

ಪ್ಯಾರಿಸ್: ಅಗ್ರ ಶ್ರೇಯಾಂಕಿತ ನೊವಾಕ್ ಜೋಕೊವಿಕ್ ಮತ್ತು 2ನೇ ಶ್ರೇಯಾಂಕಿತ ರಾಫೆಲ್ ನಡಾಲ್ ಭಾನುವಾರ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಕ್ಲೇಕೋರ್ಟ್ ಕಿಂಗ್ ನಡಾಲ್ ಪ್ಯಾರಿಸ್‌ನಲ್ಲಿ ದಾಖಲೆಯ 13ನೇ ಪ್ರಶಸ್ತಿ ಗೆಲುವಿನ ಹಂಬಲದಲ್ಲಿದ್ದರೆ, ಜೋಕೊವಿಕ್ 2016ರ ಬಳಿಕ ಮತ್ತೊಮ್ಮೆ ಫ್ರೆಂಚ್ ಕಿರೀಟ ಒಲಿಸಿಕೊಳ್ಳುವ ತವಕದಲ್ಲಿದ್ದಾರೆ.
ಸೆರ್ಬಿಯಾ ತಾರೆ ಜೋಕೊವಿಕ್ ಶುಕ್ರವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಗ್ರೀಸ್‌ನ ಸ್ಟೆಫಾನೋಸ್ ಸಿಸಿಪಾಸ್ ವಿರುದ್ಧ 6-3, 6-2, 5-7, 4-6, 6-1ರಿಂದ ಹೋರಾಟಯುತ ಗೆಲುವು ದಾಖಲಿಸಿದರು. ಮತ್ತೊಂದೆಡೆ ಸ್ಪೇನ್ ತಾರೆ ನಡಾಲ್ ಒಂದೂ ಸೆಟ್ ಸೋಲದೆ ಫೈನಲ್‌ಗೇರಿದ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ 33 ವರ್ಷದ ಜೋಕೊವಿಕ್ 18ನೇ ಗ್ರಾಂಡ್ ಸ್ಲಾಂ ಗೆಲುವಿನ ನಿರೀಕ್ಷೆಯಲ್ಲಿದ್ದರೆ, 34 ವರ್ಷದ ನಡಾಲ್ 20ನೇ ಗ್ರಾಂಡ್ ಸ್ಲಾಂ ಗೆಲುವಿನೊಂದಿಗೆ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ದಾಖಲೆ ಸರಿಗಟ್ಟುವ ಛಲದಲ್ಲಿದ್ದಾರೆ.
ನಡಾಲ್ ರೋಲ್ಯಾಂಡ್ ಗ್ಯಾರಸ್‌ನಲ್ಲಿ ಈ ಹಿಂದೆ ಫೈನಲ್‌ಗೇರಿದ 12 ಬಾರಿಯೂ ಪ್ರಶಸ್ತಿ ಒಲಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈ ಪೈಕಿ ಒಂದು ಬಾರಿ (2012) ಜೋಕೊವಿಕ್ ವಿರುದ್ಧವೇ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಇತ್ತ ಜೋಕೊವಿಕ್ 2020ರಲ್ಲಿ 37 ಪಂದ್ಯ ಜಯಿಸಿದ್ದರೆ, 1ರಲ್ಲಷ್ಟೇ ಸೋತಿದ್ದಾರೆ. ಅದೂ ಯುಎಸ್ ಓಪನ್‌ನಲ್ಲಿ ಲೈನ್ ರೆಫ್ರಿಗೆ ಚೆಂಡು ಹೊಡೆದು ಅನರ್ಹಗೊಂಡಿದ್ದರಿಂದ ಎದುರಾದ ಸೋಲಾಗಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಇಬ್ಬರು ದಿಗ್ಗಜರ ನಡುವೆ ಜಿದ್ದಾಜಿದ್ದಿನ ಕಾದಾಟ ಏರ್ಪಡುವ ನಿರೀಕ್ಷೆ ಇದೆ.
ಮುಖಾಮುಖಿ: 55
ಜೋಕೊವಿಕ್: 29
ನಡಾಲ್: 26
ಗ್ರಾಂಡ್‌ಸ್ಲಾಂ: 15
ಜೋಕೊವಿಕ್: 6
ನಡಾಲ್: 9
ಫ್ರೆಂಚ್ ಓಪನ್: 7
ಜೋಕೊವಿಕ್: 1
ನಡಾಲ್: 6
ಗ್ರಾಂಡ್ ಸ್ಲಾಂ ಫೈನಲ್: 8
ನಡಾಲ್: 4
ಜೋಕೊವಿಕ್: 4
*ಪಂದ್ಯ ಆರಂಭ: ಸಂಜೆ 6.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2