

ಅಬುಧಾಬಿ: ಪ್ಲೇ-ಆಫ್ ಸನಿಹದಲ್ಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್-13ರ ಪಂದ್ಯದಲ್ಲಿ ಎದುರಾಗಲಿವೆ. ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಪಂದ್ಯ ಪ್ಲೇ-ಆಫ್ ಖಾತ್ರಿ ದೃಷ್ಟಿಯಿಂದ ಎರಡು ತಂಡಗಳಿಗೂ ಮಹತ್ವದಾಗಿದೆ. ಆದರೆ, ಎರಡು ತಂಡಗಳಿಗೂ ಗಾಯದ ಸಮಸ್ಯೆ ಎದುರಾಗಲಿದೆ. ಮುಂಬೈ ತಂಡದ ನಾಯಕ ರೋಹಿತ್ ಶರ್ಮ ಸತತ 3ನೇ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆಗಳಿದ್ದು, ಆರ್‌ಸಿಬಿ ತಂಡದ ವೇಗಿ ನವದೀಪ್ ಸೈನಿ ಕೂಡ ಪಂದ್ಯದಲ್ಲಿ ಆಡುವುದು ಅನುಮಾನ. ಉಭಯ ತಂಡಗಳು ಹಿಂದಿನ ಪಂದ್ಯದಲ್ಲಿ ಸೋಲಿಗೆ ರುಚಿ ಕಂಡಿದ್ದು ಗೆಲುವಿನ ಹಳಿಗೆ ಏರುವ ವಿಶ್ವಾಸದಲ್ಲಿವೆ.
ಮುಂಬೈ ಇಂಡಿಯನ್ಸ್‌ಗೆ ಸೇಡಿನ ತವಕ: ಹಿಂದಿನ ಮುಖಾಮುಖಿಯಲ್ಲಿ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಶರಣಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಸೇಡು ತೀರಿಸಿಕೊಳ್ಳುವುದರೊಂದಿಗೆ ಮೊದಲ ತಂಡವಾಗಿ ಪ್ಲೇ-ಆಫ್ ಹಂತಕ್ಕೆ ಲಗ್ಗೆ ಇಡುವ ಲೆಕ್ಕಾಚಾರದಲ್ಲಿದೆ. ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 8 ವಿಕೆಟ್‌ಗಳಿಂದ ಸೋತಿದ್ದ ಮುಂಬೈ ತಂಡಕ್ಕೆ ನಾಯಕ ರೋಹಿತ್ ಶರ್ಮ ಅನುಪಸ್ಥಿತಿ ಕಾಡಲಿದೆ. ರೋಹಿತ್ ಶರ್ಮ ಫಿಟ್ನೆಸ್ ಕುರಿತು ಮುಂಬೈ ಇಂಡಿಯನ್ಸ್ ಅಥವಾ ಬಿಸಿಸಿಐ ಅಧಿಕೃತ ಮಾಹಿತಿ ನೀಡಿಲ್ಲ. ರೋಹಿತ್ ಶರ್ಮ ಹೊರಗುಳಿದರೆ ಇಶಾನ್ ಕಿಶನ್ ಹಾಗೂ ಸೌರಭ್ ತಿವಾರಿ ಮತ್ತೊಮ್ಮೆ ಅವಕಾಶ ಪಡೆಯಲಿದ್ದಾರೆ. ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್ ಅಗ್ರಕ್ರಮಾಂಕದಲ್ಲಿ ಸಿಡಿಯಬೇಕಿದೆ. ಪಾಂಡ್ಯ ಸಹೋದರರು ಹಾಗೂ ಹಂಗಾಮಿ ನಾಯಕ ಕೈರಾನ್ ಪೊಲ್ಲಾರ್ಡ್ ಆದರೆಯಾಗಿದ್ದಾರೆ. ಮುಂಬೈ ಬೌಲಿಂಗ್ ವಿಭಾಗವನ್ನು ರಾಜಸ್ಥಾನದ ಬೆನ್ ಸ್ಟೋಕ್ಸ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಧೂಳೀಪಟ ಮಾಡಿತ್ತು. ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ ಜೋಡಿ ಮತ್ತೆ ಕಂಡುಕೊಳ್ಳಬೇಕಿದೆ. ಈ ಜೋಡಿ ಇದುವರೆಗೂ 33 ವಿಕೆಟ್ ಹಂಚಿಕೊಂಡಿದೆ.
