

ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್-14ರಲ್ಲಿ ಎದುರಾಗಲಿವೆ. ಸತತ ಐದು ಗೆಲುವಿನಿಂದ ಬೀಗುತ್ತಿರುವ ಸಿಎಸ್‌ಕೆ ತಂಡ, ಇದೀಗ 6ನೇ ಗೆಲುವಿನ ವಿಶ್ವಾಸದಲ್ಲಿದೆ. ಲೀಗ್‌ನಲ್ಲಿ ಇದುವರೆಗೂ ಸೋಲು, ಗೆಲುವನ್ನು ಸಮಾನವಾಗಿ ಕಂಡಿರುವ ಮುಂಬೈ ತಂಡ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಲ್ಯದಿಂದಾಗಿ ಒತ್ತಡದಲ್ಲಿ ಸಿಲುಕಿದೆ. ಲೀಗ್ ಇತಿಹಾಸದಲ್ಲಿ ಮುಂಬೈ ತಂಡವೇ ಮೇಲುಗೈ ಸಾಧಿಸಿದರೂ ಉಭಯ ತಂಡಗಳ ಹಣಾಹಣಿ ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಎರಡೂ ತಂಡಗಳು ತಮ್ಮ ಹಿಂದಿನ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರಿದ್ದು, ಇದೇ ಲಯ ಕಾಯ್ದುಕೊಳ್ಳುವ ತವಕದಲ್ಲಿವೆ. ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ ರಾಯಲ್ಸ್ ಎದುರು ಗೆದ್ದರೆ, ಸಿಎಸ್‌ಕೆ ಸನ್‌ರೈಸರ್ಸ್ ತಂಡವನ್ನು ಸೋಲಿಸಿತ್ತು.
* ಮುಂಬೈ ಕೈಕೊಡುತ್ತಿರುವ ಮಧ್ಯಮ ಕ್ರಮಾಂಕ
ಬಲಿಷ್ಠ ಬೌಲಿಂಗ್ ಪಡೆ, ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಕೊಡುತ್ತಿದ್ದಾರೆ. ಸತತ ವೈಲ್ಯ ಅನುಭವಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಕಳೆದ ಪಂದ್ಯದಲ್ಲಿ ಾರ್ಮ್‌ಗೆ ಮರಳಿರುವುದು ಸಮಧಾನಕರ ಸಂಗತಿ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಕೆಲಕಾಲ ಬಿರುಸಿನ ಬ್ಯಾಟಿಂಗ್ ಮೂಲಕ ಲಯ ಕಂಡುಕೊಳ್ಳಲು ಯತ್ನಿಸಿದರು. ಇದು ತಂಡದ ಪಾಲಿಗೆ ಸಮಾಧಾನಕರ ವಿಷಯವಾದರೂ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಫಾರ್ಮ್‌ಗೆ ಮರಳಬೇಕಿದೆ. ಟ್ರೆಂಟ್ ಬೌಲ್ಟ್, ಡೆತ್ ಓವರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ, ರಾಹುಲ್ ಚಹರ್ ಒಳಗೊಂಡ ಬೌಲಿಂಗ್ ಪಡೆ ಇದುವರೆಗೂ ಗಮನಸೆಳೆದಿದೆ.
