18ನೇ ಓವರ್​ಗೆ ಎಂಟ್ರಿ ಕೊಡುವಂತೆ ತಂಡ ಕಟ್ಟಬೇಕು! ಧೋನಿ ಭವಿಷ್ಯ ಕುರಿತು ಮಾಜಿ ಕ್ರಿಕೆಟಿಗ ಕಿವಿಮಾತು | MS Dhoni

ವಿಜಯವಾಣಿ - 2025-05-23T121057.048
Published on

MS Dhoni: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ 18ನೇ ಆವೃತ್ತಿ ಇದೀಗ ಕೊನೆ ಹಂತಕ್ಕೆ ಸನ್ನಿಹಿತವಾಗಿದ್ದು, ಪ್ಲೇಆಫ್​ ಪಂದ್ಯಗಳಿಗೆ ದಿನಗಣನೆ ಆರಂಭಗೊಂಡಿದೆ. ರಾಯಲ್​ ಚಾಲೆಂಜರ್ಸ್​​ ಬೆಂಗಳೂರು, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಈಗಾಗಲೇ ಪ್ಲೇಆಫ್​ಗೆ ಲಗ್ಗೆಯಿಟ್ಟಿವೆ. ಈ ಮಧ್ಯೆ 18ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್​, ಐಪಿಎಲ್​ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಅಲಂಕರಿಸಿದೆ. ಇದು ಕೇವಲ ಫ್ರಾಂಚೈಸಿ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಕ್ರಿಕೆಟ್​ ಬಳಗಕ್ಕೆ ಅಚ್ಚರಿ ತಂದಿದೆ.

ಐಪಿಎಲ್ ಮೊದಲಾರ್ಧದಲ್ಲಿ ರುತುರಾಜ್ ಗಾಯಕ್ವಾಡ್ ಕ್ಯಾಪ್ಟನ್ಸಿಯಲ್ಲಿ ಸರಣಿ ಸೋಲುಂಡ ಸಿಎಸ್​ಕೆಗೆ ದ್ವಿತೀಯಾರ್ಧದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವವು ಗೆಲುವು ತಂದುಕೊಡಲಿಲ್ಲ. ಇದು ಹಲವರ ಆಶ್ಚರ್ಯಕ್ಕೆ ಕಾರಣವಾಯಿತು. ಧೋನಿ ಮುಂದಾಳತ್ವದಲ್ಲಿಯೂ ಸರಣಿ ಸೋಲಿಗೆ ಗುರಿಯಾಗಿರುವ ಸಿಎಸ್​ಕೆ, ಕೊನೆ ಕ್ಷಣಗಳಲ್ಲಿ ಸಹ ಗೆಲುವನ್ನು ನೋಡಲು ಸಾಧ್ಯವಾಗದಿರುವುದು ದುರಾದೃಷ್ಟ. ಈ ಮಧ್ಯೆ ಸಿಎಸ್​ಕೆ ನಾಯಕನ ಭವಿಷ್ಯ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಈ ಸೀಸನ್​ ಮುಗಿದ ನಂತರ ಮತ್ತೊಂದು ಸೀಸನ್​ನಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂದರು.

"ಮುಂದಿನ ಐಪಿಎಲ್​ ಆವೃತ್ತಿಗೆ ಧೋನಿ ಕಣಕ್ಕಿಳಿಯಲಿದ್ದಾರೆ. ತಾವು 18ನೇ ಓವರ್​ನಲ್ಲಿ ಬ್ಯಾಟಿಂಗ್ ಬರುವಂತ ಒಂದೊಳ್ಳೆ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಬರುತ್ತಾರೆ. ಈ ಸೀಸನ್​ನಲ್ಲಿ ಧೋನಿ ಬಹಳ ಬೇಗ ಕ್ರೀಸ್​ಗೆ ಬಂದು ಬ್ಯಾಟ್ ಮಾಡಿದ್ದಾರೆ. 4-5 ಕ್ರಮಾಂಕಗಳಲ್ಲಿ ಹೆಚ್ಚಾಗಿ ಆಡಿದ್ದಾರೆ. ಇಲ್ಲಿ ಚೆನ್ನೈ ಪರ ಧೋನಿ ಆಟವನ್ನು ಅದಾಗಲೇ ಶುರು ಮಾಡಿದ್ದಾರೆ. ಆದರೆ, ಉಳಿದವರು ಇನ್ನೂ ಯೋಚಿಸುವುದರಲ್ಲೇ ಇದ್ದಾರೆ. ಹೊಸ ತಂಡವನ್ನು ಕಟ್ಟಲು ಸಿಎಸ್​ಕೆ ಕೆಲವರನ್ನು ರಿಲೀಸ್ ಮಾಡುವುದೇ ಉತ್ತಮ" ಎಂದು ಆಕಾಶ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net