

ಚೆನ್ನೈ: ಮಧ್ಯಮ ಕ್ರಮಾಂಕದ ವೈಲ್ಯದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಸ್ಟಾರ್ ಆಟಗಾರರ ನೀರಸ ನಿರ್ವಹಣೆಯಿಂದ ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-14ರಲ್ಲಿ ಶುಕ್ರವಾರ ಮುಖಾಮುಖಿ ಆಗಲಿವೆ. ಉಭಯ ತಂಡಗಳಿಗೂ ದಿಢೀರ್ ಬ್ಯಾಟಿಂಗ್ ಕುಸಿತವೇ ದೊಡ್ಡ ತಲೆನೋವಾಗಿದೆ. ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ಮುಂಬೈ ಮಧ್ಯಮ ಕ್ರಮಾಂಕದಲ್ಲಿ 17 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟಿದ್ದರೆ, ಪಂಜಾಬ್ ತಂಡವೂ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ವಿರುದ್ಧ 24 ರನ್ ಅಂತರದಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿದಿತ್ತು.
ಮುಂಬೈಗೆ ಬ್ಯಾಟಿಂಗ್ ಚಿಂತೆ
ಕಳೆದ ಆವೃತ್ತಿಯಲ್ಲಿ ಮುಂಬೈಗೆ ಬ್ಯಾಟಿಂಗ್ ವಿಭಾಗದಲ್ಲಿ ಅಗತ್ಯ ಸಮಯದಲ್ಲಿ ಒಬ್ಬರಾದರೂ ಆಸರೆಯಾಗಿ ನಿಲ್ಲುತ್ತಿದ್ದರು. ಸ್ಲಾಗ್ ಓವರ್‌ಗಳಲ್ಲಿ ರನ್ ಪ್ರವಾಹವೇ ಹರಿಯುತ್ತಿತ್ತು. ಆದರೆ ಈ ಬಾರಿ ಮುಂಬೈ ಉತ್ತಮ ಮೊತ್ತ ಪೇರಿಸಲು ಎಡವುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್-ಕೃನಾಲ್ ಪಾಂಡ್ಯ ಮತ್ತು ಕೈರಾನ್ ಪೊಲ್ಲಾರ್ಡ್ ವೈಲ್ಯ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇಶಾನ್ ಕಿಶನ್ ಅವರಿಂದಲೂ ಉತ್ತಮ ಕೊಡುಗೆ ಲಭಿಸುತ್ತಿಲ್ಲ. ಹೀಗಾಗಿ ಬಲಿಷ್ಠ ಬೌಲಿಂಗ್ ಪಡೆ ಹೊಂದಿದ್ದರೂ, ಬ್ಯಾಟ್ಸ್‌ಮನ್‌ಗಳ ವೈಲ್ಯದಿಂದಾಗಿ ಮುಂಬೈ ಸಮಸ್ಯೆಗೆ ಸಿಲುಕಿದೆ. ಆಡಿದ 4 ಪಂದ್ಯಗಳ ಪೈಕಿ 3ರಲ್ಲಿ ಮುಂಬೈ ಕನಿಷ್ಠ 9 ವಿಕೆಟ್ ಕಳೆದುಕೊಂಡಿದೆ. ಈ ಸಮಸ್ಯೆ ನೀಗಿಸಿಕೊಂಡರಷ್ಟೇ ರೋಹಿತ್ ಶರ್ಮ ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ಹೋರಾಟವನ್ನು ಜೀವಂತವಾಗಿಡಲು ಸಾಧ್ಯವಾಗಲಿದೆ.
