ಚೊಚ್ಚಲ ಮಹಾರಾಣಿ ಟ್ರೋಫಿಗಾಗಿ ಮಹಿಳಾ ಕ್ರಿಕೆಟಿಗರ ಪ್ರತಿಭಾನ್ವೇಷಣೆ ನಡೆಸಿದ ಮೈಸೂರು ವಾರಿಯರ್ಸ್

web mw
Published on

ಬೆಂಗಳೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ ಕ್ರಿಕೆಟ್ ತಂಡವು ಚೊಚ್ಛಲ ಮಹಾರಾಣಿ ಟ್ರೋಫಿ-2025 ಕೆಎಸ್‌ಸಿಎ ಟಿ20 ಪಂದ್ಯಾವಳಿಯಲ್ಲಿ ತನ್ನ ತಂಡವನ್ನು ಪ್ರತಿನಿಧಿಸಬಲ್ಲ ಮಹಿಳಾ ಕ್ರೀಡಾಪಟುಗಳಿಗಾಗಿ ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ನಡೆಸಿತು. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಭಾರತ ಟೆಸ್ಟ್ ತಂಡದ ಕ್ರಿಕೆಟ್ ಆಟಗಾರ್ತಿ ಶುಭಾ ಸತೀಶ್ ಮತ್ತು ಹಲವಾರು ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿಯರು ಪಾಲ್ಗೊಂಡರು.

ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ ಯಶಸ್ಸಿನ ಆಧಾರದಲ್ಲಿ ಈ ವರ್ಷ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯು ಮಹಿಳಾ ಕ್ರಿಕೆಟಿಗರಿಗಾಗಿ ಮಹಾರಾಣಿ ಟ್ರೋಫಿ ಟಿ20 ಪಂದ್ಯಾವಳಿ ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಮೈಸೂರು ವಾರಿಯರ್ಸ್ ತಂಡವು ಪ್ರತಿಭಾನ್ವೇಷಣಾ ಕಾರ್ಯಕ್ರಮ ನಡೆಸಿದೆ. ಜುಲೈ 29ರಂದು ಕೆಎಸ್‌ಸಿಎಯಲ್ಲಿ ಕ್ರೀಡಾಪಟುಗಳ ಹರಾಜು ಕಾರ್ಯಕ್ರಮ ನಡೆಯಲಿದೆ.

ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರಾಗನ್ಸ್, ಹುಬ್ಬಳ್ಳಿ ಟೈಗರ್ಸ್ ಮತ್ತು ಶಿವಮೊಗ್ಗ ಲಯನ್ಸ್ ಸೇರಿದಂತೆ ಒಟ್ಟು ಐದು ಮಹಿಳಾ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಭಾಗವಹಿಸಲಿವೆ.

ಸೈಕಲ್ ಪ್ಯೂರ್ ಅಗರಬತ್ತಿ ಮಹಾರಾಣಿ ಟ್ರೋಫಿ ಪಂದ್ಯಾವಳಿಗೆ ಬೆಂಬಲವಾಗಿ ನಿಂತಿದ್ದು, ಈ ವರ್ಷದ ಅತ್ಯುತ್ತಮ ಕ್ರೀಡಾಪಟುವಿಗೆ “ಟ್ರಸ್ಟೆಡ್ ಪ್ಲೇಯರ್” ಪ್ರಶಸ್ತಿಯನ್ನು ನೀಡಲಿದೆ.

