ನಡಾಲ್ ಫೇಲ್, ಥೀಮ್ ಕಮಾಲ್; ಮುಗುರುಜಾ, ಹಲೆಪ್​ ಸೆಮೀಸ್​

Nadal 29 Jan 20
Published on

ಮೆಲ್ಬೋರ್ನ್: ವಿಶ್ವ ನಂ. 1 ಆಟಗಾರ ರಾಫೆಲ್ ನಡಾಲ್ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್​ನಲ್ಲಿ ಕ್ವಾರ್ಟರ್​ಫೈನಲ್​ನಲ್ಲಿ ಹೊರಬಿದ್ದಿದ್ದಾರೆ. ಆಸ್ಟ್ರಿಯಾದ ಆಟಗಾರ ಡೊಮಿನಿಕ್ ಥೀಮ್ ವಿರುದ್ಧದ ರೋಚಕ ಕಾದಾಟದಲ್ಲಿ ಆಘಾತ ಎದುರಿಸಿದ ನಡಾಲ್, ಮೆಲ್ಬೋರ್ನ್ ಪಾರ್ಕ್ ನಲ್ಲೇ ದಾಖಲೆಯ 20ನೇ ಗ್ರಾಂಡ್ ಸ್ಲಾಂ ಜಯಿಸುವ ಆಸೆ ಕೈಚೆಲ್ಲಿದರು. ಮತ್ತೊಂದೆಡೆ ಸ್ವಿಸ್ ತಾರೆ ಸ್ಟಾನಿಸ್ಲಾಸ್ ವಾವ್ರಿಂಕಾ ಕೂಡ ಎಂಟರ ಘಟ್ಟದಲ್ಲಿ ಸವಾಲು ಮುಗಿಸಿದರೆ, ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್, ಥೀಮ್ೆ ಸವಾಲೊಡ್ಡಲು ಸಜ್ಜಾಗಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ತಲಾ 2 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿಯರಾದ ಸಿಮೋನಾ ಹಲೆಪ್ ಮತ್ತು ಗಾರ್ಬಿನ್ ಮುಗುರುಜಾ ಉಪಾಂತ್ಯಕ್ಕೆ ಲಗ್ಗೆ ಇಟ್ಟಿದ್ದಾರೆ.

ಸ್ಪೇನ್​ನ ಎಡಗೈ ಆಟಗಾರ ನಡಾಲ್, ರಾಡ್ ಲೆವರ್ ಅರೇನಾದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 6-7 (3-6), 6-7 (4-7), 6-4, 6-7 (6-8) ಸೆಟ್​ಗಳಿಂದ ಥೀಮ್​ಗೆ​  ಶರಣಾದರು. 5ನೇ ಶ್ರೇಯಾಂಕಿತ ಥೀಮ್ ಈ ಗೆಲುವಿನೊಂದಿಗೆ ಕಳೆದೆರಡು ವರ್ಷದ ಫ್ರೆಂಚ್ ಓಪನ್ ಫೈನಲ್​ನಲ್ಲಿ ನಡಾಲ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡರು. ಗ್ರಾಂಡ್ ಸ್ಲಾಂನಲ್ಲಿ ಥೀಮ್ ವಿರುದ್ಧ ಹಿಂದಿನ 5 ಪಂದ್ಯದಲ್ಲೂ ನಡಾಲ್ ಗೆದ್ದಿದ್ದರು.

ವಾವ್ರಿಂಕಾಗೆ ಸೋಲುಣಿಸಿದ ಜ್ವೆರೇವ್

22 ವರ್ಷದ ಅಲೆಕ್ಸಾಂಡರ್ ಜ್ವೆರೇವ್ ಕ್ವಾರ್ಟರ್​ಫೈನಲ್​ನಲ್ಲಿ ಅನುಭವಿ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾಗೆ 1-6, 6-3, 6-4, 6-2ರಿಂದ ಸೋಲುಣಿಸಿದರು. 7ನೇ ಶ್ರೇಯಾಂಕಿತ ಜ್ವೆರೇವ್ ಮೊದಲ ಸೆಟ್​ನಲ್ಲಿ ಎಡವಿ ಹಿನ್ನಡೆ ಕಂಡರೂ, ನಂತರ 3 ಸೆಟ್​ಗಳಲ್ಲಿ ಗೆಲುವು ಒಲಿಸಿಕೊಂಡರು. 2014ರ ಆಸ್ಟ್ರೇಲಿಯನ್ ಓಪನ್ ಫೈನಲ್​ನಲ್ಲಿ ನಡಾಲ್​ಗೆ ಸೋಲುಣಿಸಿ ಪ್ರಶಸ್ತಿ ಗೆದ್ದಿದ್ದ ವಾವ್ರಿಂಕಾ, 2017ರ ಫ್ರೆಂಚ್ ಓಪನ್ ಬಳಿಕ ಮೊದಲ ಬಾರಿ ಗ್ರಾಂಡ್ ಸ್ಲಾಂ ಫೈನಲ್​ಗೇರುವ ಯತ್ನದಲ್ಲಿ ವಿಫಲರಾದರು.

