

ಮುಂಬೈ: ಕಳೆದ 16 ಆವೃತ್ತಿಗಳಲ್ಲಿ ತಲಾ 5ರಂತೆ 10 ಬಾರಿ ಚಾಂಪಿಯನ್ ಅಲಂಕರಿಸಿರುವ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ಕಿಂಗ್ಸ್ ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿವೆ. ರೋಹಿತ್ ಶರ್ಮ-ಎಂಎಸ್ ಧೋನಿಗೆ ಬದಲಾಗಿ ಉಭಯ ತಂಡಗಳು ಈ ಬಾರಿ ಹೊಸ ನಾಯಕರನ್ನು ಹೊಂದಿದ್ದು, ಈ ಹಿಂದಿನ ಜಿದ್ದಾಜಿದ್ದಿನ ಪೈಪೋಟಿ ಈ ಸಲವೂ ಮುಂದುವರಿಯುವ ನಿರೀಕ್ಷೆ ಇದೆ.
ಐಪಿಎಲ್ನ ಒಟ್ಟಾರೆ ಮುಖಾಮುಖಿ ದಾಖಲೆಯಲ್ಲಿ ಮುಂಬೈ ತಂಡ ಮೇಲುಗೈ ಹೊಂದಿದ್ದರೂ, ಉಭಯ ತಂಡಗಳ ಕೊನೇ 5 ಮುಖಾಮುಖಿಗಳಲ್ಲಿ 4ರಲ್ಲಿ ಸಿಎಸ್ಕೆ ತಂಡವೇ ಜಯಿಸಿದೆ. ಈ ಪೈಕಿ ಕಳೆದ ಆವೃತ್ತಿಯಲ್ಲಿ ವಾಂಖೆಡೆಯಲ್ಲೇ ನಡೆದ ಪಂದ್ಯವೂ ಸೇರಿದೆ. ಆದರೆ ಐಪಿಎಲ್ ಫೈನಲ್ನಲ್ಲಿ 3 ಬಾರಿ ಸಿಎಸ್ಕೆ ತಂಡವನ್ನೇ ಮಣಿಸಿ ಪ್ರಶಸ್ತಿ ಗೆದ್ದಿರುವ ಬಲಿಷ್ಠ ದಾಖಲೆ ಮುಂಬೈ ತಂಡದ್ದಾಗಿದೆ. ಹೀಗಾಗಿ ಈ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ. ಉಭಯ ತಂಡಗಳು ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನೂ ಹೊಂದಿದ್ದು, ವಾಂಖೆಡೆಯಲ್ಲಿ ರನ್ಮಳೆಯಾಗುವ ನಿರೀಕ್ಷೆಯೂ ಇದೆ.
ಸಿಎಸ್ಕೆಗೆ ತವರಿನಿಂದ ಹೊರಗೆ ಗೆಲ್ಲದ ಹಿನ್ನಡೆ
ಋತುರಾಜ್ ಗಾಯಕ್ವಾಡ್ ಸಾರಥ್ಯದಲ್ಲಿ ಸಿಎಸ್ಕೆ ತಂಡ "ತವರಿನಲ್ಲಿ ಹುಲಿ, ಹೊರಗೆ ಇಲಿ' ಎಂಬಂತಾಗಿದೆ. ಸಿಎಸ್ಕೆ ತಂಡ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದು, 2ರಲ್ಲಿ ಸೋತಿದೆ. ಈ ಪೈಕಿ ಮೂರೂ ಗೆಲುವುಗಳು ತವರಿನಲ್ಲೇ ಬಂದಿದ್ದರೆ, ತವರಿನಿಂದ ಹೊರಗೆ ಆಡಿರುವ 2 ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ಹೀಗಾಗಿ ಈ ಬಾರಿ ಎದುರಾಳಿ ನೆಲದಲ್ಲೂ ಗೆದ್ದು ತೋರಿಸುವ ಒತ್ತಡ ಸಿಎಸ್ಕೆ ತಂಡದ ಮೇಲಿದೆ. ಕಳೆದ ಪಂದ್ಯದಲ್ಲಿ ಆರ್ಸಿಬಿ ಎದುರು ಆರ್ಭಟ ತೋರಿದ ಮುಂಬೈ ಬ್ಯಾಟಿಂಗ್ ವಿಭಾಗ ಸಿಎಸ್ಕೆ ಬೌಲರ್ಗಳಿಗೆ ಪ್ರಮುಖ ಸವಾಲಾಗಲಿದೆ. ಚೆಪಾಕ್ನ ಸ್ಲೋ ಪಿಚ್ನಲ್ಲಿ ಸಿಎಸ್ಕೆ ಬೌಲರ್ಗಳು ಪ್ರಾಬಲ್ಯ ತೋರಿದ್ದರೂ, ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಅವರಿಗೆ ನಿಜವಾದ ಸತ್ವ ಪರೀೆ ಎದುರಾಗಲಿದೆ.
ವಿಶ್ವಾಸದಲ್ಲಿ ಹಾರ್ದಿಕ್ ಬಳಗ
ಆರಂಭಿಕ 3 ಪಂದ್ಯಗಳ ಸೋಲಿನ ಬಳಿಕ ಮುಂಬೈ ಸತತ 2 ಜಯದೊಂದಿಗೆ ಪುಟಿದೆದ್ದಿದೆ. ಆದರೆ ಇವೆರಡೂ ಗೆಲುವುಗಳು ಅಂಕಪಟ್ಟಿಯ ಕೊನೇ 2 ಸ್ಥಾನದಲ್ಲಿರುವ ತಂಡಗಳ ಎದುರು ಬಂದಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ಸಿಎಸ್ಕೆ ಎದುರು ಮುಂಬೈಗೆ ರಿಯಲ್ ಟೆಸ್ಟ್ ಎದುರಾಗಲಿದೆ. ಸೂರ್ಯಕುಮಾರ್ ತಂಡಕ್ಕೆ ಮರಳಿರುವ ನಡುವೆ ಇಶಾನ್ ಕಿಶನ್ ಲಯ ಕಂಡುಕೊಂಡಿರುವುದು ಮುಂಬೈ ಬಲ ಹೆಚ್ಚಿಸಿದೆ. ಜತೆಗೆ ಕಳೆದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾಗೆ ಇತರ ಬೌಲರ್ಗಳಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಅದರಲ್ಲೂ ಕನ್ನಡಿಗ ಹಾಗೂ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮುಂಬೈ ಪರ ಆಡಿದ ಮೊದಲ ಪಂದ್ಯದಲ್ಲೇ ಗಮನಾರ್ಹ ನಿರ್ವಹಣೆ ತೋರಿದ್ದಾರೆ.
ಮುಖಾಮುಖಿ: 36
ಮುಂಬೈ: 20
ಸಿಎಸ್ಕೆ: 16
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ.