ಜಾಲತಾಣದಲ್ಲಿ ಮಿಂಚು ಹರಿಸುತ್ತಿರುವ ಹುಲಿಯ ಅದ್ಭುತ ಚಿತ್ರ ಕ್ಲಿಕ್ಕಿಸಿದ್ದು ಟೀಮ್​ ಇಂಡಿಯಾದ ಪ್ರಖ್ಯಾತ ಕ್ರಿಕೆಟಿಗ!

Tiger Dhoni
Published on

ನವದೆಹಲಿ: ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಏಕದಿನ ಸರಣಿ ಸೋತ ಬಳಿಕ ಮಾಜಿ ನಾಯಕ ಎಂ.ಎಸ್​. ಧೋನಿಯ ಉಪಸ್ಥಿತಿ ಬಗ್ಗೆ ವ್ಯಾಪಕ ಕೂಗು ಕೇಳಿಬಂದಿತ್ತು. ಆದರೆ, ಕಳೆದ ವರ್ಷದ ವಿಶ್ವಕಪ್​ ಸೆಮಿಫೈನಲ್​ನಲ್ಲಿ ತಂಡ ಹೊರಬಿದ್ದಿದೇ ತಡ ಈವರೆಗೂ ಧೋನಿ ತಂಡವನ್ನು ಸೇರಿಕೊಂಡಿಲ್ಲ. ಇದರ ನಡುವೆ ನಿವೃತ್ತಿಯ ಮಾತುಗಳು ಕೂಡ ಕೇಳಿಬರುತ್ತಿದ್ದು, ಸದ್ಯ ಕ್ರಿಕೆಟ್​ನಿಂದ ಧೋನಿ ಕೊಂಚ ದೂರ ಉಳಿದಿದ್ದರೂ ತಮ್ಮ ವಿಶೇಷತೆಯಿಂದ ಮತ್ತೊಮ್ಮೆ ಅಭಿಮಾನಿಗಳ ಎದುರಿಗೆ ಬಂದಿದ್ದಾರೆ.

ಹೌದು, ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಧೋನಿ ಅವರು ತಮ್ಮ ಅಭಿಮಾನಿಗಳಿಗೆ ಆಗಾಗ ಸರ್ಪ್ರೈಸ್​ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತಾರಣ್ಯಕ್ಕೆ ಭೇಟಿ ನೀಡಿದ್ದ ಧೋನಿ, ಸ್ವತಃ ತಾವೇ ಸೆರೆ ಹಿಡಿದ ಹುಲಿಯ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ದಾರಿಯಲ್ಲಿ ಯಾವಾಗ ಹುಲಿ ಇರುವುದನ್ನು ಗಮನಿಸುತ್ತೀರಾ ಫೋಟೋ ತೆಗೆಯಲು ಅದೇ ನಿಮಗೆ ಸಹಕರಿಸುತ್ತದೆ ಎಂದು ತಮಾಷೆಯಾಗಿ ಬರೆದು, ಶೇರ್​ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿರುವ ಫೋಟೋ ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಧೋನಿ ಮತ್ತೆ ಟೀಮ್​ ಇಂಡಿಯಾ ಜರ್ಸಿ ತೊಡಲಿದ್ದಾರಾ ಎಂಬ ಪ್ರಶ್ನೆಗೆ ಈವರೆಗೂ ಯಾವುದೇ ಉತ್ತರ ಬಂದಿಲ್ಲ. ಅಲ್ಲದೆ, ಬಿಸಿಸಿಐ ಒಪ್ಪಂದದ ಪಟ್ಟಿಯಿಂದಲೂ ಧೋನಿಯನ್ನು ಕೈಬಿಟ್ಟಿರುವುದು ಧೋನಿ ಕ್ರಿಕೆಟ್​ ಜೀವನದ ಬಗ್ಗೆ ಅನುಮಾನ ಸೃಷ್ಟಿಯಾಗಿದೆ. ಟೀಮ್​ ಇಂಡಿಯಾ ಮುಡಿಗೆ ಮತ್ತೊಂದು ವಿಶ್ವಕಪ್​ ಗರಿ ತಂದುಕೊಟ್ಟ ಧೋನಿ ಅವರನ್ನು ಮತ್ತೆ ಕ್ರೀಡಾಂಗಣದಲ್ಲಿ ನೋಡಬೇಕೆಂದು ಸಾಕಷ್ಟು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಆದರೆ, ಅದಕ್ಕೆ ಯಾವಾಗ ಕಾಲ ಕೂಡಿ ಬರುತ್ತದೋ ನೋಡಬೇಕು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net