ಮುಂದಿನ ಸೀಸನ್​ ಆಡೋದು... ಕಡೆಗೂ ನಿವೃತ್ತಿ ಕುರಿತು 'ಕ್ಯಾಪ್ಟನ್​ ಕೂಲ್' ಮನದಾಳ! ಧೋನಿಗೆ ತಲೆಬಾಗಿದ ಫ್ಯಾನ್ಸ್​ | MS Dhoni

ವಿಜಯವಾಣಿ - 2025-05-25T195323.568
Published on

MS Dhoni: ಇಂದು (ಮೇ.25) ಅಹಮದಾಬಾದ್​ನ ಕ್ರೀಡಾಂಗಣದಲ್ಲಿ ನಡೆದ ಜಿಟಿ ಮತ್ತು ಸಿಎಸ್​ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಎದುರು ಧೋನಿ ಪಡೆ 83 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಐಪಿಎಲ್​ 18ನೇ ಆವೃತ್ತಿಗೆ ಸಿಎಸ್​ಕೆ ವಿದಾಯ ಹೇಳಿತು.

ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್​, ಕೊನೆಯ ಐಪಿಎಲ್ ಪಂದ್ಯದಲ್ಲಿ ಭಾರೀ ಅಂತರದಲ್ಲಿ ಗೆದ್ದು ಸೀಸನ್​ ಮುಗಿಸಿದ್ದು ಫ್ರಾಂಚೈಸಿ ಅಭಿಮಾನಿಗಳಲ್ಲಿ ಖುಷಿ ತಂದಿತು. ಐದು ಬಾರಿ ಚಾಂಪಿಯನ್ಸ್ ಆಗಿ ಐಪಿಎಲ್​ ಇತಿಹಾಸದಲ್ಲಿ ವಿಶೇಷ ದಾಖಲೆ ಹೊಂದಿರುವ ಧೋನಿ ಪಡೆ, ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ಪ್ರದರ್ಶನ ಮೂಲಕ ಪ್ಲೇಆಫ್​ನಿಂದ ದೂರ ಸರಿಯಿತು. ಇಷ್ಟಾದರೂ ಆವೃತ್ತಿಯ ಕೊನೆಯಲ್ಲಿ ಗೆಲುವಿನ ಮೂಲಕ ವಿದಾಯ ಹೇಳಿದ್ದು 'ಕ್ಯಾಪ್ಟನ್ ಕೂಲ್'​ ಅಭಿಮಾನಿಗಳಿಗೆ 'ಕೂಲ್​' ಅನಿಸಿತು.

ಮುಂದಿನ ಸೀಸನ್ ಕುರಿತು ಧೋನಿ ಮನದಾಳ

ಈಗಾಗಲೇ ಧೋನಿ ನಿವೃತ್ತಿ ಕುರಿತು ಸಾಕಷ್ಟು ವದಂತಿಗಳು ಹರಿದಾಡುತ್ತಿತ್ತು. ಇದೇ 'ಕ್ಯಾಪ್ಟನ್ ಕೂಲ್' ಅವರ ಕೊನೆಯ ಸೀಸನ್ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬಂದಿತ್ತು. ಇದೇ ಪ್ರಶ್ನೆಯನ್ನು ಮತ್ತೊಮ್ಮೆ ಧೋನಿ ಮುಂದಿಟ್ಟ ಹರ್ಷ ಭೋಗ್ಲೆ, ಮುಂದಿನ ವರ್ಷದ ಐಪಿಎಲ್​ಗೆ ಮರಳುತ್ತೀರಾ? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಧೋನಿ, "ಪ್ರತಿಬಾರಿ ಇಲ್ಲಿ ಬಂದು ಆಡುವುದು ಬಹಳ ಖುಷಿ ಅನಿಸುತ್ತೆ. ನನಗೂ ವಯಸ್ಸಾಗುತ್ತಿದೆ ಎಂಬುದು ಯುವ ಆಟಗಾರರನ್ನು ನೋಡಿದಾಗ, ಮಾತನಾಡಿಸಿದಾಗ ತಿಳಿಯುತ್ತೆ. ಮುಂದಿನ ಆವೃತ್ತಿಗೆ ಲಗ್ಗೆಯಿಡುವ ಬಗ್ಗೆ ನಿರ್ಧಾರ ಮಾಡಲು ಇನ್ನೂ 4-6 ತಿಂಗಳ ಸಮಯವಿದೆ. ಮನೆಯಿಂದ ತುಂಬ ದಿನ ದೂರ ಇದ್ದೀನಿ. ಮೊದಲು ಮನೆಗೆ ಹೋಗಿ, ಸಮಯ ಕಳೆದು, ಬೈಕ್​ ರೈಡ್​ ಆನಂದಿಸಬೇಕು. ಆ ನಂತರ ನನ್ನ ದೇಹ ಹೇಗೆ ಬೆಂಬಲಿಸುತ್ತೆ ಅನ್ನೋದನ್ನು ನೋಡಿಕೊಂಡು ನಿರ್ಧರಿಸುವೆ" ಎಂದರು. ಈ ಮೂಲಕ ಇದೇ ತಮ್ಮ ಕೊನೆಯ ಆವೃತ್ತಿ ಎಂಬ ವದಂತಿಗಳಿಗೆ ತಾತ್ಕಾಲಿಕ ತೆರೆ ಎಳೆದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net