ಜ್ವೆರೇವ್ ಬಹುಮಾನ ಕಾಡ್ಗಿಚ್ಚು ಪರಿಹಾರ ನಿಧಿಗೆ ದೇಣಿಗೆ

ಟೂರ್ನಿಯ ಪ್ರತಿ ಪಂದ್ಯದ ಗೆಲುವಿಗೆ 7.12 ಲಕ್ಷ ರೂ.ಗಳನ್ನು (10 ಸಾವಿರ ಯುಎಸ್ ಡಾಲರ್) ಆಸ್ಟ್ರೇಲಿಯಾದ ಕಾಡ್ಗಿಚ್ಚು ಸಂತ್ರಸ್ತರ ನಿಧಿಗೆ ನೀಡುವ ಸಂಕಲ್ಪ ಮಾಡಿರುವ ಜ್ವೆರೇವ್ ಈಗಾಗಲೆ 35.64 ಲಕ್ಷ ರೂ.ಗಳನ್ನು ಇದಕ್ಕಾಗಿ ತೆಗೆದಿಟ್ಟಿದ್ದಾರೆ.ಟೂರ್ನಿಯ ಪ್ರಶಸ್ತಿ ಗೆದ್ದರೆ ಲಭಿಸುವ 20.17 ಕೋಟಿ ರೂ. ಬಹುಮಾನ ಮೊತ್ತದ ಚೆಕ್ ಅನ್ನೂ ಕಾಡ್ಗಿಚ್ಚು ಸಂತ್ರಸ್ತರ ನಿಧಿಗೆ ನೀಡುವ ಶಪಥವನ್ನು ಜ್ವೆರೇವ್ ಕ್ವಾರ್ಟರ್​ಫೈನಲ್ ಗೆಲುವಿನ ಬಳಿಕ ಪುನರುಚ್ಚರಿಸಿದ್ದಾರೆ. 33 ಜನರು ಮತ್ತು ಅಪಾರ ಕಾಡುಪ್ರಾಣಿಗಳನ್ನು ಬಲಿಪಡೆದ ಕಾಡ್ಗಿಚ್ಚಿನ ಹೊಗೆಯಿಂದಾಗಿ ಟೂರ್ನಿಗೂ ಅಡಚಣೆಯಾಗುವ ಭೀತಿ ಇತ್ತು. ಆದರೆ ಟೂರ್ನಿ ಆರಂಭದ ವೇಳೆ ಬಿದ್ದ ಮಳೆಯಿಂದಾಗಿ ಕಾಡ್ಗಿಚ್ಚು ಹೊಗೆಯ ಸಮಸ್ಯೆ ನಿವಾರಣೆಯಾಗಿ ಟೂರ್ನಿಯ ಪಂದ್ಯಗಳು ಯಾವುದೇ ಅಡಚಣೆ ಇಲ್ಲದೆ ಸಾಗಿವೆ.

