

ಶಾರ್ಜಾ: ಉದ್ಘಾಟನಾ ಪಂದ್ಯದಲ್ಲಿ ಜಯ ದಾಖಲಿಸಿದ ಬಳಿಕ ಸತತ ವೈಫಲ್ಯದಿಂದ ನಿರ್ಗಮನ ಬಾಗಿಲಲ್ಲಿ ನಿಂತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಅದೇ ಪಂದ್ಯದಲ್ಲಿ ಸೋಲು ಕಂಡ ಬಳಿಕ ಗೆಲುವಿನ ಹಳಿ ಏರಿ ಪ್ಲೇಆ್ ಸನಿಹದಲ್ಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-13ರಲ್ಲಿ ಶುಕ್ರವಾರ ಮರುಮುಖಾಮುಖಿ ಆಗಲಿವೆ.
ಶಾರ್ಜಾ ಮೈದಾನದಲ್ಲಿ ನಡೆಯಲಿರುವ ಪಂದ್ಯ ಸಿಎಸ್‌ಕೆ ಪಾಲಿಗೆ ಉಳಿದಿರುವ ಅಲ್ಪಸ್ವಲ್ಪ ಆಸೆಯನ್ನು ಜೀವಂತ ಉಳಿಸುವ ನಿಟ್ಟಿನಲ್ಲಿ ಪ್ರಮುಖವಾಗಿದ್ದರೆ, ಮುಂಬೈ ತಂಡಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ದೃಷ್ಟಿಯಿಂದ ಮಹತ್ವದ್ದಾಗಿದೆ. ಟೂರ್ನಿ ಇತಿಹಾಸದಲ್ಲಿಯೇ ಮೊದಲ ಬಾರಿ ಲೀಗ್ ಹಂತದಲ್ಲಿಯೇ ಹೊರಬೀಳುವ ಅವಮಾನ ತಪ್ಪಿಸಿಕೊಳ್ಳಬೇಕಾದರೆ ಎಂಎಸ್ ಧೋನಿ ಪಡೆ ಉಳಿದ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಜತೆಗೆ ಇತರ ಪಂದ್ಯಗಳ ಫಲಿತಾಂಶವೂ ಪೂರಕವಾಗಿ ಬಂದರಷ್ಟೇ ಸಿಎಸ್‌ಕೆ ಪ್ಲೇಆಫ್ ಹಂತಕ್ಕೇರುವ ಅವಕಾಶ ಹೊಂದಿದೆ. ಮತ್ತೊಂದೆಡೆ, ರೋಹಿತ್ ಶರ್ಮ ಬಳಗ ಟೂರ್ನಿಯ ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
* ಸಿಎಸ್‌ಕೆ ತಂಡದಲ್ಲಿ ಯುವಕರಿಗೆ ಆದ್ಯತೆ
ಮಾನಸಿಕವಾಗಿ ಟೂರ್ನಿಯಿಂದ ಹೊರಬೀಳಲು ಸಿದ್ಧಗೊಂಡಿರುವ ಸಿಎಸ್‌ಕೆ ಕಡೇ ಪಂದ್ಯಗಳಲ್ಲಿ ಅನುಭವಿ ಆಟಗಾರರ ಬದಲಿಗೆ ಕೆಲ ಯುವ ಆಟಗಾರರಿಗೆ ಹೆಚ್ಚಿನ ಹೊಣೆ ನೀಡಲು ಸಜ್ಜಾಗಿದೆ. ಡ್ವೇನ್ ಬ್ರಾವೊ ಈಗಾಗಲೇ ಲೀಗ್‌ನಿಂದ ಹೊರಬಿದ್ದಿದ್ದಾರೆ. ಸರ್ವಾಂಗೀಣ ವೈಫಲ್ಯದಿಂದ ಬಳಲಿರುವ ಸಿಎಸ್‌ಕೆ ಲೀಗ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನಿರ್ವಹಣೆಗೆ ಸಾಕ್ಷಿಯಾಗಿದೆ. ಲೀಗ್ ಆರಂಭಕ್ಕೂ ಮುನ್ನವೇ ಅನುಭವಿಗಳಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಅಲಭ್ಯತೆಯಿಂದಾಗಿ ಹಿನ್ನಡೆ ಅನುಭವಿಸಿದ್ದ ಸಿಎಸ್‌ಕೆ, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಎದುರು ಅಬ್ಬರಿಸಿದ್ದು ಬಿಟ್ಟರೆ, ಲೀಗ್‌ನಲ್ಲಿ ಹಿನ್ನಡೆಯೇ ಜಾಸ್ತಿಯಾಗಿದೆ. ಇದೀಗ ಯುವಕರಿಗೆ ಮಣೆ ಹಾಕಲು ನಿರ್ಧರಿಸಿದ್ದು, ಅಂತಿಮ ಹಂತದಲ್ಲಿ ಧೋನಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹನ್ನೊಂದರ ಬಳಗದ ಆಯ್ಕೆ ನಡೆಯಲಿದೆ.
