ಮೈಸೂರು ವಾರಿಯರ್ಸ್‌ಗೆ ಮೊದಲ ಗೆಲುವು:ಮಿಂಚಿದ ಆಲ್ರೌಂಡರ್ ಮನೋಜ್ ಭಾಂಡಗೆ

smss
Published on

ಯುವ ಆಲ್ರೌಂಡರ್ ಮನೋಜ್ ಭಾಂಡಗೆ (32* ರನ್, 15 ಎಸೆತ, 2 ಬೌಂಡರಿ, 2 ಸಿಕ್ಸರ್ ಹಾಗೂ 19ಕ್ಕೆ 4 ವಿಕೆಟ್) ಭರ್ಜರಿ ಪ್ರದರ್ಶನದ ನೆರವಿನಿಂದ ಮೈಸೂರು ವಾರಿಯರ್ಸ್‌ ತಂಡ ದಿನದ 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಎದುರು 54 ರನ್‌ಗಳಿಂದ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ತಂಡ ನಾಯಕ ಕರುಣ್ ನಾಯರ್ (57 ರನ್, 39 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಬಲದಿಂದ 5 ವಿಕೆಟ್‌ಗೆ 195 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಆರಂಭಿಕ ಆರ್. ಸಮರ್ಥ್ (48) ಹಾಗೂ ಕರುಣ್ ನಾಯರ್ ಎರಡನೇ ವಿಕೆಟ್‌ಗೆ 91 ರನ್‌ಗಳ ಕಾಣಿಕೆ ನೀಡಿದರು. ಕರುಣ್ ನಾಯರ್ ಟೂರ್ನಿಯಲ್ಲಿ ಸತತ 2ನೇ ಅರ್ಧಶತಕ ಪೂರೈಸಿದರು. ಸ್ಲಾಗ್ ಓವರ್‌ನಲ್ಲಿ ಮನೋಜ್ ಭಾಂಡಗೆ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ಏರಿಸಿದರು. ಪ್ರತಿಯಾಗಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮನೋಜ್ ಭಾಂಡಗೆ ಹಾಗೂ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿ 19 ಓವರ್‌ಗಳಲ್ಲಿ 144 ರನ್‌ಗಳಿಗೆ ಆಲೌಟ್ ಆಯಿತು. ಗುಲ್ಬರ್ಗಾ ಪರ ಆರಂಭಿಕ ಎಲ್‌ಆರ್ ಚೇತನ್ (44) ಹೊರತುಪಡಿಸಿ ಇತರ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡಿದರು.

ಮೈಸೂರು ವಾರಿಯರ್ಸ್‌: 5 ವಿಕೆಟ್‌ಗೆ 195 (ಆರ್. ಸಮರ್ಥ್ 48, ಕರುಣ್ 57, ಜೆ. ಸುಚಿತ್ 17, ಭಾಂಡಗೆ 32*, ಎಸ್. ರಕ್ಷಿತ್ 21, ಅಭಿಲಾಷ್ 49ಕ್ಕೆ3, ಅಮಿತ್ ವರ್ಮ 24ಕ್ಕೆ1). ಗುಲ್ಬರ್ಗಾ ಮಿಸ್ಟಿಕ್ಸ್: 19 ಓವರ್‌ಗಳಲ್ಲಿ 144 (ಎಲ್‌ಆರ್ ಚೇತನ್ 48, ಪ್ರಜ್ವಲ್ 16, ಸ್ಮರಣ್ 15, ಮ್ಯಾಕ್ನೀಲ್ 20, ಅಮಿತ್ ವರ್ಮ 7, ವೈಶಾಕ್ 10, ಮನೋಜ್ 19ಕ್ಕೆ4, ಶ್ರೀಶ ಆಚಾರ್ 14ಕ್ಕೆ1). ಪಂದ್ಯಶ್ರೇಷ್ಠ: ಮನೋಜ್ ಭಾಂಡಗೆ.

ನಾಳೆಯ ಪಂದ್ಯಗಳು

ಗುಲ್ಬರ್ಗಾ ಮಿಸ್ಟಿಕ್ಸ್- ಶಿವಮೊಗ್ಗ ಲಯನ್ಸ್

ಆರಂಭ: ಮಧ್ಯಾಹ್ನ 1 ಕ್ಕೆ

ಹುಬ್ಬಳ್ಳಿ ಟೈಗರ್ಸ್‌-ಮಂಗಳೂರು ಡ್ರ್ಯಾಗನ್ಸ್

ಆರಂಭ: ಸಂಜೆ 5.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net