ಉಪಾಂತ್ಯಕ್ಕೆ ಮುಗುರುಜಾ-ಹಲೆಪ್  

ಶ್ರೇಯಾಂಕರಹಿತೆಯಾಗಿ ಕಣಕ್ಕಿಳಿದರೂ 2 ವರ್ಷ ಹಿಂದಿನ ಭರ್ಜರಿ ಲಯದಲ್ಲೇ ಆಡುತ್ತಿರುವ ಸ್ಪೇನ್ ತಾರೆ ಗಾರ್ಬಿನ್ ಮುಗುರುಜಾ ಮತ್ತು 4ನೇ ಶ್ರೇಯಾಂಕಿತೆ ಸಿಮೋನಾ ಹಲೆಪ್ ಸೆಮಿಫೈನಲ್​ನಲ್ಲಿ ಮುಖಾಮುಖಿ ಆಗಲಿದ್ದಾರೆ. 26 ವರ್ಷದ ಮುಗುರುಜಾ ಎಂಟರ ಘಟ್ಟದ ಕಾದಾಟದಲ್ಲಿ ರಷ್ಯಾದ ಅನಸ್ತೆಸಿಯಾ ಪಾವ್ಲುಚೆಂಕೋವಾಗೆ 7-5, 6-3 ನೇರಸೆಟ್​ಗಳಿಂದ ಸೋಲುಣಿಸಿ ಮೆಲ್ಬೋರ್ನ್​ನಲ್ಲಿ ಇದೇ ಮೊದಲ ಬಾರಿಗೆ ಉಪಾಂತ್ಯಕ್ಕೇರಿದರು. ವಿಶ್ವ ನಂ. 32 ಮುಗುರುಜಾ 2018ರ ವಿಂಬಲ್ಡನ್ ಬಳಿಕ ಇದೇ ಮೊದಲ ಬಾರಿಗೆ ಗ್ರಾಂಡ್ ಸ್ಲಾಂನಲ್ಲಿ ಸೆಮಿಫೈನಲ್​ಗೇರಿದ್ದಾರೆ. 2006 ಮತ್ತು 2007ರಲ್ಲಿ ಬಾಲಕಿಯರ ವಿಭಾಗದಲ್ಲಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದ ಪಾವ್ಲುಚೆಂಕೋವಾ, 49 ಗ್ರಾಂಡ್ ಸ್ಲಾಂಗಳಲ್ಲಿ ಆಡಿದ್ದರೂ ಒಮ್ಮೆಯೂ ಸೆಮಿಫೈನಲ್​ಗೇರದ ನಿರಾಸೆ ಮುಂದುವರಿಸಿದರು. ಅವರು 6ನೇ ಬಾರಿ ಕ್ವಾರ್ಟರ್​ಫೈನಲ್​ನಲ್ಲೇ ಹೊರಬಿದ್ದರು.

ಹಲೆಪ್​ಗೆ ಸುಲಭ ಗೆಲುವು

ರೊಮೆನಿಯಾ ತಾರೆ ಸಿಮೋನಾ ಹಲೆಪ್ 6-1, 6-1 ನೇರಸೆಟ್​ಗಳಿಂದ ಈಸ್ಟೋನಿಯಾದ ಅನೆಟ್ ಕೊಂಟಾವಿಟ್ ವಿರುದ್ಧ ನಿರಾಯಾಸದ ಗೆಲುವು ದಾಖಲಿಸಿ ದರು. 28 ವರ್ಷದ ಹಲೆಪ್ ಕೇವಲ 53 ನಿಮಿಷಗಳಲ್ಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡರು. ಒಂದೂ ಸೆಟ್ ಸೋಲದೆ ಕ್ವಾರ್ಟರ್​ಫೈನಲ್​ಗೇರಿದ ಏಕೈಕ ಆಟಗಾರ್ತಿಯಾಗಿದ್ದ ಹಲೆಪ್, ಸೆಮಿಫೈನಲ್​ಗೂ ಇದೇ ದಾಖಲೆ ಉಳಿಸಿಕೊಂಡಿದ್ದಾರೆ. 2018ರಲ್ಲಿ ಮೆಲ್ಬೋರ್ನ್​ನಲ್ಲಿ ಆಡಿದ ಫೈನಲ್​ನಲ್ಲಿ ಕ್ಯಾರೊಲಿನ್ ವೋಜ್ನಿಯಾಕಿಗೆ ಮಣಿದು ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ ಹಲೆಪ್, ನಂತರ 2 ಗ್ರಾಂಡ್ ಸ್ಲಾಂಗಳಲ್ಲಿ (2018ರ ಫ್ರೆಂಚ್ ಓಪನ್, 2019ರ ವಿಂಬಲ್ಡನ್) ಪ್ರಶಸ್ತಿ ಗೆದ್ದ ಸಾಧಕಿಯಾಗಿದ್ದಾರೆ. ಹೀಗಾಗಿ ಹೆಚ್ಚಿನ ವಿಶ್ವಾಸದೊಂದಿಗೆ ಫೈನಲ್​ಗೇರುವ ಹಂಬಲ ಅವರದಾಗಿದೆ. ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಕ್ವಾರ್ಟರ್​ಫೈನಲ್​ನಲ್ಲಿ ಆಡಿದ 28ನೇ ಶ್ರೇಯಾಂಕಿತೆ ಕೊಂಟಾವಿಟ್, ರಾಡ್ ಲೆವರ್ ಅರೆನಾದಲ್ಲಿ ಪ್ರೇಕ್ಷಕರು ಸರಿಯಾಗಿ ಕುಳಿತುಕೊಳ್ಳುವುದಕ್ಕೆ ಮೊದಲೇ 29 ನಿಮಿಷಗಳಲ್ಲಿ ಮೊದಲ ಸೆಟ್ ಸೋತರು. 24 ವರ್ಷದ ಕೊಂಟಾವಿಟ್ ಮೊದಲ ಸೆಟ್​ನ 3 ಮತ್ತು 5ನೇ ಗೇಮ್ಲ್ಲಿ ಸರ್ವ್ ಬ್ರೇಕ್ ಎದುರಿಸಿದರು. -ಪಿಟಿಐ/ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net