ಸಿಮ್ರಾನ್, ಡಾಟಿನ್ ದುಬಾರಿ: ಆರ್‌ಸಿಬಿಗೆ ನಾಲ್ವರು ಸೇರ್ಪಡೆ, ಡೆಲ್ಲಿ ತೆಕ್ಕೆಗೆ ಕನ್ನಡತಿ ನಿಕಿ ಪ್ರಸಾದ್

New Project
Published on

ಬೆಂಗಳೂರು: ಮಹಿಳಾ ಐಪಿಎಲ್ ಎಂದೇ ಖ್ಯಾತವಾಗಿರುವ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಮೂರನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಲ್ರೌಂಡರ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿತು. ಮುಂಬೈನ ಉದಯೋನ್ಮೂಖ ಆಲ್ರೌಂಡರ್ ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ ಎನಿಸಿದರು. ಸಿಮ್ರಾನ್‌ಗೆ ಗರಿಷ್ಠ ₹1.90 ಕೋಟಿ ನೀಡಿ ಗುಜರಾತ್ ಜೈಂಟ್ಸ್ ತಂಡ ಖರೀದಿಸಿತು. ವೆಸ್ಟ್ ಇಂಡೀಸ್‌ನ ಆಲ್ರೌಂಡರ್ ಡಿಯೆಂಡ್ರಾ ಡಾಟಿನ್ ₹1.70 ಕೋಟಿ (ಗುಜರಾತ್ ಜೈಂಟ್ಸ್) ಹಾಗೂ ತಮಿಳುನಾಡಿನ ಆಲ್ರೌಂಡರ್ ಜಿ.ಕಮಲಿನಿ ₹1.60 ಕೋಟಿಗೆ (ಮುಂಬೈ ಇಂಡಿಯನ್ಸ್) ಸೇಲಾಗುವ ಮೂಲಕ ಕ್ರಮವಾಗಿ 2 ಮತ್ತು 3ನೇ ದುಬಾರಿ ಖರೀದಿ ಎನಿಸಿದರು.

2025ರ ಆವೃತ್ತಿಯ ಪೂರ್ವ ಸಿದ್ದತೆಯಾಗಿ ಉದ್ಯಾನನಗರಿಯಲ್ಲಿ ಭಾನುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ 4 ಆಟಗಾರ್ತಿಯರು ಮಾತ್ರ ಕೋಟಿಗೂ ಅಧಿಕ ಮೊತ್ತ ಪಡೆದುಕೊಂಡರು. 1.2 ಕೋಟಿ ರೂ.ಗೆ ಆರ್‌ಸಿಬಿ ಸೇರಿದ ಪ್ರೇಮಾ ರಾವತ್ ಹರಾಜಿನಲ್ಲಿ ಕೋಟಿ ಬೆಲೆ ಪಡೆದ 4ನೇ ಆಟಗಾರ್ತಿ. 5 ವಿದೇಶಿಯರ ಸಹಿತ 19 ಆಟಗಾರ್ತಿಯರ ಖರೀದಿಗೆ 5 ತಂಡಗಳು ಒಟ್ಟಾರೆ 9.05 ಕೋಟಿ ರೂ. ವ್ಯಯಿಸಿದವು.

ಡಬ್ಲ್ಯುಪಿಎಲ್ ಹರಾಜಿನ ಇತಿಹಾಸದಲ್ಲಿ ಭಾರತ ತಂಡದ ಉಪನಾಯಕಿ ಹಾಗೂ ಆರ್‌ಸಿಬಿ ನಾಯಕಿ ಸ್ಮತಿ ಮಂದನಾ ಅತ್ಯಂತ ದುಬಾರಿ ಆಟಗಾರ್ತಿ ಎನಿಸಿದ್ದು, 2022ರ ಹರಾಜಿನಲ್ಲಿ ದಾಖಲೆಯ ₹3.40 ಕೋಟಿಗೆ ಆರ್‌ಸಿಬಿ ಪಾಲಾಗಿದ್ದರು. ಗುಜರಾತ್ ಆಲ್ರೌಂಡರ್ ಆಶ್ಲೇ ಗಾರ್ಡ್‌ನರ್ ಹಾಗೂ ಮುಂಬೈ ಇಂಡಿಯನ್ಸ್‌ನ ನ್ಯಾಟ್ ಸೀವರ್ ಬ್ರಂಟ್ ತಲಾ ₹3.60 ಕೋಟಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಆರ್‌ಸಿಬಿಗೆ ನಾಲ್ವರು ಸೇರ್ಪಡೆ: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಹರಾಜಿನಲ್ಲಿ ನಾಲ್ವರು ಆಟಗಾರ್ತಿಯರನ್ನು ಸೇರಿಸಿಕೊಂಡಿತು. ಉತ್ತರಾಖಂಡದ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ (₹1.2 ಕೋಟಿ), ಕೇರಳದ ವಿಜೆ ಜೋಶಿತಾ (₹10 ಲಕ್ಷ), ರಾಘವಿ ಬಿಷ್ಟ್ (₹10 ಲಕ್ಷ), ಜಾಗ್ರವಿ ಪವಾರ್ (₹ 10ಲಕ್ಷ) ಹೊಸ ಸೇರ್ಪಡೆ. ಇದರಿಂದ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿಯಲ್ಲಿ ಏಕೈಕ ಕನ್ನಡತಿಯಾಗಿಯೇ ಉಳಿದರು.

