

ಶಾರ್ಜಾ: ಡೆತ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಹಾಗೂ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್-13ರಲ್ಲಿ ಭಾನುವಾರದ ಮೊದಲ ಪಂದ್ಯದಲ್ಲಿ ಎದುರಾಗಲಿವೆ. ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ಮುಂಬೈ ತಂಡದ ಬ್ಯಾಟಿಂಗ್ ಹಾಗೂ ಸನ್‌ರೈಸರ್ಸ್ ತಂಡದ ಬೌಲರ್‌ಗಳ ಹಣಾಹಣಿಗೆ ಸಾಕ್ಷಿಯಾಗಲಿದೆ. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಸನ್‌ರೈಸರ್ಸ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ಪಡೆಯಲಿದ್ದಾರೆ.
ಮುಂಬೈಗೆ ಮಧ್ಯಮ ಕ್ರಮಾಂಕವೇ ಶಕ್ತಿ
ಕೈರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಒಳಗೊಂಡ ಮಧ್ಯಮ ಕ್ರಮಾಂಕವೇ ಮುಂಬೈ ಬ್ಯಾಟಿಂಗ್ ವಿಭಾಗದ ದೊಡ್ಡ ಶಕ್ತಿಯಾಗಿದೆ. ಆರಂಭಿಕ ಹಂತದಲ್ಲಿ ರನ್‌ಗಳಿಸಲು ಪರದಾಡಿದರೂ ಡೆತ್ ಓವರ್‌ಗಳಲ್ಲಿ ರನ್ ಹೊಳೆಯನ್ನೇ ಈ ಬ್ಯಾಟ್ಸ್‌ಮನ್‌ಗಳು ಹರಿಸುತ್ತಿದ್ದಾರೆ. ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಆರ್‌ಸಿಬಿ ಹಾಗೂ ಪಂಜಾಬ್ ಎದುರು ಕಡೇ 5 ಓವರ್‌ಗಳಲ್ಲಿ 89 ರನ್‌ಗಳಿಸಿದ್ದೇ ಇದಕ್ಕೆ ಸಾಕ್ಷಿ. ಆರಂಭಿಕ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಅಸ್ಥಿರ ನಿರ್ವಹಣೆ ತಂಡವನ್ನು ಕಾಡುತ್ತಿದೆ. ರಾಹುಲ್ ಚಹರ್ ಬೌಲಿಂಗ್ ವಿಭಾಗದಲ್ಲಿ ಗಮನಸೆಳೆಯುತ್ತಿದ್ದು, ತಂಡದ ಪ್ರಮುಖ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಸನ್‌ರೈಸರ್ಸ್‌ಗೆ ಕೈಕೊಡುತ್ತಿರುವ ಸ್ಟಾರ್‌ಗಳು
ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿದ್ದರೂ ಇದುವರೆಗೆ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ಕಳೆದ ನಾಲ್ಕು ಪಂದ್ಯಗಳಿಂದ ಕನಿಷ್ಠ ಅರ್ಧಶತಕ ಸಿಡಿಸಲು ವಿಫಲವಾಗಿರುವ ವಾರ್ನರ್ ಫಾರ್ಮ್ ಕೊರತೆ ಎದುರಿಸುತ್ತಿದ್ದಾರೆ. ಜಾನಿ ಬೇರ್‌ಸ್ಟೋ, ಕೇನ್ ವಿಲಿಯಮ್ಸ್‌ನ್, ಮನೀಷ್ ಪಾಂಡೆ ಕೂಡ ದೊಡ್ಡ ಮೊತ್ತ ಪೇರಿಸಲು ವಿಫಲರಾಗುತ್ತಿದ್ದಾರೆ. ರಶೀದ್ ಖಾನ್, ಟಿ.ನಟರಾಜನ್, ಖಲೀಲ್ ಅಹ್ಮದ್‌ರಂಥ ಯುವ ಬೌಲರ್‌ಗಳು ಸ್ಪರ್ಧಾತ್ಮಕ ಮೊತ್ತವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಪ್ರಿಯಂ ಗಾರ್ಗ್, ಅಭಿಷೇಕ್ ಶರ್ಮ ಯುವ ಜೋಡಿ ಬಿರುಸಿನ ಬ್ಯಾಟಿಂಗ್ ತೋರಿರುವುದು ಮಧ್ಯಮ ಕ್ರಮಾಂಕದಲ್ಲಿ ತಂಡದ ವಿಶ್ವಾಸ ಹೆಚ್ಚಿಸಿದೆ.
ಇದನ್ನೂ ಓದಿ:
ಟೀಮ್ ನ್ಯೂಸ್:
ಮುಂಬೈ ಇಂಡಿಯನ್ಸ್: ಹಿಂದಿನ ಎರಡೂ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಲಯ ಕಂಡುಕೊಂಡಿದ್ದಾರೆ. ಆರಂಭಿಕ ಹಂತದಲ್ಲಿ ಕ್ವಿಂಟನ್ ಡಿಕಾಕ್ ವಿಫಲರಾಗುತ್ತಿದ್ದರೂ ಆಡುವ ಬಳಗದಲ್ಲಿ ಬದಲಾವಣೆಯ ನಿರೀಕ್ಷೆ ಇಲ್ಲ.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್‌ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.
ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ವಿರುದ್ಧ 48 ರನ್ ಜಯ.
ಸನ್‌ರೈಸರ್ಸ್ ಹೈದರಾಬಾದ್: ಸಿಎಸ್‌ಕೆ ತಂಡವನ್ನು ಮಣಿಸಿದ ವಿಶ್ವಾಸದಲ್ಲಿರುವ ಸನ್‌ರೈಸರ್ಸ್ ತಂಡಕ್ಕೆ ಗಾಯದ ಸಮಸ್ಯೆಯಿಂದ ಭುವನೇಶ್ವರ್ ಕುಮಾರ್ ಅಲಭ್ಯರಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಟಿ.ನಟರಾಜನ್, ಖಲೀಲ್ ಅಹ್ಮದ್ ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ. ಬಸಿಲ್ ಥಂಪಿ, ಸಂದೀಪ್ ಶರ್ಮ ಅಥವಾ ಸಿದ್ದಾರ್ಥ್ ಕೌಲ್ ಈ ಮೂವರಲ್ಲಿ ಒಬ್ಬರು ಭುವನೇಶ್ವರ್ ಸ್ಥಾನವನ್ನು ತುಂಬಲಿದ್ದಾರೆ.
ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಪ್ರಿಯಂ ಗಾರ್ಗ್, ಅಭಿಷೇಕ್ ಶರ್ಮ, ರಶೀದ್ ಖಾನ್, ಸಿದ್ದಾರ್ಥ್ ಕೌಲ್/ಬಸಿಲ್ ಥಂಪಿ/ಸಂದೀಪ್ ಶರ್ಮ, ಖಲೀಲ್ ಅಹ್ಮದ್, ಟಿ.ನಟರಾಜನ್.
ಕಳೆದ ಪಂದ್ಯ: ಸಿಎಸ್‌ಕೆ ವಿರುದ್ಧ 7 ರನ್ ಜಯ
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 14, ಮುಂಬೈ: 7, ಸನ್‌ರೈಸರ್ಸ್: 7