದಿದ್ದು ಇಂಟರ್ನೆಟ್ ತುಂಬೆಲ್ಲಾ ಮೀಮ್ಸ್ಗಳು ಹರಿದಾಡುತ್ತಿದೆ. ನತಾಶಾರೊಟ್ಟಿಗೆ ಹಾರ್ದಿಕ್ ಪಾಂಡ್ಯ ತೆಗೆದುಕೊಂಡಿರುವ ಸೆಲ್ಫಿ ಫೋಟೋದಲ್ಲಿ ನತಶಾ ಮುಖವನ್ನು ತೆಗೆದು, ಅದಕ್ಕೆ ಭಿಕ್ಷುಕಿಯಿಂದ ಗಾಯಕಿಯಾದ ರಾನು ಮಂಡಲ್ ಮುಖ ಸೇರಿಸಿ ಎಡಿಟ್ ಮಾಡಿರುವ ಮೀಮ್ಸ್ ಹರಿಬಿಟ್ಟು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಬಿಕಿನಿ ಧರಿಸಿ ಭಾವಿ ಪತಿ ಹಾರ್ದಿಕ್ ಜತೆ ಬೀಚ್ನಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ನತಾಶಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗಷ್ಟೇ ಶೇರ್ ಮಾಡಿಕೊಂಡಿದ್ದರು. ಅದನ್ನು ನೆಟ್ಟಿಗರು ತಮ್ಮದೇ ರಿತಿಯಲ್ಲಿ ಎಡಿಟ್ ಮಾಡಿ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ‘ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020, ಎಂಗೇಜ್ಡ್' ಎಂದು ಬರೆದು ಹಾರ್ದಿಕ್ ಪಾಂಡ್ಯ ಬುಧವಾರ ಸಂಜೆ(ವರ್ಷದ ಮೊದಲ ದಿನ) ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು. (ಏಜೆನ್ಸೀಸ್)