* ಅಗ್ರಸ್ಥಾನದ ಮೇಲೆ ಮುಂಬೈ ಕಣ್ಣು
ಸತತ 5 ಗೆಲುವಿನ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಡಬಲ್ ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತ್ತು. ಸಿಎಸ್‌ಕೆ ಎದುರು ಜಯ ದಾಖಲಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮುಂಬೈ ಪ್ಲೇ-ಆಫ್ ಹಾದಿಯನ್ನು ಬಹುತೇಕ ಖಾತ್ರಿಪಡಿಸಿಕೊಳ್ಳಲಿದೆ. ಪಂಜಾಬ್ ಎದುರು ದುಬಾರಿಯಾಗಿದ್ದ ನಥಾನ್ ಕೌಲ್ಟರ್ ನಿಲ್ ಬದಲಿಗೆ ಜೇಮ್ಸ್ ಪ್ಯಾಟಿನ್‌ಸನ್ ತಂಡಕ್ಕೆ ವಾಪಸಾಗುವ ಸಾಧ್ಯತೆಗಳಿವೆ. ಪಾಂಡ್ಯ ಸಹೋದರರ ಜತೆಗೆ ಕೈರಾನ್ ಪೊಲ್ಲಾರ್ಡ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸಿಎಸ್‌ಕೆಗಿಂತ ಮಾನಸಿಕವಾಗಿ ಮೇಲುಗೈ ಹೊಂದಿರುವ ಮುಂಬೈ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.
ಟೀಮ್ ನ್ಯೂಸ್
ಚೆನ್ನೈ ಸೂಪರ್‌ಕಿಂಗ್ಸ್: ಯುವ ಆಟಗಾರರಿಗೆ ಮಣೆ ಹಾಕಲಾಗುವುದು ಎಂದು ರಾಯಲ್ಸ್ ಎದುರು ಸೋತ ಬಳಿಕ ಕೋಚ್ ಸ್ಟೀಫನ್ ಫ್ಲೆಮಿಂಗ್ ಹಾಗೂ ನಾಯಕ ಧೋನಿ ಈಗಾಗಲೆ ಹೇಳಿದ್ದಾರೆ. ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆ ನಿರೀಕ್ಷಿಸಬಹುದು.
ಸಂಭಾವ್ಯ ತಂಡ: ಪ್ಲೆಸಿಸ್, ಸ್ಯಾಮ್ ಕರ‌್ರನ್, ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ, ವಿಕೀ), ಆರ್.ಜಡೇಜಾ, ಎನ್.ಜಗದೀಶನ್, ದೀಪಕ್ ಚಹರ್, ಪೀಯುಷ್ ಚಾವ್ಲಾ/ಆರ್.ಸಾಯಿ ಕಿಶೋರ್, ಶಾರ್ದೂಲ್ ಠಾಕೂರ್, ಜೋಸ್ ಹ್ಯಾಸಲ್‌ವುಡ್.
ಕಳೆದ ಪಂದ್ಯ: ರಾಯಲ್ಸ್ ಎದುರು 7 ವಿಕೆಟ್ ಸೋಲು.
ಮುಂಬೈ ಇಂಡಿಯನ್ಸ್: ಲೀಗ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಎದುರು 99 ರನ್ ಸಿಡಿಸಿದ್ದ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಬಳಿಕ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರ ಬದಲಿಗೆ ಸೌರಭ್ ತಿವಾರಿ ತಂಡಕ್ಕೆ ವಾಪಸಾಗಬಹುದು. ಕಳೆದ 2 ಪಂದ್ಯಗಳಲ್ಲಿ ದುಬಾರಿಯಾಗಿರುವ ನಾಥನ್ ಕೌಲ್ಟರ್ ನಿಲ್ ಬದಲಿಗೆ ಜೇಮ್ಸ್ ಪ್ಯಾಟಿನ್‌ಸನ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್/ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ನಥನ್ ಕೌಲ್ಟರ್ ನಿಲ್/ಜೇಮ್ಸ್ ಪ್ಯಾಟಿನ್‌ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.
ಕಳೆದ ಪಂದ್ಯ: ಪಂಜಾಬ್ ಎದುರು ಡಬಲ್ ಸೂಪರ್ ಓವರ್‌ನಲ್ಲಿ ಸೋಲು.
ಪಂದ್ಯ ಆರಂಭ: ರಾತ್ರಿ: 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಮುಖಾಮುಖಿ: 29, ಮುಂಬೈ ಇಂಡಿಯನ್ಸ್: 17, ಸಿಎಸ್‌ಕೆ: 12.