

ಮೆಲ್ಬೋರ್ನ್: ಆಸೀಸ್ ನೆಲದಲ್ಲಿ 11 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಸ್ಪೇನ್ನ ದಿಗ್ಗಜ ಆಟಗಾರ ರಾಫೆಲ್ ನಡಾಲ್ ಭರ್ಜರಿ ನಿರ್ವಹಣೆಯ ಮೂಲಕ ಆಸ್ಟ್ರೇಲಿಯನ್ ಓಪನ್ನಲ್ಲಿ 2ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಇನ್ನೊಂದೆಡೆ ರಷ್ಯಾದ ಚೆಲುವೆ ಮರಿಯಾ ಶರಪೋವಾ ಸತತ ಮೂರನೇ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿಯೇ ಸೋಲು ಕಂಡಿದ್ದಾರೆ.
ಮೆಲ್ಬೋರ್ನ್ ಪಾರ್ಕ್ನಲ್ಲಿ ನಡೆಯುತ್ತಿರುವ ಕೂಟದಲ್ಲಿ 2ನೇ ದಿನವಾದ ಮಂಗಳವಾರ ಪ್ರಮಖ ಆಟಗಾರರು ನಿರಾಳ ಗೆಲುವು ಸಾಧಿಸಿದರು. ರೋಜರ್ ಫೆಡರರ್ರ 20 ಗ್ರಾಂಡ್ ಸ್ಲಾಂ ದಾಖಲೆಯನ್ನು ಸರಿಗಟ್ಟುವ ಗುರಿಯಲ್ಲಿರುವ ರಾಫೆಲ್ ನಡಾಲ್ ಕೇವಲ 5 ಗೇಮ್ಳಲ್ಲಿ ಮಾತ್ರವೇ ಹಿನ್ನಡೆ ಕಂಡು ಬೊಲಿವಿಯಾದ ಹುಗೋ ಡೆಲೆನ್ರನ್ನು 6-2, 6-3, 6-0 ಯಿಂದ ಮಣಿಸಿದರು. ರಾಡ್ ಲೆವರ್ ಅರೇನಾದಲ್ಲಿ ನಡೆದ ಈ ಮುಖಾಮುಖಿಯ ಕೇವಲ 2 ಗಂಟೆಗಳಲ್ಲಿ ಮುಕ್ತಾಯ ಕಂಡಿತು.
ಸೋಮವಾರದ ಬಹುತೇಕ ಪಂದ್ಯಗಳು ಮುಂದೂಡಿಕೆ ಯಾಗಿದ್ದರಿಂದ 2ನೇ ದಿನದಲ್ಲಿ ಒಟ್ಟು 96 ಪಂದ್ಯಗಳು ನಡೆದವು. ಇದರ ನಡುವೆ ಮಾಜಿ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್ ಹಾಗೂ ಮಿಲೋಸ್ ರಾವೋನಿಕ್ ಜಯ ಕಂಡು ಮುನ್ನಡೆದರು. 4ನೇ ಶ್ರೇಯಾಂಕದ ರಷ್ಯಾದ ಡೆನಿಲ್ ಮೆಡ್ವೇಡೆವ್ 6-3, 4-6, 6-4, 6-2 ರಿಂದ ಅಮೆರಿಕದ ಫ್ರಾನ್ಸೆಸ್ ಟಿಯಾಫೌರನ್ನು ಸೋಲಿಸಿ ಮುನ್ನಡೆದರು. ಟೆನಿಸ್ನಲ್ಲಿ ಬಿಗ್ ಥ್ರೀ ಪ್ರಾಬಲ್ಯವನ್ನು ಮುಗಿಸುವ ಆಟಗಾರ ಎಂದು ದಿಗ್ಗಜ ಆಟಗಾರ ಜಾನ್ ಮೆಕೆನ್ರೋರಿಂದ ಬಣ್ಣಿಸಲ್ಪಟ್ಟಿರುವ ಮೆಡ್ವೇಡೆವ್ ಗೆಲುವಿಗಾಗಿ 2 ಗಂಟೆ 36 ನಿಮಿಷ ಕಾಲ ಹೋರಾಟ ನಡೆಸಿದರು. 5ನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್ ಥೀಮ್ 6-3, 7-5, 6-2 ರಿಂದ ಫ್ರಾನ್ಸ್ನ ಆಡ್ರಿಯನ್ ಮನ್ನಾರಿನೋರನ್ನು ಸೋಲಿಸಿದರೆ, ಜರ್ಮನಿಯ ಅಲೆಗ್ಸಾಂಡರ್ ಜ್ವೆರೆವ್ 6-4, 6-7 (7), 6-3 ರಿಂದ ಇಟಲಿಯ ಸಿಸಿನಾಟೋರನ್ನು ಮಣಿಸಿದರು.