* ಆತ್ಮವಿಶ್ವಾಸದಲ್ಲಿ ಸಿಎಸ್‌ಕೆ
ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಮುಂಬೈ ತಂಡಕ್ಕೆ ಶರಣಾಗಿರುವ ಸಿಎಸ್‌ಕೆ, ಪ್ರಸಕ್ತ ಲೀಗ್‌ನಲ್ಲಿ ಇದುವರೆಗೂ ಗೆಲುವಿನ ನಾಗಾಲೋಟದಲ್ಲಿ ಮುಂದುವರಿದಿದೆ. ರವೀಂದ್ರ ಜಡೇಜಾ, ಬ್ಯಾಟಿಂಗ್, ಬೌಲಿಂಗ್ ಅಲ್ಲದೆ, ಫೀಲ್ಡಿಂಗ್ ಹೀಗೆ ತ್ರಿಪಾತ್ರದ ಮೂಲಕ ತಂಡಕ್ಕೆ ದೊಡ್ಡ ಕಾಣಿಕೆಯಾಗಿದ್ದಾರೆ. ಮೊದಲ ಪಂದ್ಯದಲ್ಲಿ ಸೋಲುಭವಿಸಿದ ಬಳಿಕ ಸತತ 5 ಗೆಲುವು ಕಂಡಿರುವ ಸಿಎಸ್‌ಕೆ, ಸರ್ವಾಂಗೀಣ ವಿಭಾಗದಲ್ಲೂ ಬಲಿಷ್ಠವಾಗಿದೆ. ಕಡೇ ಮೂರು ಪಂದ್ಯಗಳಲ್ಲಿ ಡು ಪ್ಲೆಸಿಸ್, ಋತುರಾಜ್ ಗಾಯಕ್ವಾಡ್ ಜೋಡಿ ಉತ್ತಮ ಆರಂಭ ನೀಡುತ್ತಿದ್ದರೆ, ಮೊಯಿನ್ ಅಲಿ, ಸುರೇಶ್ ರೈನಾ ತಕ್ಕಮಟ್ಟಿಗೆ ಬ್ಯಾಟಿಂಗ್‌ನಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಅನುಭವಿ ಅಂಬಟಿ ರಾಯುಡು ಇದುವರೆಗೂ ದೊಡ್ಡ ಮೊತ್ತ ಪೇರಿಸಿಲ್ಲ. ದೀಪಕ್ ಚಹರ್ (8 ವಿಕೆಟ್),ಸ್ಯಾಮ್ ಕರ‌್ರನ್ (6 ವಿಕೆಟ್) ಎದುರಾಳಿ ತಂಡಕ್ಕೆ ಕಡಿವಾಣ ಹಾಕುತ್ತಿದ್ದರೆ, ಶಾರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದಾರೆ. ಜಡೇಜಾ, ಮೊಯಿನ್ ಅಲಿ ಸ್ಪಿನ್ ವಿಭಾಗದ ಶಕ್ತಿಯಾಗಿದ್ದಾರೆ.
ಟೀಮ್ ನ್ಯೂಸ್:
ಮುಂಬೈ ಇಂಡಿಯನ್ಸ್:
ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ಬಳಿಕ ಗೆಲುವಿನ ಲಯ ಕಂಡುಕೊಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ. ಸತತವಾಗಿ ವಿಫಲವಾಗಿದ್ದ ಕ್ವಿಂಟನ್ ಡಿ ಕಾಕ್ ಕಳೆದ ಪಂದ್ಯದಲ್ಲಿ ಫಾರ್ಮ್‌ಗೆ ಕಂಡುಕೊಂಡಿದ್ದಾರೆ. ಇದರಿಂದ ಕ್ರಿಸ್ ಲ್ಯಾನ್‌ಗೆ ಅವಕಾಶ ಸಿಗುವುದು ಕಡಿಮೆ.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್ ಜಯ
ಸಿಎಸ್‌ಕೆ:
ಕಳೆದ ಪಂದ್ಯದಲ್ಲಿ ಲುಂಗಿ ಎನ್‌ಗಿಡಿ ಹಾಗೂ ಮೊಯಿನ್ ಅಲಿ ಜೋಡಿಗೆ ತಂಡ ಮಣೆಹಾಕಿತ್ತು. ಇದೇ ಜೋಡಿಯನ್ನು ಉಳಿಸಿಕೊಂಡರೆ ಡ್ವೇನ್ ಬ್ರಾವೊ ಹಾಗೂ ಇಮ್ರಾನ್ ತಾಹಿರ್ ಹೊರಗುಳಿಯಲಿದ್ದಾರೆ. ಸತತವಾಗಿ ವೈಲ್ಯ ಅನುಭವಿಸುತ್ತಿರುವ ಅಂಬಟಿ ರಾಯುಡುರನ್ನು ಬದಲಿಸಿದರೆ ಕನ್ನಡಿಗ ರಾಬಿನ್ ಉತ್ತಪ್ಪಗೆ ಮಣೆ ಹಾಕಬಹುದು.
ಕಳೆದ ಪಂದ್ಯ: ಸನ್‌ರೈಸರ್ಸ್ ಎದುರು 7 ವಿಕೆಟ್ ಜಯ
ಮುಖಾಮುಖಿ: 30, ಮುಂಬೈ ಇಂಡಿಯನ್ಸ್: 18, ಸಿಎಸ್‌ಕೆ : 12
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್