

ನವದೆಹಲಿ: ಐಪಿಎಲ್ 17ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದ ಮಹೇಂದ್ರ ಸಿಂಗ್ ಧೋನಿ, ತಮ್ಮ ನಾಯಕತ್ವವನ್ನು ಓಪನಿಂಗ್ ಬ್ಯಾಟ್ಸ್ಮನ್ ರುತುರಾಜ್ ಗಾಯಕ್ವಾಡ್ಗೆ ಹಸ್ತಾಂತರಿಸುವ ಮೂಲಕ ನಿವೃತ್ತಿ ಮುನ್ಸೂಚನೆಯನ್ನು ಮತ್ತಷ್ಟು ಬಲಪಡಿಸಿದರು. 43 ವರ್ಷ ವಯಸ್ಸಿನ ಮಾಹಿ ಇಂದಿಗೂ ಕೂಡ ಮೈದಾನಕ್ಕಿಳಿದರೆ ಯುವ ಆಟಗಾರರೇ ಆಶ್ಚರ್ಯಪಡುವ ರೀತಿ ಸ್ಪೋಟಕ ಇನ್ನಿಂಗ್ಸ್ ನೀಡುವ ದಿಗ್ಗಜ ಆಟಗಾರ. ಆದ್ರೆ, ಕಳೆದ ಸೀಸನ್ನಲ್ಲಿ ಫಿಟ್ನೆಸ್ ಸಮಸ್ಯೆ ಅವರನ್ನು ಕಾಡಲಾರಂಭಿಸಿತ್ತು. ಈ ಹಿನ್ನಲೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕ್ಯಾಪ್ಟನ್ ಕೂಲ್ ಆಡುವುದು ಬಹುತೇಕ ಡೌಟ್ ಎಂದೇ ಹೇಳಲಾಗಿದೆ. ಇನ್ನು ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿ ಯಾವುದೇ ರೀತಿ ಮಾತುಕತೆ ನಡೆಸಿಲ್ಲ. ಇದು ಹಲವರಿಗೆ ಖುಷಿ ತಂದರೆ, ಇನ್ನೂ ಕೆಲವರಿಗೆ ಗೊಂದಲ ತಂದೊಡ್ಡಿದೆ. ಪ್ರತಿಬಾರಿ ಯಾವುದೇ ನಿರ್ಣಯ ತಿಳಿಸುವುದಾದರೂ ತಮ್ಮದೇ ಶೈಲಿಯಲ್ಲಿ ಹೇಳುವ ಧೋನಿ, ನಿವೃತ್ತಿ ಘೋಷಿಸುತ್ತಾರಾ? ಅಥವಾ ಮುಂದಿನ ಐಪಿಎಲ್ನಲ್ಲಿ ಆಡಲಿದ್ದಾರಾ? ಎಂಬುದೇ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಒಂದಷ್ಟು ವರದಿಗಳ ಪ್ರಕಾರ, ಧೋನಿ ಮುಂದಿನ ಸೀಸನ್ಗೆ ಬರುವುದಿಲ್ಲ ಎಂದೇ ಹೇಳಲಾಗಿದೆ. ಆದ್ರೆ, ಕ್ಯಾಪ್ಟನ್ ಕೂಲ್ ನಿರ್ಧಾರವೇನು ಎಂಬುದು ಸದ್ಯ ಯಾರೂ ಅರಿಯದ ವಿಷಯವಾಗಿದೆ. ಇತ್ತೀಚೆಗಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕರಾದ ಎನ್. ಶ್ರೀನಿವಾಸನ್ ಅವರೊಂದಿಗೆ ಮಾತನಾಡಿರುವ ಎಂ.ಎಸ್. ಧೋನಿ, ತಮ್ಮ ಮುಂದಿನ ನಿಲುವಿನ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಸಿಎಸ್ಕೆ ಎಷ್ಟು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂಬುದರಲ್ಲಿ ಅಡಗಿದೆ ಧೋನಿ ಎಂಟ್ರಿ!
ಸಿಎಸ್ಕೆ ತಂಡದಲ್ಲಿ ಉಳಿಸಿಕೊಂಡಿರುವ ಆಟಗಾರರ ಸಂಖ್ಯೆ ಐದು ಅಥವಾ ಆರು ಇದ್ದರೆ, ಧೋನಿ ಲೀಗ್ನಲ್ಲಿ ಆಡುವ ಅವಕಾಶ ಹೆಚ್ಚಿದೆ. ಈ ಹಿಂದೆ 2018ರಲ್ಲಿ ಫ್ರಾಂಚೈಸಿಗಳು ಪ್ರತಿ ಸೀಸನ್ನಲ್ಲಿ ಐದು ಆಟಗಾರರನ್ನು ಇರಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿತ್ತು. ಆದರೆ 2022ರಲ್ಲಿ ಅದನ್ನು ನಾಲ್ಕಕ್ಕೆ ಇಳಿಸಿತು. ಈಗ 2025ರ ಐಪಿಎಲ್ಗೂ ಮುನ್ನ ಎಷ್ಟು ಆಟಗಾರರನ್ನು ಸಿಎಸ್ಕೆ ಉಳಿಸಿಕೊಳ್ಳಲಿದೆ ಹಾಗೂ ಶೀಘ್ರವೇ ಇದರ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ. ಧೋನಿ ಮುಂದಿನ ಸೀಸನ್ ಆಡುವ ಬಯಕೆ ವ್ಯಕ್ತಪಡಿಸಿದರೆ ಖಂಡಿತ ಅವರನ್ನು ಚೆನ್ನೈ ಪಡೆ ರಿಟೈನ್ ಮಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ,(ಏಜೆನ್ಸೀಸ್).