ಮಹಾರಾಜ ಟ್ರೋಫಿಯಲ್ಲಿ ಮಹತ್ವದ ಸಾಧನೆ ಮಾಡಿರುವ ಮೈಸೂರು ವಾರಿಯರ್ಸ್ ತಂಡವು ಯುವ ಕ್ರಿಕೆಟಿಗರನ್ನು ಬೆಳೆಸುವ ಪರಂಪರೆಯನ್ನು ಹೊಂದಿದೆ. ಅದಕ್ಕೆ ಪೂರಕವಾಗಿಯೇ ಯುವ ಮಹಿಳಾ ಕ್ರಿಕೆಟಿಗರಿಗೆ ಅವಕಾಶ ನೀಡುವ ಸಲುವಾಗಿ ಪ್ರತಿಭಾನ್ವೇಷಣೆ ನಡೆಸಿದ್ದು, ಆಯ್ಕೆಯಾದ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕದಾದ್ಯಂತದ ಇರುವ ಯುವ ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಗುರುತಿಸಲು ಮೈಸೂರು ವಾರಿಯರ್ಸ್ ನ ಪ್ರತಿಭಾನ್ವೇಷಣಾ ಕಾರ್ಯಕ್ರವನ್ನು ರೂಪಿಸಲಾಗಿದ್ದು, ಇಲ್ಲಿ ಗುರುತಿಸಲಾಗುವ ಸುಮಾರು 60 ರಿಂದ 70 ಅತ್ಯುತ್ತಮ ಕ್ರೀಡಾ ಪ್ರತಿಭೆಗಳನ್ನು ಮೈಸೂರು ವಾರಿಯರ್ಸ್ ತಂಡವು ಮುಂಬರುವ ಹರಾಜಿಗೆ ಶಿಫಾರಸು ಮಾಡಲಿದೆ.

ಈ ಸಂದರ್ಭದಲ್ಲಿ ಮಹಾರಾಣಿ ಟ್ರೋಫಿ ಕುರಿತು ಮಾತನಾಡಿರುವ ಮೈಸೂರು ವಾರಿಯರ್ಸ್‌ನ ಮಾಲೀಕರು ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್​ ರಂಗಾ ಅವರು, “ಈ ವರ್ಷ ಮಹಾರಾಣಿ ಟ್ರೋಫಿ ಪಂದ್ಯಾವಳಿ ಆರಂಭವಾಗುತ್ತಿದ್ದು, ಈ ಮೂಲಕ ಮೈಸೂರು ವಾರಿಯರ್ಸ್ ತಂಡವು ಮಹಿಳಾ ಕ್ರಿಕೆಟ್‌ ನ ಅಭಿವೃದ್ಧಿಗೆ ಕೊಡುಗೆ ನೀಡಲು ಸಂತೋಷ ಪಡುತ್ತದೆ. ನಾವು ಯುವ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಅವಕಾಶ ಕೊಡಬೇಕು ಎಂಬ ನಂಬಿಕೆ ಹೊಂದಿದ್ದೇವೆ. ಅದಕ್ಕಾಗಿಯೇ ಪ್ರತಿಭಾನ್ವೇಷಣಾ ಕಾರ್ಯಕ್ರಮ ನಡೆಸುತ್ತೇವೆ. ಆಸಕ್ತರು ಅವಕಾಶ ಬಳಸಿಕೊಂಡು ನಮ್ಮ ಮೈಸೂರು ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸಬಹುದಾಗಿದೆ” ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮೈಸೂರು ವಾರಿಯರ್ಸ್‌ ತಂಡದ ವ್ಯವಸ್ಥಾಪಕ ಎಂ.ಆರ್. ಸುರೇಶ್, ಮುಖ್ಯ ಕೋಚ್ ಕರುಣಾ ಜೈನ್, ಸಹಾಯಕ ಕೋಚ್ ರಜತ್ ಎಸ್, ತಂಡದ ಫಿಸಿಯೋ ಮೃದು ಗೌತಮ್, ಸ್ಟ್ರೆಂಥ್  ಆಂಡ್ ಕಂಡಿಷನಿಂಗ್ ಕೋಚ್ ಹರ್ಷಿತಾ ಕೃಷ್ಣಸ್ವಾಮಿ ಮತ್ತು ಥ್ರೋ ಡೌನ್ ಸ್ಪೆಷಲಿಸ್ಟ್ ಗುರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net