ರೋಹಿತ್ ಅಬ್ಬರ, ಮುಂಬೈಗೆ ಸತತ 4ನೇ ಜಯ: ಅಂಕಪಟ್ಟಿಯಲ್ಲಿ ಆರ್‌ಸಿಬಿ ಹಿಂದಿಕ್ಕಿದ ಹಾರ್ದಿಕ್ ಪಡೆ

New Project (1)
Published on

ಹೈದರಾಬಾದ್: ವೇಗಿ ಟ್ರೆಂಟ್ ಬೌಲ್ಟ್ (26ಕ್ಕೆ 4) ಮಾರಕ ದಾಳಿ ಹಾಗೂ ರೋಹಿತ್ ಶರ್ಮ (70 ರನ್, 46 ಎಸೆತ, 8 ಬೌಂಡರಿ, 3 ಸಿಕ್ಸರ್) 9 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಸಿಡಿಸಿದ ಸತತ 2ನೇ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ 18ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು 7 ವಿಕೆಟ್‌ಗಳ ಗೆಲುವು ಒಲಿಸಿಕೊಂಡಿದೆ. ಸತತ 4ನೇ ಜಯದೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ ಅಂಕಪಟ್ಟಿಯಲ್ಲಿ 6ರಿಂದ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಹಾಲಿ ರನ್ನರ್ ಅಪ್ ಪ್ಯಾಟ್ ಕಮ್ಮಿನ್ಸ್ ಪಡೆ ಒಟ್ಟಾರೆ 6ನೇ ಸೋಲಿನೊಂದಿಗೆ ಪ್ಲೇಆ್ ರೇಸ್‌ನಲ್ಲಿ ಭಾರಿ ಹಿನ್ನಡೆ ಕಂಡಿದೆ.

ಆರ್‌ಜಿಐ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್‌, ದೀಪಕ್ ಚಹರ್ (12ಕ್ಕೆ 2) ಹಾಗೂ ಟ್ರೆಂಟ್ ಬೌಲ್ಟ್ ನೀಡಿದ ಆರಂಭಿಕ ಆಘಾತಕ್ಕೆ ತತ್ತರಿಸಿತು. ಆಗ ವಿಕೆಟ್ ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ (71 ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಅಭಿನವ್ ಮನೋಹರ್ (43 ರನ್, 37 ಎಸೆತ, 2 ಬೌಂಡರಿ, 3 ಸಿಕ್ಸರ್) ಸಾಹಸದಿಂದ 8 ವಿಕೆಟ್‌ಗೆ 143 ರನ್ ಪೇರಿಸಿತು. ಪ್ರತಿಯಾಗಿ ರೋಹಿತ್ ಹಾಗೂ ಸೂರ್ಯಕುಮಾರ್ (40*ರನ್, 19 ಎಸೆತ, 5 ಬೌಂಡರಿ, 2 ಸಿಕ್ಸರ್) ಜತೆಯಾಟದಿಂದ 15.4 ಓವರ್‌ಗಳಲ್ಲಿ 3 ವಿಕೆಟ್‌ಗೆ 146 ರನ್‌ಗಳಿಸಿ 26 ಎಸೆತ ಇರುವಂತೆಯೇ ಗೆದ್ದು ಬೀಗಿತು.

ಚೇಸಿಂಗ್‌ಗೆ ರೋಹಿತ್ ಬಲ:  ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ರೋಹಿತ್ ಮುಂಬೈ ಚೇಸಿಂಗ್‌ಗೆ ಬಲ ತುಂಬಿದರು. ಜತೆಗೆ 2016ರ ಬಳಿಕ ಐಪಿಎಲ್‌ನಲ್ಲಿ ಸತತ 2 ಅರ್ಧಶತಕ ಸಿಡಿಸಿ ಾರ್ಮ್‌ಗೆ ಮರಳಿದರು. ರ‌್ಯಾನ್ ರಿಕೆಲ್‌ಟನ್ (11) ಬೇಗನೆ ನಿರ್ಗಮಿಸಿದರು. ಆಗ ರೋಹಿತ್ ಜತೆಗೂಡಿದ ವಿಲ್ ಜಾಕ್ಸ್ (22) ಮುಂಬೈ ಹಾದಿ ಸುಲಭಗೊಳಿಸಿದರು. ಇವರಿಬ್ಬರು 2ನೇ ವಿಕೆಟ್‌ಗೆ 46 ಎಸೆತಗಳಲ್ಲಿ 64 ರನ್‌ಗಳಿಸಿದರು. ನಂತರ ರೋಹಿತ್-ಸೂರ್ಯ 32 ಎಸೆತಗಳಲ್ಲಿ 53 ರನ್ ಕಸಿದು, ಮುಂಬೈ ಗೆಲುವು ಖಾತ್ರಿಪಡಿಸಿದರು. ರೋಹಿತ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, 14 ರನ್ ಅವಶ್ಯವಿದ್ದಾಗ ಔಟಾದರು. ಕೊನೆಯಲ್ಲಿ ಸೂರ್ಯ- ತಿಲಕ್ ವರ್ಮ (2*) ಮುರಿಯದ 4ನೇ ವಿಕೆಟ್‌ಗೆ 6 ಎಸೆತಗಳಲ್ಲಿ 16 ರನ್‌ಗಳಿಸಿ ದಡ ಸೇರಿಸಿದರು.

1. ಜಸ್‌ಪ್ರೀತ್ ಬುಮ್ರಾ (170) ಮುಂಬೈ ಇಂಡಿಯನ್ಸ್ ಪರ ಗರಿಷ್ಠ ವಿಕೆಟ್ ಪಡೆದ ಲಸಿತ್ ಮಾಲಿಂಗ ದಾಖಲೆ ಸರಿಗಟ್ಟಿದರು.

2. ರೋಹಿತ್ ಶರ್ಮ ಟಿ20 ಕ್ರಿಕೆಟ್‌ನಲ್ಲಿ 12 ಸಾವಿರ ರನ್ ಪೂರೈಸಿದ 2ನೇ ಭಾರತೀಯ ಹಾಗೂ ಒಟ್ಟಾರೆ 8ನೇ ಬ್ಯಾಟರ್. ವಿರಾಟ್ ಕೊಹ್ಲಿ (13,208) ಮೊದಲಿಗ. ಕ್ರಿಸ್ ಗೇಲ್ (14,562) ಅಗ್ರಸ್ಥಾನದಲ್ಲಿದ್ದಾರೆ.

5. ಜಸ್‌ಪ್ರೀತ್ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರೈಸಿದ 5ನೇ ಭಾರತೀಯ ಬೌಲರ್. ಯಜುವೇಂದ್ರ ಚಾಹಲ್ (373), ಪೀಯುಷ್ ಚಾವ್ಲಾ (319), ಭುವನೇಶ್ವರ್ ಕುಮಾರ್ (318), ಆರ್.ಆಶ್ವಿನ್ (315) ಹಿಂದಿನ ಸಾಧಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net