ಇಂದು ಮುಂಬೈ ಇಂಡಿಯನ್ಸ್- ಡೆಲ್ಲಿ ಹಣಾಹಣಿ; ಗೆಲುವಿನ ಒತ್ತಡದಲ್ಲಿ ರೋಹಿತ್ ಬಳಗ

mumbai and delhi for web
Published on

ಶಾರ್ಜಾ: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಟ್ರ್ಯಾಕ್‌ಗೆ ಮರಳಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಶಾರ್ಜಾ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಕದನ ಮುಂಬೈ ಇಂಡಿಯನ್ಸ್ ಪಾಲಿಗೆ ಮಹತ್ವ ಪಡೆದಿದೆ. ರೋಹಿತ್ ಶರ್ಮ ಬಳಗಕ್ಕೆ ಗೆಲುವೊಂದೇ ಮಂತ್ರವಾಗಿದ್ದು, ಡೆಲ್ಲಿ ಎದುರು ನಿರಾಸೆ ಅನುಭವಿಸಿದರೆ ಮುಂದಿನ ಹಾದಿ ಮತ್ತಷ್ಟು ಕಠಿಣವಾಗಲಿದೆ. ಮತ್ತೊಂದೆಡೆ, ಪ್ಲೇಆಫ್ ಸನಿಹದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನ ಹಳಿಗೇರುವ ಭರವಸೆಯಲ್ಲಿದೆ. ಅರಬ್‌ನಾಡಿನಲ್ಲಿ ಆಡಿದ ಆರಂಭಿಕ 2 ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿದ್ದ ಡೆಲ್ಲಿ, ಹಿಂದಿನ ಪಂದ್ಯದಲ್ಲಿ ಕೆಕೆಆರ್ ಎದುರು ನೀರಸ ನಿರ್ವಹಣೆ ತೋರಿತ್ತು.

* ಒತ್ತಡದಲ್ಲಿ ಮುಂಬೈ ಇಂಡಿಯನ್ಸ್
ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಅರಬ್‌ನಾಡಿಯಲ್ಲಿ ಆಡಿದ ಆರಂಭಿಕ ಮೂರು ಪಂದ್ಯಗಳಲ್ಲೂ ಮುಗ್ಗರಿಸಿದ ಮುಂಬೈ ಇಂಡಿಯನ್ಸ್ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಗೆಲುವಿನ ನಗೆ ಬೀರಿತ್ತು. ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ 5 ಜಯ, 6 ಸೋಲು ಕಂಡಿರುವ ರೋಹಿತ್ ಶರ್ಮ ಬಳಗ 10 ಅಂಕ ಸಂಪಾದಿಸಿದ್ದು, ಪ್ಲೇಆ್ ಹಂತಕ್ಕೇರಲು ಉಳಿದ ಮೂರು ಪಂದ್ಯಗಳಲ್ಲೂ ಗೆಲುವಿನ ಒತ್ತಡದಲ್ಲಿ ಸಿಲುಕಿದೆ. ಕನಿಷ್ಠ ಒಂದು ಪಂದ್ಯ ಸೋತರೂ ಮುಂಬೈ ಇಂಡಿಯನ್ಸ್ ತಂಡದ ಹಾದಿ ಕಠಿಣವಾಗಲಿದೆ. ತಂಡಕ್ಕೆ ಸ್ಟಾರ್ ಬ್ಯಾಟ್ಸ್‌ಮನ್‌ಗಳೇ ಕೈಕೊಡುತ್ತಿರುವುದು ಹಿನ್ನಡೆಯಾಗಿದೆ. ರೋಹಿತ್ ಶರ್ಮ, ಕ್ವಿಂಟನ್ ಡಿಕಾಕ್ ಆರಂಭಿಕ ಹಂತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಫೋಟಿಸುತ್ತಿಲ್ಲ, ಸೂರ್ಯಕುಮಾರ್ ಯಾದವ್ ಸತತವಾಗಿ ವಿಫಲರಾಗುತ್ತಿದ್ದಾರೆ. ಪಂಜಾಬ್ ಎದುರು ಹಾರ್ದಿಕ್ ಪಾಂಡ್ಯ (40*) ಫಾರ್ಮ್ ಕಂಡುಕೊಂಡಿದ್ದು ಸಮಾಧಾನಕರ ವಿಷಯ. ವೇಗಿ ಜಸ್‌ಪ್ರೀತ್ ಬುಮ್ರಾ ಲಯ ಉಳಿಸಿಕೊಂಡಿದ್ದರೆ, ರಾಹುಲ್ ಚಹರ್, ಕೃನಾಲ್ ಪಾಂಡ್ಯ ಅರಬ್‌ನಾಡಿನಲ್ಲಿ ಇದುವರೆಗೆ ಮಿಂಚಿಲ್ಲ
* ಪುಟಿದೇಳುವ ವಿಶ್ವಾಸದಲ್ಲಿ ಡೆಲ್ಲಿ
ಯುಎಇಯಲ್ಲಿ ಆಡಿದ ಆರಂಭಿಕ ಎರಡೂ ಪಂದ್ಯಗಳಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಡೆಲ್ಲಿ ತಂಡ, ಕೆಕೆಆರ್ ಎದುರು ಹೀನಾಯ ಸೋಲು ಕಂಡಿತ್ತು. 9 ವಿಕೆಟ್‌ಗೆ 127 ರನ್‌ಗಳಿಸಲಷ್ಟೇ ಶಕ್ತವಾಗಿತ್ತು. ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಸ್ಟಿವನ್ ಸ್ಮಿತ್ ಸ್ಫೋಟಿಸಲು ವಿಫಲರಾಗಿದ್ದರು. ಮುಂಬೈ ಎದುರು ಜಯ ದಾಖಲಿಸಿದರೆ 2ನೇ ತಂಡವಾಗಿ ಪ್ಲೇಆಫ್  ಖಾತ್ರಿಪಡಿಸಿಕೊಳ್ಳಲಿದೆ. ಸದ್ಯ 11 ಪಂದ್ಯಗಳಿಂದ 16 ಪಾಯಿಂಟ್ಸ್ ಹೊಂದಿರುವ ಡೆಲ್ಲಿ ತಂಡ 2ನೇ ಸ್ಥಾನದಲ್ಲಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಮುಖಾಮುಖಿ: 29, ಮುಂಬೈ: 16, ಡೆಲ್ಲಿ: 13
ಹಿಂದಿನ ಮುಖಾಮುಖಿ: ಡೆಲ್ಲಿ ತಂಡಕ್ಕೆ 6 ವಿಕೆಟ್ ಜಯ
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net