

ದುಬೈ: ಲೀಗ್ ಹಂತದಿಂದ ಪ್ರಶಸ್ತಿ ಸುತ್ತಿನವರೆಗೂ ಬಲಿಷ್ಠ ನಿರ್ವಹಣೆ ಪ್ರದರ್ಶಿಸುತ್ತ ಬಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಸತತ 2ನೇ ಮತ್ತು ಒಟ್ಟಾರೆ 5ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಲೀಗ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ತಂಡ ಎಂಬ ಹಣೆಪಟ್ಟಿಗೆ ತಕ್ಕಂತೆ ನಿರ್ವಹಣೆ ತೋರಿದ ರೋಹಿತ್ ಶರ್ಮ ಬಳಗ ಐಪಿಎಲ್-13ರ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಚೊಚ್ಚಲ ಪ್ರಶಸ್ತಿ ಕನಸಿನಲ್ಲಿದ್ದ ಶ್ರೇಯಸ್ ಅಯ್ಯರ್ ಬಳಗ ನಿರಾಸೆ ಅನುಭವಿಸಿತು.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ, ನಾಯಕ ಶ್ರೇಯಸ್ ಅಯ್ಯರ್ (65ರನ್, 50 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ರಿಷಭ್ ಪಂತ್ (56 ರನ್, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಜೋಡಿಯ ಸಮಯೋಚಿತ ಬ್ಯಾಟಿಂಗ್‌ನಿಂದ 7 ವಿಕೆಟ್‌ಗೆ 156 ರನ್ ಗಳಿಸಿತು. ಪ್ರತಿಯಾಗಿ ಮುಂಬೈ ಇಂಡಿಯನ್ಸ್, ನಾಯಕ ರೋಹಿತ್ ಶರ್ಮ (68ರನ್, 51 ಎಸೆತ, 5 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.4 ಓವರ್‌ಗಳಲ್ಲಿ 5 ವಿಕೆಟ್‌ಗೆ 157 ರನ್‌ಗಳಿಸಿ ಜಯದ ನಗೆ ಬೀರಿತು.