ವಾಂಖೆಡೆಯಲ್ಲಿ ಇಂದು ಮುಂಬೈ ಇಂಡಿಯನ್ಸ್​​-ಲಖನೌ ಸೂಪರ್​ಜೈಂಟ್ಸ್​ ಫೈಟ್​

web mi vs lsg
Published on

ಮುಂಬೈ: ಸತತ 4 ಗೆಲುವಿನೊಂದಿಗೆ ಪುಟಿದೆದ್ದಿರುವ ಮುಂಬೈ ಇಂಡಿಯನ್ಸ್​ ಮತ್ತು ಕೊನೇ 3 ಪಂದ್ಯಗಳಲ್ಲಿ 2ರಲ್ಲಿ ಸೋತು ಲಯ ತಪ್ಪಿರುವ ಲಖನೌ ಸೂಪರ್​ಜೈಂಟ್ಸ್​ ತಂಡಗಳು ಐಪಿಎಲ್​ 18ನೇ ಆವೃತ್ತಿಯಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾದಾಟದಲ್ಲಿ ಗೆದ್ದ ತಂಡಕ್ಕೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸುವ ಮೂಲಕ ಪ್ಲೇಆ್​ ಆಸೆ ವೃದ್ಧಿಸಿಕೊಳ್ಳುವ ಅವಕಾಶವಿದೆ.

ಉಭಯ ತಂಡಗಳು ಇದುವರೆಗೆ ತಲಾ 9 ಪಂದ್ಯ ಆಡಿದ್ದು, ತಲಾ 5 ಜಯ, 4 ಸೋಲಿನ ಸಮಾನ ಲಿತಾಂಶವನ್ನು ಕಂಡಿವೆ. ಆದರೆ ರನ್​ರೇಟ್​ ಲೆಕ್ಕಾಚಾರದಲ್ಲಿ ಹಾರ್ದಿಕ್​ ಪಾಂಡ್ಯ ಬಳಗ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದೆ. ಟೂರ್ನಿಯ ಆರಂಭಿಕ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು, 4ರಲ್ಲಿ ಸೋತಿದ್ದ ಮುಂಬೈ ಇದೀಗ ಗೆಲುವಿನ ಓಟವನ್ನು ಸತತ 5ನೇ ಪಂದ್ಯಕ್ಕೂ ವಿಸ್ತರಿಸುವ ಹಂಬಲದಲ್ಲಿದೆ.

ಮುಂಬೈ ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್​ ಎದುರು ಸುಲಭ ಗೆಲುವು ಸಾಧಿಸಿದ್ದರೆ, ಲಖನೌ ತಂಡ ಡೆಲ್ಲಿ ಎದುರು ಪರಾಭವಗೊಂಡಿತ್ತು. ರೋಹಿತ್​ ಶರ್ಮ ಸತತ 2 ಅರ್ಧಶತಕ ಸಿಡಿಸಿ ಲಯ ಕಂಡುಕೊಂಡಿರುವುದು, ವಿಲ್​ ಜಾಕ್ಸ್​ ಆಲ್ರೌಂಡ್​ ನಿರ್ವಹಣೆ, ಟ್ರೆಂಟ್​ ಬೌಲ್ಟ್​ ಬಿಗಿ ಬೌಲಿಂಗ್​ ದಾಳಿ ಮುಂಬೈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜತೆಗೆ ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​,​ ರಿಕೆಲ್​ಟನ್​ ಕೂಡ ಉತ್ತಮ ಕೊಡುಗೆ ನೀಡಿದ್ದಾರೆ. ಇತರ ಕೆಲ ತಂಡಗಳು ತವರಿನ ಮೈದಾನದಲ್ಲಿ ಪರದಾಡುತ್ತಿರುವ ನಡುವೆ ಮುಂಬೈ ತವರಿನ 4 ಪಂದ್ಯಗಳಲ್ಲಿ 3ರಲ್ಲಿ ಗೆಲುವು ದಾಖಲಿಸಿದೆ.