ಲಯ ಕಂಡುಕೊಳ್ಳಲು ಪಂಜಾಬ್ ಪರದಾಟ
ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದರೂ, ನಂತರದ 3 ಪಂದ್ಯಗಳಲ್ಲಿ ಸೋತಿರುವ ಪಂಜಾಬ್ ಕಿಂಗ್ಸ್‌ಗೆ ಬ್ಯಾಟಿಂಗ್ ಜತೆಗೆ ಬೌಲಿಂಗ್ ವಿಭಾಗವೂ ಕೈಕೊಡುತ್ತಿದೆ. ಕನ್ನಡಿಗರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೀಪಕ್ ಹೂಡಾ ಮತ್ತು ಶಾರುಖ್ ಖಾನ್ ಅವರಂಥ ಭಾರತೀಯ ಬ್ಯಾಟ್ಸ್‌ಮನ್‌ಗಳಷ್ಟೇ ರನ್ ಗಳಿಸುತ್ತಿದ್ದರೆ ವಿದೇಶಿ ತಾರೆಯರಾದ ಕ್ರಿಸ್ ಗೇಲ್, ನಿಕೋಲಸ್ ಪೂರನ್ ರನ್‌ಬರ ದೊಡ್ಡ ಹಿನ್ನಡೆಯಾಗಿದೆ. ಬೌಲಿಂಗ್‌ನಲ್ಲೂ ಕಳೆದ ಹರಾಜಿನ ದುಬಾರಿ ಖರೀದಿಯಾಗಿರುವ ವೇಗಿಗಳಾದ ಜೇ ರಿಚರ್ಡ್‌ಸನ್ (14 ಕೋಟಿ ರೂ) ಮತ್ತು ರಿಲೀ ಮೆರಿಡಿತ್ (8 ಕೋಟಿ ರೂ) ಸ್ಪಿನ್‌ಸ್ನೇಹಿ ಪಿಚ್‌ಗಳಲ್ಲಿ ಪರಿಣಾಮಕಾರಿ ಎನಿಸಿಲ್ಲ. ಆಲ್ರೌಂಡರ್ ಮೋಯ್ಸೆಸ್ ಹೆನ್ರಿಕ್ಸ್ ಕೂಡ ಕಳೆದ ಪಂದ್ಯದಲ್ಲಿ ಗಮನಾರ್ಹ ನಿರ್ವಹಣೆಯನ್ನೇನೂ ತೋರಿಲ್ಲ. ಪಂಜಾಬ್ ಕಿಂಗ್ಸ್ ತಂಡ ಗೆಲುವಿನ ಹಳಿಗೆ ಮರಳಲು ವಿದೇಶಿ ಆಟಗಾರರಿಂದ ಸದೃಢ ನಿರ್ವಹಣೆ ಅಗತ್ಯವಾಗಿದೆ. ಕೆಎಲ್ ರಾಹುಲ್ ಇನ್ನೊಂದು ಸಿಕ್ಸರ್ ಸಿಡಿಸಿದರೆ, ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಪೂರೈಸಲಿದ್ದಾರೆ.
ಪಂಜಾಬ್ ಕಿಂಗ್ಸ್: ಕಳೆದ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಕೆಲ ಆಟಗಾರರನ್ನು ಖರೀದಿಸಿದ್ದರೂ, ಟೂರ್ನಿಯಲ್ಲಿ ಇದುವರೆಗೆ ಅವರ‌್ಯಾರೂ ಉಪಯೋಗಕ್ಕೆ ಬಂದಿಲ್ಲ. ಕೊನೆಗೂ ಫಿಟ್ ಆಗಿರುವ ಕ್ರಿಸ್ ಜೋರ್ಡನ್, ್ಯಾಬಿಯನ್ ಅಲೆನ್ ಬದಲಿಗೆ ಕಣಕ್ಕಿಳಿಯಬಹುದು. ಮುರುಗನ್ ಅಶ್ವಿನ್ ಸ್ಥಾನದಲ್ಲಿ ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಆಡುವ ನಿರೀಕ್ಷೆ ಇದೆ. ನಿಕೋಲಸ್ ಪೂರನ್ ಸ್ಥಾನಕ್ಕೆ ಐಸಿಸಿ ಟಿ20 ರ‌್ಯಾಂಕಿಂಗ್‌ನ ನಂ. 1 ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಉತ್ತಮ ಆಯ್ಕೆಯಾಗಬಹುದು.
ಕಳೆದ ಪಂದ್ಯ: ಸನ್‌ರೈಸರ್ಸ್ ವಿರುದ್ಧ 9 ವಿಕೆಟ್ ಸೋಲು.
ಮುಂಬೈ ಇಂಡಿಯನ್ಸ್: ಕಳೆದ ಪಂದ್ಯದಲ್ಲಿ ಮೂವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದು ಕೈಸುಟ್ಟುಕೊಂಡಿರುವ ಮುಂಬೈ ತಂಡ ಈ ಬಾರಿ ಮತ್ತೆ 4ನೇ ವಿದೇಶಿ ಆಟಗಾರನಿಗೆ ಅವಕಾಶ ಕಲ್ಪಿಸಲಬಹುದು. ಆಗ ಜೇಮ್ಸ್ ನೀಶಾಮ್ ಅಥವಾ ನಾಥನ್ ಕೌಲ್ಟರ್-ನಿಲ್ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಬ್ಯಾಟಿಂಗ್ ಬಲಪಡಿಸಲು ಕ್ರಿಸ್ ಲ್ಯಾನ್‌ಗೆ ಮತ್ತೆ ಸ್ಥಾನ ನೀಡಿದರೂ ಅಚ್ಚರಿ ಇಲ್ಲ.
ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಸೋಲು.
ಮುಖಾಮುಖಿ: 26
ಮುಂಬೈ: 14
ಪಂಜಾಬ್: 12
*ಆರಂಭ: ರಾತ್ರಿ 7.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್