ಇಂದು ಮುಂಬೈ ಇಂಡಿಯನ್ಸ್ - ಕೆಕೆಆರ್ ಮುಖಾಮುಖಿ

KKR AND MUMBAI FOR WEB
Published on

ಚೆನ್ನೈ: ಸತತ 9ನೇ ವರ್ಷ ಸೋಲಿನೊಂದಿಗೆ ಲೀಗ್ ಅಭಿಯಾನ ಆರಂಭಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ ತನ್ನ 2ನೇ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್‌ ಎದುರಿನ ಸವಾಲಿಗೆ ಸಜ್ಜಾಗಿದೆ. ಉದ್ಘಾಟನಾ ಪಂದ್ಯದಲ್ಲಿ ರೋಹಿತ್ ಬಳಗ ಆರ್‌ಸಿಬಿಗೆ ಶರಣಾದರೆ, ಕೆಕೆಆರ್ ತಂಡ 10 ರನ್‌ಗಳಿಂದ ಸನ್‌ರೈಸರ್ಸ್‌ ತಂಡವನ್ನು ಸೋಲಿಸಿ ಲೀಗ್‌ನಲ್ಲಿ ಶುಭಾರಂಭ ಕಂಡಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಪ್ಲೇಆಫ್ ಹಂತಕ್ಕೇರುವ ವಿಫಲವಾಗಿರುವ ಕೆಕೆಆರ್ ತಂಡ ಸತತ ಎರಡನೇ ಗೆಲುವಿನ ಕನಸಿನಲ್ಲಿದೆ. ಕಳೆದ ಆವೃತ್ತಿಯಲ್ಲೂ ಎರಡೂ ಮುಖಾಮುಖಿಯಲ್ಲೂ ಮುಂಬೈ ಇಂಡಿಯನ್ಸ್‌ಗೆ ಶರಣಾಗಿದ್ದ ಕೆಕೆಆರ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಲೀಗ್ ಇತಿಹಾಸದಲ್ಲಿ ಕೆಕೆಆರ್ ವಿರುದ್ಧ ಪ್ರಭುತ್ವ ಸಾಧಿಸಿರುವ ಮುಂಬೈ ಇಂಡಿಯನ್ಸ್ ಗೆಲುವಿನ ಹಳಿಗೇರುವ ತವಕದಲ್ಲಿದೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಕದನ ಕುತೂಹಲ ಮೂಡಿಸಿದೆ.

ಆತ್ಮವಿಶ್ವಾಸದಲ್ಲಿ ಮಾರ್ಗನ್ ಪಡೆ

ಆರಂಭದಲ್ಲಿ ಶುಭಮಾನ್ ಗಿಲ್ ವೈಫಲ್ಯದ ನಡುವೆಯೂ ಸನ್‌ರೈಸರ್ಸ್‌ ಎದುರು ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಅಬ್ಬರದ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಅನುಭವಿಸಿದರೂ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್‌ನಿಂದ ತಂಡಕ್ಕೆ ನೆರವಾಗಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್, ನಾಯಕ ಇವೊಯಿನ್ ಮಾರ್ಗನ್ ಮೊದಲ ಹಣಾಹಣಿಯಲ್ಲೇ ವೈಫಲ್ಯ ಅನುಭವಿಸಿದರೂ ದಿನೇಶ್ ಕಾರ್ತಿಕ್ ಕ್ರೀಸ್‌ನಲ್ಲಿ ನಿಂತಷ್ಟು ಹೊತ್ತು ರನ್‌ಗತಿ ಏರಿಸಿದ್ದರು. ರಾಣಾ-ತ್ರಿಪಾಠಿ ಜೋಡಿ ಕಟ್ಟಿದ ಜತೆಯಾಟದ ಫಲವಾಗಿ ಕೆಕೆಆರ್ ಸನ್‌ರೈಸರ್ಸ್‌ಗೆ ಬೃಹತ್ ಸವಾಲು ನೀಡಲು ನೆರವಾಗಿತ್ತು. ಇದೀಗ ಅದೇ ಲಯ ಕಾಯ್ದುಕೊಳ್ಳುವ ಯತ್ನದಲ್ಲಿದೆ. ಸನ್‌ರೈಸರ್ಸ್‌ ಎದುರಿನ ಗೆಲುವಿನಲ್ಲಿ ತಂಡದ ಬೌಲರ್‌ಗಳ ಶ್ರಮವೂ ಸಾಕಷ್ಟಿದೆ. ಕನ್ನಡಿಗ ಪ್ರಸಿದ್ಧ ಕೃಷ್ಣ, ಪ್ಯಾಟ್ ಕಮ್ಮಿನ್ಸ್, ಶಕೀಬ್ ಅಲ್ ಹಸನ್ ಕಠಿಣ ದಾಳಿ ನಡೆಸಿದ್ದರು. ಲೆಕ್ಕಾಚಾರದಲ್ಲಿ ಮುಂಬೈ ಎದುರು ಭಾರಿ ಹಿನ್ನಡೆಯಲ್ಲಿರುವ ಕೆಕೆಆರ್ ತಂಡ ಮತ್ತೊಂದು ಗೆಲುವಿನ ಹಂಬಲದಲ್ಲಿದೆ.