ಮುಂಬೈ ಎದುರು ಲಖನೌದಲ್ಲಿ ಆಡಿದ ಮೊದಲ ಮುಖಾಮುಖಿಯಲ್ಲಿ ಗೆದ್ದಿದ್ದ ರಿಷಭ್​ ಪಂತ್​ ಪಡೆ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯಲಿದೆ. ಇದಲ್ಲದೆ ಮುಂಬೈ ಎದುರಿನ ಹಿಂದಿನ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವುದು ಕೂಡ ಲಖನೌಗೆ ಬಲ ತುಂಬಿದೆ. ಬ್ಯಾಟಿಂಗ್​ ವಿಭಾಗದಲ್ಲಿ ಪ್ರಮುಖವಾಗಿ ನಿಕೋಲಸ್​ ಪೂರನ್​ ಮತ್ತು ಮಿಚೆಲ್​ ಮಾರ್ಷ್​ ಅವರನ್ನೇ ನೆಚ್ಚಿಕೊಂಡಿರುವ ಲಖನೌ, ಅವರು ವಿಲರಾದಾಗಲೂ ಗೆಲ್ಲುವ ದಿಟ್ಟತನ ತೋರಬೇಕಾಗಿದೆ. ಬೌಲಿಂಗ್​ ವಿಭಾಗದಲ್ಲಿ ಶಾರ್ದೂಲ್​ ಠಾಕೂರ್​, ಆವೇಶ್​ ಖಾನ್​, ದಿಗ್ವೇಶ್​ ರಾಥಿ, ರವಿ ಬಿಷ್ಣೋಯಿ ಅಸ್ಥಿರ ನಿರ್ವಹಣೆಯೂ ಲಖನೌಗೆ ಹಿನ್ನಡೆ ತಂದಿದೆ.

ಪಂತ್​ ಮೇಲೆ ಒತ್ತಡ

ಕಳೆದ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಲಖನೌ ತಂಡ ಸೇರುವ ಮೂಲಕ ಟೂರ್ನಿಯ ದುಬಾರಿ ಆಟಗಾರ ಎನಿಸಿರುವ ರಿಷಭ್​ ಪಂತ್​, ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ ಕೇವಲ 106 ರನ್​ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಕಳೆದ ಪಂದ್ಯದಲ್ಲಿ ಪಂತ್​ ಬ್ಯಾಟಿಂಗ್​ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದು ಇನಿಂಗ್ಸ್​ನ ಕೊನೇ 2 ಎಸೆತಗಳನ್ನಷ್ಟೇ ಎದುರಿಸಿದ್ದಲ್ಲದೆ, ಶೂನ್ಯಕ್ಕೆ ಔಟಾಗಿದ್ದರು. ಜತೆಗೆ ಇಂಪ್ಯಾಕ್ಟ್​ ಪ್ಲೇಯರ್​ ಬಳಕೆ, ವೇಗಿ ಮಯಾಂಕ್​ ಯಾದವ್​ ಫಿಟ್​ ಆಗಿದ್ದರೂ ಬಳಸಿಕೊಳ್ಳದಿರುವುದು ಸೇರಿದಂತೆ ನಾಯಕತ್ವದಲ್ಲೂ ಪಂತ್​ ಕೆಲ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ದುಬಾರಿ ಸಂಭಾವನೆಯೊಂದಿಗೆ ಈ ಎಡವಟ್ಟುಗಳೂ ಪಂತ್​ ಮೇಲೆ ಒತ್ತಡ ಹೇರುತ್ತಿವೆ. ಹೀಗಾಗಿ ತನ್ನ ಮೌಲ್ಯಕ್ಕೆ ನ್ಯಾಯ ಒದಗಿಸಬೇಕಾದರೆ ಪಂತ್​ ಬ್ಯಾಟಿಂಗ್​-ನಾಯಕತ್ವ ಎರಡರಲ್ಲೂ ಸುಧಾರಿತ ನಿರ್ವಹಣೆ ತೋರಿಸುವುದು ಅಗತ್ಯವಾಗಿದೆ.

ಮುಖಾಮುಖಿ: 7

ಮುಂಬೈ: 1

ಲಖನೌ: 6

ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

19 ಸಾವಿರ ಮಕ್ಕಳು ಹಾಜರಿ

ಪಂದ್ಯದ ವೇಳೆ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ನಗರದ ವಿವಿಧ ಎನ್​ಜಿಒಗಳ ಸುಮಾರು 19 ಸಾವಿರ ಬಡ ಮಕ್ಕಳು ಹಾಜರಿರಲಿದ್ದಾರೆ. ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಒಡತಿ ನೀತಾ ಅಂಬಾನಿ ಅವರ ಸಾರಥ್ಯದ "ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ' (ಇಎಸ್​ಎ) ಅಭಿಯಾನದ ಅಂಗವಾಗಿ ಈ ಮಕ್ಕಳು ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ. ರಿಲಯನ್ಸ್​ ಸಹಯೋಗದ ಇಎಸ್​ಎ ಅಭಿಯಾನದ ಅನ್ವಯ ಮುಂಬೈ ಫ್ರಾಂಚೈಸಿ ಪ್ರತಿ ವರ್ಷ ಒಂದು ಪಂದ್ಯಕ್ಕೆ ಸಾವಿರಾರು ಮಕ್ಕಳಿಗೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ಕಲ್ಪಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net