

ಟರೌಬ (ಟ್ರಿನಿಡಾಡ್): ಸ್ಪಿನ್ನರ್ಗಳಾದ ಸುನೀಲ್ ನಾರಾಯಣ್ (19 ರನ್ಗೆ 2 ವಿಕೆಟ್ ಮತ್ತು 50 ರನ್, 28 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ರಶೀದ್ ಖಾನ್ (26 ರನ್, 20 ಎಸೆತ, 2 ಬೌಂಡರಿ, 1 ಸಿಕ್ಸರ್ ಮತ್ತು 27ಕ್ಕೆ 2 ವಿಕೆಟ್) ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯ ಮೊದಲ ದಿನದ ಪಂದ್ಯಗಳಲ್ಲಿ ಆಲ್ರೌಂಡ್ ನಿರ್ವಹಣೆಯ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಕ್ರಮವಾಗಿ ಟ್ರಿನಿಬಾಗೋ ನೈಟ್ರೈಡರ್ಸ್ ಮತ್ತು ಬಾರ್ಬಡೋಸ್ ಟ್ರೈಡೆಂಟ್ಸ್ ತಂಡಗಳ ಗೆಲುವಿಗೆ ಕಾರಣರಾಗಿದ್ದಾರೆ.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೈರಾನ್ ಪೊಲ್ಲಾರ್ಡ್ ಸಾರಥ್ಯದ ಟ್ರಿನಿಬಾಗೋ ತಂಡ ಗಯಾನಾ ಅಮೆಜಾನ್ ವಾರಿಯರ್ಸ್ ವಿರುದ್ಧ 4 ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಈ ಮೂಲಕ ಗಯಾನಾ ತಂಡದ ಸತತ 11 ಗೆಲುವಿನ ಓಟಕ್ಕೆ ತಡೆಯೊಡ್ಡಿತು. ಮಳೆಯಿಂದಾಗಿ ತಲಾ 17 ಓವರ್ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಗಯಾನಾ ತಂಡ 5 ವಿಕೆಟ್ಗೆ 144 ರನ್ ಪೇರಿಸಿತು. ಪ್ರತಿಯಾಗಿ ಟ್ರಿನಿಬಾಗೋ ತಂಡ ಸುನೀಲ್ ನಾರಾಯಣ್ ಆರಂಭಿಕರಾಗಿ ಕಣಕ್ಕಿಳಿದು ಸಿಡಿಸಿದ ಬಿರುಸಿನ ಅರ್ಧಶತಕದಿಂದ 16.4 ಓವರ್ಗಳಲ್ಲಿ 6 ವಿಕೆಟ್ಗೆ 147 ರನ್ ಗಳಿಸ ಜಯಭೇರಿ ಬಾರಿಸಿತು. ಸುನೀಲ್ ನಾರಾಯಣ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರು: ಗಯಾನಾ ಅಮೆಜಾನ್ ವಾರಿಯರ್ಸ್: 17 ಓವರ್ಗಳಲ್ಲಿ 5 ವಿಕೆಟ್ಗೆ 144 (ಹೆಟ್ಮೆಯರ್ 63, ರಾಸ್ ಟೇಲರ್ 33, ಪೂರನ್ 18, ಕೀಮೊ ಪೌಲ್ 15*, ನಾರಾಯಣ್ 19ಕ್ಕೆ 2, ಅಲಿ ಖಾನ್ 21ಕ್ಕೆ 1, ಡ್ವೇನ್ ಬ್ರಾವೊ 40ಕ್ಕೆ 1), ಟ್ರಿನಿಬಾಗೋ ನೈಟ್ರೈಡರ್ಸ್: 16.4 ಓವರ್ಗಳಲ್ಲಿ 6 ವಿಕೆಟ್ಗೆ 147 (ಸಿಮ್ಮನ್ಸ್ 17, ನಾರಾಯಣ್ 50, ಮನ್ರೊ 17, ಡರೇನ್ ಬ್ರಾವೊ 30, ಪೊಲ್ಲಾರ್ಡ್ 10, ಡ್ವೇನ್ ಬ್ರಾವೊ 6*, ನವೀನ್ ಉಲ್ ಹಕ್ 21ಕ್ಕೆ 2, ಇಮ್ರಾನ್ ತಾಹಿರ್ 40ಕ್ಕೆ 2).