 ಮುಂಬೈ ಇಂಡಿಯನ್ಸ್‌ಗೆ ಗೆಲುವಿನ ತವಕ

ಲೀಗ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋಲಿನ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿರುವ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಹಳಿಗೇರುವ ತವಕದಲ್ಲಿದೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ಎದುರು ಎರಡೂ ಮುಖಾಮುಖಿಯಲ್ಲೂ ಮುಂಬೈ ಇಂಡಿಯನ್ಸ್ ತಂಡ ಜಯ ದಾಖಲಿಸಿತ್ತು. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಕ್ವಾರಂಟೈನ್‌ನಲ್ಲೇ ಮುಂದುವರಿದರೆ ಕ್ರಿಸ್ ಲ್ಯಾನ್ ಮತ್ತೊಂದು ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮ ಜತೆ ಲ್ಯಾನ್ ಮತ್ತೊಮ್ಮೆ ಇನಿಂಗ್ಸ್ ಆರಂಭಿಸಲಿದ್ದಾರೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಒಳಗೊಂಡ ಮಧ್ಯಮ ಕ್ರಮಾಂಕ ಆರ್‌ಸಿಬಿ ಎದುರು ದಿಢೀರ್ ಕುಸಿತ ಕಂಡಿತ್ತು. ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ವೇಗದ ವಿಭಾಗದ ಸಾರಥ್ಯದ ವಹಿಸಿದರೆ, ದಕ್ಷಿಣ ಆಫ್ರಿಕಾದ ಮಾರ್ಕೋ ಜಾನ್ಸೆನ್ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ್ದರು.

ಟೀಮ್ ನ್ಯೂಸ್

ಕೆಕೆಆರ್:

ಮೊದಲ ಪಂದ್ಯದಲ್ಲಿ ಜಯ ದಾಖಲಿಸಿರುವ ತಂಡವೇ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಇದರಿಂದ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಮುಂಬೈ :

ಹಾರ್ದಿಕ್ ಪಾಂಡ್ಯಗೆ ಕೇವಲ ಬ್ಯಾಟ್ಸ್‌ಮನ್ ಆಗಿಯೇ ಮುಂದುವರಿಯಲಿದ್ದಾರೆ. ಕ್ವಾರಂಟೈನ್ ಅವಧಿ ಮುಕ್ತಾಯಗೊಂಡರೆ ಕ್ವಿಂಟನ್ ಡಿಕಾಕ್, ಕ್ರಿಸ್ ಲ್ಯಾನ್ ಬದಲಿಗೆ ಕಣಕ್ಕಿಳಿಯಲಿದ್ದಾರೆ.

ಮುಖಾಮುಖಿ: 27, ಮುಂಬೈ ಇಂಡಿಯನ್ಸ್: 21, ಕೆಕೆಆರ್: 6

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಆರಂಭ: ರಾತ್ರಿ: 7.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net