

ಬೆಂಗಳೂರು: ಶ್ರೀಲಂಕಾದ ದಿಗ್ಗಜ ವೇಗದ ಬೌಲರ್ ಲಸಿತ್ ಮಾಲಿಂಗ ಶುಕ್ರವಾರ 37ನೇ ವರ್ಷದ ಹುಟ್ಟಹಬ್ಬ ಆಚರಿಸಿಕೊಂಡರು. ನಿಗದಿತ ಓವರ್ಗಳಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಮಾಲಿಂಗ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಐಸಿಸಿ, ಮುಂಬೈ ಇಂಡಿಯನ್ಸ್ ಹಾಗೂ ಐಪಿಎಲ್ನ ಅಧಿಕೃತ ವೆಬ್ಸೈಟ್ಗಳಲ್ಲಿ ಮಾಲಿಂಗ ಹುಟ್ಟುಹಬ್ಬಕ್ಕೆ ಶುಭ ಕೋರಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಸಹ-ಆಟಗಾರ ಹಾರ್ದಿಕ್ ಪಾಂಡ್ಯ ಮಾಲಿಂಗ ಜತೆಗಿರುವ 4 ಫೋಟೋಗಳನ್ನು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
ಐಪಿಎಲ್ ಆರಂಭಿಕ ದಿನಗಳಿಂದಲೂ ಮುಂಬೈ ಇಂಡಿಯನ್ಸ್ ತಂಡ ಪ್ರತಿನಿಧಿಸುತ್ತಿರುವ ಮಾಲಿಂಗ, ವೈಯಕ್ತಿಕ ಕಾರಣಗಳಿಂದ ಸೆ.19 ರಿಂದ ಯುಎಇಯಲ್ಲಿ ಆರಂಭಗೊಳ್ಳಲಿರುವ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ವಿರಾಟ್ ಕೊಹ್ಲಿ ಬಿಟ್ಟರೆ ಲಸಿತ್ ಮಾಲಿಂಗ, ಐಪಿಎಲ್ನಲ್ಲಿ ಒಂದೇ ತಂಡ ಪ್ರತಿನಿಧಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಮುಂಬೈ ಪರ ಐಪಿಎಲ್ನಲ್ಲಿ ಇದುವರೆಗೂ ಆಡಿರುವ 122 ಪಂದ್ಯಗಳಿಂದ 170 ವಿಕೆಟ್ ಕಬಳಿಸಿದ್ದಾರೆ.
ಶ್ರೀಲಂಕಾ ತಂಡದ ಪರ 30 ಟೆಸ್ಟ್, 226 ಏಕದಿನ ಹಾಗೂ 83 ಟಿ20 ಪಂದ್ಯಗಳನ್ನಾಡಿದ್ದಾರೆ. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮಾಲಿಂಗ, ಟಿ20 ಕ್ರಿಕೆಟ್ನಲ್ಲಿ 107 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 338 ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 101 ವಿಕೆಟ್ ಕಬಳಿಸಿದ್ದಾರೆ. 2011ರಲ್ಲಿ ತಮ್ಮ 27ನೇ ವಯಸ್ಸಿಗೆ ಮಾಲಿಂಗ ಟೆಸ್ಟ್ಗೆ ವಿದಾಯ ಘೋಷಿಸಿದರು. 2014ರ ಟಿ20 ವಿಶ್ವಕಪ್ ವಿಜೇತ ಲಂಕಾ ತಂಡದ ಸದಸ್ಯರಾಗಿದ್ದರು.