ಇತರ ತಂಡಗಳ ಹೊಸ ಸೇರ್ಪಡೆ: ಗುಜರಾತ್ ಜೈಂಟ್ಸ್: ಸಿಮ್ರಾನ್ ಶೇಖ್ (₹1.90 ಕೋಟಿ), ಡಿಯೆಂಡ್ರಾ ಡಾಟಿನ್ (₹1.70 ಕೋಟಿ), ಡೇನಿಯಲ್ ಗಿಬ್ಸನ್ (₹30 ಲಕ್ಷ), ಪ್ರಕಾಶಿಕ ನಾಯ್ಕ (₹10 ಲಕ್ಷ). ಮುಂಬೈ ಇಂಡಿಯನ್ಸ್: ಜಿ.ಕಮಲಿನಿ (₹1.60 ಕೋಟಿ), ನಡೀನ್ ಡಿಕ್ಲಾರ್ಕ್ (₹30 ಲಕ್ಷ), ಅಕ್ಷಿತಾ ಮಹೇಶ್ವರಿ (₹20 ಲಕ್ಷ), ಸಂಸ್ಕೃತಿ ಗುಪ್ತಾ (₹10 ಲಕ್ಷ). ಯುಪಿ ವಾರಿಯರ್ಸ್‌: ಅಲನ್ ಕಿಂಗ್ (₹30 ಲಕ್ಷ), ಅರುಷಿ ಗೋಯಲ್ (₹10 ಲಕ್ಷ), ಕ್ರಾಂತಿ ಗೌಡ್ (₹10 ಲಕ್ಷ), ಡೆಲ್ಲಿ ಕ್ಯಾಪಿಟಲ್ಸ್: ಎನ್.ಚರಣಿ (₹55 ಲಕ್ಷ), ನಂದಿನಿ ಕಶ್ಯಪ್ (₹10 ಲಕ್ಷ), ಸಾರಾ ಬ್ರೈಸ್ (₹10 ಲಕ್ಷ), ನಿಕ್ಕಿ ಪ್ರಸಾದ್ (₹10 ಲಕ್ಷ).

ಅನ್‌ಸೋಲ್ಡ್ ಆಗಿದ್ದ ಸಿಮ್ರಾನ್!

ಈ ಬಾರಿಯ ಮಿನಿ ಹರಾಜಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರ ಬದಲಿಗೆ ದೇಶೀಯ ಟೂರ್ನಿಯಲ್ಲಿ ಗಮನ ಸೆಳೆದ ಪ್ರತಿಭೆಗಳ ಖರೀದಿಗೆ ್ರಾಂಚೈಸಿಗಳು ಆಸಕ್ತಿ ತೋರಿದವು. 2023ರಲ್ಲಿ ₹10 ಲಕ್ಷಕ್ಕೆ ಯುಪಿ ವಾರಿಯರ್ಸ್‌ ಪರ ಆಡಿದ್ದ 22 ವರ್ಷದ ಸಿಮ್ರಾನ್ ಈ ಬಾರಿ ಕೋಟಿ ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು. ಕಳೆದ ವರ್ಷದ ಹರಾಜಿನಲ್ಲಿ ಸಿಮ್ರಾನ್ ಅನ್‌ಸೋಲ್ಡ್ ಆಗಿದ್ದರು.

ಡೆಲ್ಲಿ ತೆಕ್ಕೆಗೆ ನಿಕಿ ಪ್ರಸಾದ್

19 ವಯೋಮಿತಿ ಭಾರತ ಮಹಿಳಾ ತಂಡದ ನಾಯಕಿ ನಿಕಿ ಪ್ರಸಾದ್ ಹರಾಜಿನಲ್ಲಿ ಸೇಲಾದ ಏಕೈಕ ಕನ್ನಡತಿ ಎನಿಸಿದರು. ಮೂಲಬೆಲೆ ₹ 10 ಲಕ್ಷ ನೀಡಿ ಹಾಲಿ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತು. ಮೊದಲ ಸುತ್ತಿನಲ್ಲಿ ಯಾವುದೇ ಬಿಡ್ ಪಡೆಯದ ನಿಕಿ, ಎರಡನೇ ಹಾಗೂ ಅಂತಿಮ ಸುತ್ತಿನಲ್ಲಿ ಡೆಲ್ಲಿ ತಂಡ ಸೇರಿದರು. ಹರಾಜು ಕಣದಲ್ಲಿದ್ದ ಇತರ ಕನ್ನಡತಿಯರಾದ ಶುಭಾ ಸತೀಶ್, ಸಿ. ಪ್ರತ್ಯೂಷ ಹಾಗೂ ಪ್ರತ್ಯೂಷ ಕುಮಾರ್ ಖರೀದಿಗೆ ಯಾವ ್ರಾಂಚೈಸಿಗಳೂ ಆಸಕ್ತಿ ತೋರಲಿಲ್ಲ.

ಪ್ರಮುಖ ಅನ್‌ಸೋಲ್ಡ್

ಭಾರತ ಹಾಗೂ ಗುಜರಾತ್ ತಂಡದಿಂದ ಕೈಬಿಡಲಾಗಿರುವ ಆಲ್ರೌಂಡರ್ ಸ್ನೇಹಾ ರಾಣಾ, ಇಂಗ್ಲೆಂಡ್ ನಾಯಕಿ ಹೀದರ್ ನೈಟ್, ಲೌರೆನ್ ಬೆಲ್, ಸಾರಾ ಗ್ಲೆನ್, ಕಿಮ್ ಗಾರ್ತ್, ಆಸೀಸ್‌ನ ಹೀದರ್ ಗ್ರಹಾಂ, ಲೌರಾ ಹ್ಯಾರಿಸ್, ಪೂನಮ್ ಯಾದವ್, ತೇಜಲ್ ಹಸಬೈನ್ಸ್ ಹರಾಜಿನ ಎರಡು ಸುತ್ತಿನಲ್ಲಿಯೂ ಸೇಲಾಗದೆ ಉಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net