ಗೆಲುವಿನ ವಿಶ್ವಾಸದಲ್ಲಿ ಆರ್‌ಸಿಬಿ: ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶರಣಾಗಿದ್ದ ಆರ್‌ಸಿಬಿ ಪುಟಿದೇಳಬೇಕಿದೆ. ಹಿಂದಿನ ಪಂದ್ಯದಲ್ಲಿ ಸರ್ವಾಂಗೀಣ ವೈಫಲ್ಯವೇ ತಂಡದ ಸೋಲಿಗೆ ಪ್ರಮುಖ ಕಾರಣ. ನವದೀಪ್ ಸೈನಿ ಲಭ್ಯತೆ ಇನ್ನು ಖಚಿತಗೊಂಡಿಲ್ಲ. ಆರನ್ ಫಿಂಚ್ ಹಾಗೂ ದೇವದತ್ ಪಡಿಕಲ್ ಜೋಡಿ ಆರಂಭಿಕ ಹಂತದಲ್ಲಿ ಮಿಂಚಬೇಕಿದೆ. ಉಳಿದಂತೆ, ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಕ್ರಿಸ್ ಮಾರಿಸ್ ಒಳಗೊಂಡ ಮಧ್ಯಮ ಕ್ರಮಾಂಕ ಯಶಕಂಡಿದೆ. ಆದರೆ, ಸಿಎಸ್‌ಕೆ ಎದುರು ದಿಢೀರ್ ಕುಸಿತ ಕಂಡಿತ್ತು. ಸೈನಿ ಅಲಭ್ಯರಾದರೆ ಕ್ರಿಸ್ ಮಾರಿಸ್, ಮೊಹಮದ್ ಸಿರಾಜ್ ಹಾಗೂ ಇಸುರು ಉದಾನ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ.
* ಟೀಮ್ ನ್ಯೂಸ್:
ಮುಂಬೈ ಇಂಡಿಯನ್ಸ್:
ನಾಯಕ ರೋಹಿತ್ ಶರ್ಮ ಅಲಭ್ಯರಾದರೆ ಕೈರಾನ್ ಪೊಲ್ಲಾರ್ಡ್ ಮತ್ತೆ ತಂಡ ಮುನ್ನಡೆಸಲಿದ್ದಾರೆ. ಒಂದು ವೇಳೆ ರೋಹಿತ್ ಶರ್ಮ ಕಣಕ್ಕಿಳಿದರೆ, ಇಶಾನ್ ಕಿಶನ್ ಅಥವಾ ಸೌರಭ್ ತಿವಾರಿ ಇಬ್ಬರಲ್ಲಿ ಒಬ್ಬರು ಹೊರಗುಳಿಯಲಿದ್ದಾರೆ. ವೇಗಿ ಜೇಮ್ಸ್ ಪ್ಯಾಟಿನ್‌ಸನ್ ಅಥವಾ ನಥಾನ್ ಕೌಲ್ಟರ್ ನಿಲ್ ಇಬ್ಬರು ಒಬ್ಬರು ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಭಾವ್ಯ ತಂಡ: ಇಶಾನ್ ಕಿಶನ್, ಕ್ವಿಂಟನ್ ಡಿಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಕೈರಾನ್ ಪೊಲ್ಲಾರ್ಡ್ (ನಾಯಕ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್‌ಸನ್/ನಥಾನ್ ಕೌಲ್ಟರ್ ನಿಲ್, ರಾಹುಲ್ ಚಹರ್, ಜಸ್‌ಪ್ರೀತ್ ಬುಮ್ರಾ.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 8 ವಿಕೆಟ್ ಸೋಲು
ಆರ್‌ಸಿಬಿ:
ನವದೀಪ್ ಸೈನಿ ಆಯ್ಕೆಗೆ ಅಲಭ್ಯರಾದರೆ ಇಸುರು ಉದಾನ ತಂಡಕ್ಕೆ ವಾಪಸಾಗಬಹುದು. ಉದಾನ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ ಮೊಯಿನ್ ಅಲಿ ತಂಡದಿಂದ ಹೊರಗುಳಿಯಲಿದ್ದಾರೆ. ಆಗ ಮೊಯಿನ್ ಅಲಿ ಜಾಗಕ್ಕೆ ಶಿವಂ ದುಬೆ ಆಯ್ಕೆ ಪರಿಗಣಿಸಬಹುದು.
ಸಂಭಾವ್ಯ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿಡಿ ವಿಲಿಯರ್ಸ್ (ವಿಕೀ), ಕ್ರಿಸ್ ಮಾರಿಸ್, ಗುರುಕೀರತ್ ಮಾನ್ ಸಿಂಗ್, ವಾಷಿಂಗ್ಟನ್ ಸುಂದರ್, ಮೊಯಿನ್ ಅಲಿ/ಶಿವಂ ದುಬೆ, ನವದೀಪ್ ಸೈನಿ/ಇಸುರು ಉದಾನ, ಮೊಹಮದ್ ಸಿರಾಜ್, ಯಜುವೇಂದ್ರ ಚಾಹಲ್.
ಕಳೆದ ಪಂದ್ಯ: ಸಿಎಸ್‌ಕೆ ವಿರುದ್ಧ 8 ವಿಕೆಟ್ ಸೋಲು
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 26, ಮುಂಬೈ: 16, ಆರ್‌ಸಿಬಿ: 10