ಕ್ರೀಡಾ ಕ್ಷೇತ್ರದಲ್ಲೂ ಮುತ್ತಪ್ಪ ರೈ ಸೈ...

muthappa rai
Published on

ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಅಥ್ಲೀಟ್‌ಗಳಿಗೆ ಪ್ರೋತ್ಸಾಹಿಸುವ ಸಲುವಾಗಿಯೇ ಕ್ರೀಡಾಡಳಿತಕ್ಕೆ ಬಂದಿದ್ದರು. ಎರಡು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಮುತ್ತಪ್ಪ ಸರಿಯಾಗಿ ಆಡಳಿತ ಕೈಗೆತ್ತುಕೊಳ್ಳುವಷ್ಟರಲ್ಲಿ ಆರೋಗ್ಯ ಕೈಕೊಟ್ಟಿತು. ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲೇ ಕಂಠೀರವ ಸ್ಟೇಡಿಯಂ ಅಥ್ಲೀಟ್‌ಗಳಿಗೆ ಮಾತ್ರ ಸೀಮಿತವಾಗಬೇಕೆಂದು ಹೋರಾಟಕ್ಕಿಳಿದಿದ್ದರು. ರಾಮನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷರಾಗಿ 2 ವರ್ಷ ಕಾರ್ಯನಿರ್ವಹಿಸಿದ್ದ ಮುತ್ತಪ್ಪ ರೈ, ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ ಆಯೋಜಿಸುತ್ತಿದ್ದರು. ಕೆಲ ಅಥ್ಲೀಟ್‌ಗಳಿಗೆ ಪ್ರಾಯೋಜಕತ್ವ ಕೂಡ ವಹಿಸಿದ್ದ ಮುತ್ತಪ್ಪ ರೈ ರಾಜ್ಯಮಟ್ಟದಲ್ಲಿ ಮತ್ತಷ್ಟು ಕೊಡುಗೆ ನೀಡುವ ಸಲುವಾಗಿ ರಾಜ್ಯ ಸಂಸ್ಥೆ ಅಧ್ಯಕ್ಷರಾಗಿದ್ದರು. ‘ಬೆಂಗಳೂರು ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಅಥ್ಲೆಟಿಕ್ಸ್ ಅಭಿವೃದ್ಧಿಗೆ ತಮ್ಮದೇ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದರು. ಕರ್ನಾಟಕದಿಂದ ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್‌ಗಳನ್ನು ಸಿದ್ಧಪಡಿಸುವುದೇ ಅವರ ಗುರಿಯಾಗಿತ್ತು. ಕಳೆದ 20 ವರ್ಷಗಳಿಂದ ಕ್ರೀಡಾಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು’ ಎಂದು ಕೆಎಎ ಸಂತಾಪ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net