

ಮುಂಬೈ: ಮುಂಬೈನ ಯುವ ಪ್ರತಿಭಾನ್ವಿತ ಆಟಗಾರ, ಟೀಂ ಇಂಡಿಯಾ ಆಟಗಾರ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.
ಮೂಲಗಳ ಪ್ರಕಾರ, ಮುಶೀರ್ ಖಾನ್ ತಂದೆ ನೌಶನ್ ಖಾನ್ ಅವರೊಂದಿಗೆ ಅಜಂಗಢದಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಕಾರು ರಸ್ತೆಯಲ್ಲಿ ನಾಲ್ಕೈದು ಬಾರಿ ಪಲ್ಟಿಯಾಗಿದೆ. ಈ ವೇಳೆ ಅವರ ಮೂಳೆ ಮುರಿತಕ್ಕೊಳಗಾಗಿದೆ. ಅಪಘಾತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಅ.1ರಂದು ಲಖನೌದಲ್ಲಿ ಇರಾನಿ ಕಪ್ ಪಂದ್ಯ ಆರಂಭವಾಗಲಿದೆ. ರೆಸ್ಟ್ ಆಫ್ ಇಂಡಿಯಾ, ರಣಜಿ ಟ್ರೋಫಿ ವಿಜೇತ ಮುಂಬೈ ತಂಡವನ್ನು ಎದುರಿಸಲಿದೆ. ಮುಂಬೈ ತಂಡದ ಪ್ರಮುಖ ಆಟಗಾರ 19ರ ಹರೆಯದ ಮುಶೀರ್ ಖಾನ್ ಇರಾನಿ ಕಪ್ಗೆ ಸಜ್ಜಾಗಿದ್ದಾರೆ. ಆದರೆ ಲಖನೌಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಮುಶೀರ್ ಖಾನ್, ಇರಾನಿ ಕಪ್ ಹಾಗೂ ಅ.11ರಂದು ಆರಂಭವಾಗುವ ರಣಜಿ ಟ್ರೋಫಿ ಆರಂಭಿಕ ಸುತ್ತಿನ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಮುಶೀರ್ ಖಾನ್ ಒಂಬತ್ತು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 51.14ರ ಸರಾಸರಿಯೊಂದಿಗೆ ಮುಶೀರ್ 15 ಇನ್ನಿಂಗ್ಸ್ಗಳಲ್ಲಿ ಮೂರು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 716 ರನ್ ಗಳಿಸಿದ್ದಾರೆ. ಅವರು ಬೌಲಿಂಗ್ನಲ್ಲಿ 8 ವಿಕೆಟ್ಗಳನ್ನೂ ಪಡೆದಿದ್ದಾರೆ. ಅವರು ಇತ್ತೀಚೆಗೆ ನಡೆದ ದುಲೀಪ್ ಟ್ರೋಫಿಯಲ್ಲಿ ಭಾರತ-ಬಿ ಪರ 181 ರನ್ಗಳನ್ನು ಸಿಡಿಸಿ ಆಯ್ಕೆದಾರರ ಗಮನವನ್ನು ಸೆಳೆದಿದ್ದರು.