ಡೆಲ್ಲಿ ಮಣಿಸಿ ಪ್ರಶಸ್ತಿ ಸುತ್ತಿಗೇರಿದ ಮುಂಬೈ, 6ನೇ ಬಾರಿಗೆ ಫೈನಲ್‌ಗೇರಿದ ರೋಹಿತ್ ಶರ್ಮ ಪಡೆ

mumbai and delhi match for web
Published on

ದುಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-13ರಲ್ಲಿ ಮೊದಲ ತಂಡವಾಗಿ ಫೈನಲ್‌ಗೇರಿದೆ. ಇಶಾನ್ ಕಿಶನ್ (55*ರನ್, 30 ಎಸೆತ, 4 ಬೌಂಡರಿ, 3 ಸಿಕ್ಸರ್) ಮತ್ತು ಸೂರ್ಯಕುಮಾರ್ ಯಾದವ್ (51 ರನ್, 38 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಹಾಗೂ ವೇಗಿ ಜಸ್‌ಪ್ರೀತ್ ಬುಮ್ರಾ (14ಕ್ಕೆ 4) ಹಾಗೂ ಟ್ರೆಂಟ್ ಬೌಲ್ಟ್ (9ಕ್ಕೆ 2) ಜೋಡಿಯ ಮಾರಕ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 57 ರನ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೇರಿತು.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ (29ಕ್ಕೆ 3) ಮಾರಕ ದಾಳಿ ನಡುವೆಯೂ 5 ವಿಕೆಟ್‌ಗೆ 200 ರನ್ ಕಲೆಹಾಕಿತು. ಪ್ರತಿಯಾಗಿ ಡೆಲ್ಲಿ ತಂಡ 8 ವಿಕೆಟ್‌ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿಗೆ ಬೌಲ್ಟ್ ‘ಬುಮ್ರಾಘಾತ’: ಬೃಹತ್ ಮೊತ್ತ ಬೆನ್ನಟ್ಟಲು ಹೊರಟ ಡೆಲ್ಲಿ ತಂಡಕ್ಕೆ ಟ್ರೆಂಟ್ ಬೌಲ್ಟ್ ಹಾಗೂ ಜಸ್‌ಪ್ರೀತ್ ಬುಮ್ರಾ ಜೋಡಿ ಆರಂಭಿಕ ಆಘಾತ ನೀಡಿತು. ಪೃಥ್ವಿ ಷಾ ಹಾಗೂ ಅಜಿಂಕ್ಯ ರಹಾನೆಗೆ ಟ್ರೆಂಟ್ ಬೌಲ್ಟ್ ಮೊದಲ ಓವರ್‌ನಲ್ಲೇ ಡಗೌಟ್ ದಾರಿ ತೋರಿಸಿದರೆ, 2ನೇ ಓವರನಲ್ಲಿ ಶಿಖರ್ ಧವನ್(0) ಬುಮ್ರಾ ಎಸೆತದಲ್ಲಿ ಬೌಲ್ಡ್ ಆದರು. ಇದರಿಂದ, ಖಾತೆ ತೆರೆಯುವ ಮುನ್ನವೇ 3 ವಿಕೆಟ್ ಕಳೆದುಕೊಂಡ ಡೆಲ್ಲಿ ಆರಂಭಿಕ 8 ಎಸೆತಗಳಲ್ಲೇ ಸೋಲು ಬಹುತೇಕ ಖಚಿತಪಡಿಸಿಕೊಂಡಿತು. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ (12) ಹಾಗೂ ರಿಷಭ್ ಪಂತ್ (3) ಕೂಡ ಕನಿಷ್ಠ ಪ್ರತಿಹೋರಾಟ ನೀಡಲು ವಿಫಲರಾದರು. ಮಾರ್ಕಸ್ ಸ್ಟೋಯಿನಿಸ್ (65 ರನ್, 46 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಅಕ್ಷರ್ ಪಟೇಲ್ (42ರನ್, 33 ಎಸೆತ, 2 ಬೌಂಡರಿ, 3 ಸಿಕ್ಸರ್) ಜೋಡಿ 6ನೇ ವಿಕೆಟ್‌ಗೆ 71 ರನ್ ಜತೆಯಾಟವಾಡಿ ಅಬ್ಬರಿಸಿದರೂ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net