ಮಹಿಳಾ ವಿಭಾಗದಲ್ಲಿ 17ನೇ ಶ್ರೇಯಾಂಕದ ಜರ್ಮನಿ ಆಟಗಾರ್ತಿ ಏಂಜಲಿಕ್ ಕೆರ್ಬರ್ 6-2, 6-2 ರಿಂದ ಇಟಲಿಯ ಎಲಿಸಾಬೆಟಾರನ್ನು ಸೋಲಿಸಿದರೆ, 6ನೇ ಶ್ರೇಯಾಂಕದ ಸ್ವಿಸ್ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ 6-3, 7-5 ರಿಂದ ಅನ್ನಾ ಕ್ಯಾರೋಲಿನಾ ಶಮಿಡ್ಲೋವಾರನ್ನು ಮಣಿಸಿದರು. ಪ್ರಶಸ್ತಿ ಫೇವರಿಟ್ ರೊಮೆನಿಯಾದ ಸಿಮೊನಾ ಹಲೆಪ್ಗೆ ಅಮೆರಿಕದ ಜೆನ್ನಿಫರ್ ಬ್ರಾಡಿ ಮೊದಲ ಸೆಟ್ನಲ್ಲಿ ಸವಾಲೊಡ್ಡಿದರೂ, 4ನೇ ಶ್ರೇಯಾಂಕದ ಹಲೆಪ್ 7-6 (7), 6-1 ರಿಂದ ಗೆಲುವು ಕಂಡರು. ಎಲಿನಾ ಸ್ವಿಟೋಲಿನಾ 6-4, 7-5 ರಿಂದ ಇಂಗ್ಲೆಂಡ್ನ ಕೇಟಿ ಬೌಲ್ಟರ್ ಹಾಗೂ ಸ್ಪೇನ್ನ ಗಾರ್ಬಿನ್ ಮುಗುರುಜಾ 0-6, 6-1, 6-0 ಯಿಂದ ಅಮೆರಿಕದ ಶೆಲ್ಬಿ ರೋಜರ್ಸ್ರನ್ನು ಸೋಲಿಸಿದರು.
ಶರಪೋವಾಗೆ ಕೆಟ್ಟ ಸೋಲು
ವೈಲ್ಡ್ಕಾರ್ಡ್ ಮೂಲಕ ಆಸ್ಟ್ರೇಲಿಯನ್ ಓಪನ್ಗೆ ಪ್ರವೇಶ ಪಡೆದಿದ್ದ 32 ವರ್ಷದ ಶರಪೋವಾ 3-6, 4-6 ರಿಂದ ಕ್ರೊವೇಷಿಯಾದ 19ನೇ ಶ್ರೇಯಾಂಕದ ಆಟಗಾರ್ತಿ ಡೊನಾ ವೆಕಿಕ್ಗೆ ಶರಣಾದರು. ಆ ಮೂಲಕ ಸತತ ಮೂರು ಗ್ರಾಂಡ್ ಸ್ಲಾಂಗಳಲ್ಲಿ ಮೊದಲ ಸುತ್ತಿನಲ್ಲಿ ಇದೇ ಮೊದಲ ಬಾರಿಗೆ ಸೋಲು ಕಂಡರು. ಇದರೊಂದಿಗೆ ಮಾಜಿ ವಿಶ್ವ ನಂ.1 ತಾರೆಯ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ. 17ನೇ ವರ್ಷಕ್ಕೆ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಶರಪೋವಾ, 2014ರ ಫ್ರೆಂಚ್ ಓಪನ್ ಗೆಲುವಿನ ಬಳಿಕ ಯಾವ ಗ್ರಾಂಡ್ ಸ್ಲಾಂನಲ್ಲೂ ಫೈನಲ್ ಸಾಧನೆ ಮಾಡಿಲ್ಲ.
ಪ್ರಜ್ಞೇಶ್ ನಿರ್ಗಮನ
ಭಾರತದ ಪ್ರಜ್ಞೇಶ್ ಗುಣೇಶ್ವರನ್ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡು ನಿರಾಸೆ ಎದುರಿಸಿದರು. ಪ್ರಜ್ಞೇಶ್ 4-6, 2-6, 5-7 ರಿಂದ ಜಪಾನ್ನ ತತ್ಸುಮಾ ಇಟೋಗೆ ಶರಣಾದರು.