ಟ್ರೈಡೆಂಟ್ಸ್ಗೆ ಗೆಲುವು ತಂದ ರಶೀದ್ ಖಾನ್
ದಿನದ 2ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಸರ್ವಾಂಗೀಣ ನಿರ್ವಹಣೆ ತೋರುವ ಮೂಲಕ ಬಾರ್ಬಡೋಸ್ ಟ್ರೈಡೆಂಟ್ಸ್ ತಂಡಕ್ಕೆ ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡದ ವಿರುದ್ಧ 6 ರನ್ಗಳಿಂದ ರೋಚಕ ಗೆಲುವು ತಂದುಕೊಟ್ಟರು. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಟ್ರೈಡೆಂಟ್ಸ್ ತಂಡ 9 ವಿಕೆಟ್ಗೆ 153 ರನ್ ಪೇರಿಸಿತು. ಪ್ರತಿಯಾಗಿ ಸೇಂಟ್ ಕಿಟ್ಸ್ ತಂಡ 5 ವಿಕೆಟ್ಗೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್ನಲ್ಲಿ 20 ರನ್ ಬೇಕಾಗಿದ್ದಾಗ ಸೇಂಟ್ ಕಿಟ್ಸ್ ತಂಡ 13 ರನ್ ಕಸಿಯುವಲ್ಲಿ ಮಾತ್ರ ಸಫಲವಾಯಿತು.
ಸಂಕ್ಷಿಪ್ತ ಸ್ಕೋರು: ಬಾರ್ಬಡೋಸ್ ಟ್ರೈಡೆಂಟ್ಸ್: 9 ವಿಕೆಟ್ಗೆ 153 (ಶೈ ಹೋಪ್ 3, ಕೋರಿ ಆಂಡರ್ಸನ್ 0, ಮೇಯರ್ಸ್ 37, ಹೋಲ್ಡರ್ 38, ಸ್ಯಾಂಟ್ನರ್ 20, ರಶೀದ್ ಖಾನ್ 26, ಸೋಹೈಲ್ ತನ್ವೀರ್ 25ಕ್ಕೆ 2, ಕಾಟ್ರೆಲ್ 16ಕ್ಕೆ 2, ಎಮ್ರಿಟ್ 16ಕ್ಕೆ 2), ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್: 5 ವಿಕೆಟ್ಗೆ 147 (ಲೆವಿಸ್ 12, ಲ್ಯಾನ್ 19, ಡ ಸಿಲ್ವ 41, ಡಂಕ್ 34, ರಾಮ್ದಿನ್ 13, ತನ್ವೀರ್ 16, ರಶೀದ್ ಖಾನ್ 27ಕ್ಕೆ 2, ಸ್ಯಾಂಟ್ನರ್ 18ಕ್ಕೆ 2).
ಕರೊನಾ ಹಾವಳಿಯ ನಡುವೆ ನಡೆಯುತ್ತಿರುವ ಮೊದಲ ಟಿ20 ಲೀಗ್ ಆಗಿರುವ ಸಿಪಿಎಲ್ ಟೂರ್ನಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟೂರ್ನಿಯಲ್ಲಿ ಆಡುತ್ತಿರುವ ಹೆಚ್ಚಿನ ಆಟಗಾರರು ಐಪಿಎಲ್ನಲ್ಲೂ ಕಣಕ್ಕಿಳಿಯಲಿದ್ದು, ಅವರಿಗೆ ಇದು ಐಪಿಎಲ್ಗೆ ಪೂರ್ವಾಭ್ಯಾಸವೂ ಆಗಿದೆ.
ಬುಧವಾರದ ಪಂದ್ಯಗಳು:
ಜಮೈಕಾ ತಲ್ಲವಾಹ್ಸ್-ಸೇಂಟ್ ಲೂಸಿಯಾ ಜೌಕ್ಸ್
ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)
ಗಯಾನಾ ಅಮೆಜಾನ್ ವಾರಿಯರ್ಸ್-ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್
ಆರಂಭ: ಗುರುವಾರ ಮುಂಜಾನೆ 3.00 (ಭಾರತೀಯ ಕಾಲಮಾನ)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್